ಟೆಲ್ ಅವೀವ್: ಭಾರತೀಯ ಪೈಲಟ್ (Indian Pilot) ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ (Smit Machchhar) ಇರಿದು ಫ್ಲೈದುಬೈ (Fly Dubai) ವಿಮಾನವನ್ನು ವಶಪಡಿಸಿಕೊಳ್ಳಲು ಯತ್ನಿಸಿದ್ದ ಒಮಾನ್ ಪೈಲಟ್ ಯಹೂದಿಗಳನ್ನು ಕೊಲ್ಲುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಿದ್ದ ಎಂದು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಜಿಹಾದಿ ಸಿದ್ದಾಂತವನ್ನು ಒಮಾನ್ ಪೈಲಟ್ ತಲೆಗೆ ತುಂಬಲಾಗಿದೆ. ಜಾಲತಾಣಗಳ ಪೋಸ್ಟ್‌ಗಳಲ್ಲಿ ಯಹೂದಿಗಳನ್ನು ಕೊಲ್ಲುವ ಬಗ್ಗೆ ಆತ ಚರ್ಚಿಸಿದ್ದಾನೆ. ಈ ವಿಚಾರ ತನಿಖೆ ವೇಳೆ ಗೊತ್ತಾಗಿದೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ‘ನನ್ನನ್ನು ಕೊಂದುಬಿಡಿ..’: ಸಹ-ಪೈಲಟ್ ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತ ಪ್ರಭಾವಕ್ಕೆ ಒಳಗಾಗಿದ್ದ ಎಂದ ನೆತನ್ಯಾಹು
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಸಹ-ಪೈಲಟ್ ಆತ್ಮಾಹುತಿ ಪ್ರವೃತ್ತಿ ಮತ್ತು ತೀವ್ರಗಾಮಿ ಚಿಂತನೆಗೆ ಒಳಗಾಗಿದ್ದ. ದಾಳಿ ಬಳಿಕ ‘ನನ್ನನ್ನು ಕೊಂದುಬಿಡಿ.. ನನ್ನನ್ನು ಕೊಂದುಬಿಡಿ’ ಎಂದು ಕೂಗಾಡಿದ್ದಾನೆ. ದಾಳಿಯ ಉದ್ದೇಶದ ಬಗ್ಗೆ ಯಾವುದೇ ಖಚಿತ ತೀರ್ಮಾನಕ್ಕೆ ಬರಲು ನಾನು ಬಯಸುವುದಿಲ್ಲ. ದಾಳಿಯ ಕುರಿತು ಯುಎಇ ಮತ್ತು ಇಸ್ರೇಲ್ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಯಾವುದೇ ಭಯೋತ್ಪಾದಕ ಚಟುವಟಿಕೆಯ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಾಳಿಕೋರನನ್ನು ಯುಎಇಗೆ ಹಸ್ತಾಂತರಿಸುವ ನಿರೀಕ್ಷೆಯಿದೆ. ಇಸ್ರೇಲ್ ಈ ಘಟನೆಯ ಬಗ್ಗೆ ಆಂತರಿಕ ತನಿಖೆಯನ್ನು ನಡೆಸುತ್ತಿದೆ ಮತ್ತು ಭದ್ರತಾ ಕಾರ್ಯವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಇರಾನ್ ಮೇಲೆ ನೇರ ಆರೋಪ ಹೊರಿಸದಿದ್ದರೂ, ಇರಾನ್ (Iran) ಕಾರಣವಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುಎಇ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ ಇರಾನ್‌ನ ಕೈವಾಡವಿದೆ ಎಂದು ಕಂಡುಬಂದರೆ ಅದರ ಮೇಲೆ ಭಾರೀ ದಾಳಿ ನಡೆಸಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ವಿಮಾನದಲ್ಲಿ ನಡೆದಿದ್ದು ಏನು?
ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲಟ್ ಕ್ರ್ಯಾಶ್ ಆಕ್ಸ್ ಬಳಸಿ ಹಲ್ಲೆ ಮಾಡಿದ್ದ. ಆಗ ಸ್ಮಿತ್ ಜೋರಾಗಿ ಕಿರುಚಿದ್ದರು. ಈ ವೇಳೆ ಮಹಿಳಾ ಪ್ರಯಾಣಿಕರು ಕೂಡಲೇ ಕಾಕ್‌ಪಿಟ್‌ಗೆ ಧಾವಿಸಿದ್ದರು. ಕೂಡಲೇ ಆಕೆ ಕಿರುಚಿಕೊಂಡು ಸಹಾಯಕ್ಕಾಗಿ ಇತರರನ್ನು ಕರೆದಿದ್ದರು.
ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿ, ದಾಳಿ ನಡೆಸುತ್ತಿದ್ದ ಓಮನ್ ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದರು. ಈ ವೇಳೆ ವಿಮಾನದಲ್ಲೇ ಪ್ರಯಾಣಿಕರಾಗಿ ಪ್ರಯಾಣಿಸುತ್ತಿದ್ದ ಟ್ರಕ್ ಚಾಲಕರೊಬ್ಬರು ಕೂಡಲೇ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಇದನ್ನೂ ಓದಿ: ಫ್ಲೈದುಬೈ ವಿಮಾನದಲ್ಲಿ ಭಾರತೀಯ ಪೈಲಟ್ ಮೇಲೆ ದಾಳಿಯ ಹಿಂದೆ ಇರಾನ್ ಕೈವಾಡ ಇರಬಹುದು: ಟ್ರಂಪ್

