– 5,500 ಪರೀಕ್ಷಾ ಕೇಂದ್ರ, 22 ಲಕ್ಷ ಅಭ್ಯರ್ಥಿಗಳಿಗೆ 2.5 ಲಕ್ಷ ಪೊಲೀಸ್ ಭದ್ರತೆ
– 1.5 ಲಕ್ಷ ಸಿಸಿಟಿವಿ ಕ್ಯಾಮೆರಾ, 15,000 ಸಿಗ್ನಲ್ ಜಾಮರ್‌ಗಳ
ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶಾದ್ಯಂತ ಸಂಚಲನ ಮೂಡಿಸಿದ್ದ ನೀಟ್-ಯುಜಿ ಮರುಪರೀಕ್ಷೆ (NEET-UG Re-Exam) ನಾಳೆ (ಜೂ.21) ದೇಶದ 551 ನಗರಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಇಂದು (ಶನಿವಾರ) ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರವ್ಯಾಪಿ ಮಾಕ್ ಡ್ರಿಲ್ ನಡೆಸಲಿದೆ.
ನೀಟ್ ಪರೀಕ್ಷೆಗೆ ಇದುವರೆಗೂ ನೋಡಿರದ ರೀತಿಯ ಭದ್ರತಾ ವ್ಯವಸ್ಥೆಯನ್ನು ಎನ್‌ಟಿಎ ನಿಯೋಜಿಸಿದ್ದು, ಈ ಸಂಬಂಧ ಇಂದು ಅಣುಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂರ್ಣ ಪ್ರಮಾಣದ ಅಭ್ಯಾಸ ನಡೆಯಲಿದೆ. ಪ್ರಶ್ನೆಪತ್ರಿಕೆ ವಿತರಣೆ, ಉತ್ತರ ಪತ್ರಿಕೆ ಸಂಗ್ರಹ ಮತ್ತು ಸಾಗಣೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಅಣುಕು ಕಾರ್ಯಾಚರಣೆ (Mega Mock Drill) ಒಳಗೊಂಡಿರಲಿದೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ಪರಿಹಾರ ನೀಡಿ – ಮೋದಿಗೆ ʻಕಾಕ್ರೋಚ್ʼ ಪತ್ರ

5,500 ಕೇಂದ್ರಗಳಿಗೆ ಹೆಚ್ಚಿನ ಭದ್ರತೆ
ನಾಳೆ ದೇಶಾದ್ಯಂತ 5,500 ಕ್ಕೂ ಪರೀಕ್ಷಾ ಕೇಂದ್ರಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದೆ. ಆಯಾ ಜಿಲ್ಲಾಡಳಿತ, ರಾಜ್ಯ ಪೊಲೀಸ್ ಪಡೆಗಳು ಮತ್ತು ಕೇಂದ್ರ ಸರ್ಕಾರದ ವಿಶೇಷ ಭದ್ರತಾ ತಂಡಗಳನ್ನ ಒಳಗೊಂಡಂತೆ ಮೂರು ಹಂತದ ಭದ್ರತೆ ನಿಯೋಜಿಸಲಾಗಿದೆ.
ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತವಾಗಿರಿಸಲು ಮತ್ತು ಪರೀಕ್ಷೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸುಮಾರು 2.5 ಲಕ್ಷ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದಲ್ಲದೇ ಸುಮಾರು 15,000 ಅರೆಸೇನಾ ಸಿಬ್ಬಂದಿ (Paramilitary Personnel) ಪ್ರಶ್ನೆಪತ್ರಿಕೆಗಳ ಸಾಗಣೆ ಮತ್ತು ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಕಾರ್ಯ ಮಾಡಲಿದ್ದಾರೆ. ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಕಳ್ಳತನ – ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ರೂ ಕ್ರಮ ನಿಶ್ಚಿತ: ಸಿಎಂ ಯೋಗಿ ಎಚ್ಚರಿಕೆ
1.5 ಲಕ್ಷ ಸಿಸಿಟಿವಿ ಕ್ಯಾಮೆರಾ
ಅಷ್ಟೇ ಅಲ್ಲದೇ ಕಣ್ಗಾವಲಿಗಾಗಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್ ಜಾಮರ್‌ಗಳನ್ನ ಅಳವಡಿಸಿದ್ದಾರೆ. ಎನ್‌ಟಿಎ ಕೇಂದ್ರ ಕಚೇರಿ ಮತ್ತು ದೇಶಾದ್ಯಂತ ಸ್ಥಾಪಿಸಲಾದ ಕಂಟ್ರೋಲ್ ರೂಮ್‌ಗಳಿಂದ ನೈಜ ಸಮಯ ಮೇಲ್ವಿಚಾರಣೆ ಮಾಡಲಾಗುತ್ತದೆ.

22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಅಧಿಕಾರಿಗಳ ಪ್ರಕಾರ, ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ, ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. 18.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈಗಾಗಲೇ ತಮ್ಮ ಪ್ರವೇಶ ಪತ್ರಗಳನ್ನ ಡೌನ್‌ಲೋಡ್ ಮಾಡಿಕೊಂಡಿದ್ದಾರೆ, ಆದರೆ ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ನಗರ ಅಥವಾ ಕೇಂದ್ರವನ್ನು ಬದಲಾಯಿಸಲು ಆಯ್ಕೆ ಮಾಡಿಕೊಂಡಿದ್ದಾರೆ.
ದೇಶದ 551 ನಗರಗಳು ಮತ್ತು 14 ಅಂತಾರಾಷ್ಟ್ರೀಯ ಸ್ಥಳಗಳಲ್ಲಿ 5,500 ಪರೀಖ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದನ್ನೂ ಓದಿ: ನೀಟ್‌ಗಾಗಿ ಟೆಲಿಗ್ರಾಂ ನಿಷೇಧ – ಕೇಂದ್ರದ ನಿರ್ಧಾರ ಎತ್ತಿ ಹಿಡಿದ ಹೈಕೋರ್ಟ್
