– ಪಾಕ್‌ನ ಪರಮಾಣು ಬೆದರಿಕೆ ನಡೆಯುವುದಿಲ್ಲ, ಇದಕ್ಕೆ ಭಾರತ ಬಗ್ಗಲ್ಲ ಎಂದ ಪ್ರಧಾನಿ
ನವದೆಹಲಿ: ಭಾರತ-ಪಾಕ್ (India-Pakistan) ನಡುವಿನ ಕದನ ವಿರಾಮ ವಿಚಾರವಾಗಿ ಟ್ರಂಪ್ ಮಾತು ಹಾಗೂ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ಮೋದಿ (PM Modi) ತಿರುಗೇಟು ಕೊಟ್ಟಿದ್ದಾರೆ. ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ (Operation Sindoor) ನಿಲ್ಲಿಸಲು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಸಿಂಧೂರ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ವಿಶ್ವದ ಯಾವ ನಾಯಕನೂ ಆಪರೇಷನ್ ನಿಲ್ಲಿಸಲು ಹೇಳಲಿಲ್ಲ. ಅಮೆರಿಕ ಉಪಾಧ್ಯಕ್ಷ, ಪಾಕ್ ದೊಡ್ಡ ದಾಳಿ ಮಾಡಲಿದೆ ಎಂದಿದ್ದರು. ಪಾಕ್ ದಾಳಿ ಮಾಡಿದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದೆ. ಅಮೆರಿಕ ಉಪಾಧ್ಯಕ್ಷ ನನ್ನ ಜೊತೆಗೆ ಮಾತನಾಡಲು ಪ್ರಯತ್ನಿಸಿದರು. ಸೇನೆಯ ಜೊತೆಗೆ ಮಾತನಾಡುತ್ತಿದ್ದೆ, ಸಾಧ್ಯವಾಗಲಿಲ್ಲ. ಆಮೇಲೆ ವಾಪಸ್ ಫೋನ್ ಮಾಡಿ ಅವರ ಜೊತೆಗೆ ಮಾತನಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡುವುದಿದೆ ಎಂದು ಎಚ್ಚರಿಕೆ ನೀಡಿದರು. ಅವರ ಉದ್ದೇಶ ದಾಳಿಯಾಗಿದ್ದರೆ, ಅದು ಅವರಿಗೆ ದುಬಾರಿಯಾಗಲಿದೆ ಎಂದು ಉತ್ತರಿಸಿದೆ. ನಾವು ಅದಕ್ಕಿಂತ ದೊಡ್ಡ ದಾಳಿ ನಡೆಸಿ ಉತ್ತರ ಕೊಡುತ್ತೇವೆ. ಗುಂಡಿನ ಉತ್ತರ ಗುಂಡಿನಿಂದಲೇ ಕೊಡುತ್ತೇವೆ ಎಂದು ಹೇಳಿದ್ದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್ ಗಾಂಧಿ ಸವಾಲ್
ಪೆಹಲ್ಗಾಮ್‌ನಲ್ಲಿ ಧರ್ಮ ಕೇಳಿ ಗುಂಡು ಹಾರಿಸಲಾಯಿತು. ಇದು ಕ್ರೂರತೆಯ ಪರಾಕಾಷ್ಠೆಯಾಗಿತ್ತು. ಭಾರತವನ್ನು ಹಿಂಸೆಯ ಬೆಂಕಿಯಲ್ಲಿ ಹಾಕುವುದು, ದಂಗೆ ಎಬ್ಬಿಸುವುದು ಇದರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ದೇಶದ ಜನರು ಸುಳ್ಳು ಮಾಡಿದರು. ಅದಕ್ಕೆ ನಾನು ದೇಶದ ಜನರಿಗೆ ಧನ್ಯವಾದ ಹೇಳುತ್ತೇನೆ. ನಾವು ಭಯೋತ್ಪಾದಕರನ್ನು ಮಣ್ಣಲ್ಲಿ ಮಣ್ಣಾಗಿಸುತ್ತೇವೆ. ಕಲ್ಪನೆಗೂ ಮೀರಿದ ಶಿಕ್ಷೆಯಾಗಲಿದೆ. ದಾಳಿ ನಡೆದ ದಿನ ನಾನು ವಿದೇಶದಲ್ಲಿದ್ದೆ, ವಾಪಸ್ ಬಂದೆ. ಬಂದ ತಕ್ಷಣ ಸಭೆ ಕರೆದು, ಭಯೋತ್ಪಾದನೆ ವಿರುದ್ಧ ಕಠಿಣ ಉತ್ತರ ಕೊಡ ಬೇಕು ಎಂದು ಸೂಚನೆ ನೀಡಿದೆ. ಇದು ನಮ್ಮ ರಾಷ್ಟ್ರೀಯ ಸಂಕಲ್ಪವಾಗಿತ್ತು. ನಮ್ಮ ಸೇನೆಯ ಮೇಲೆ ವಿಶ್ವಾಸ ಮತ್ತು ಭರವಸೆ ಇದೆ. ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಎಲ್ಲಿ ಹೇಗೆ ಬೇಕಾದರೂ ದಾಳಿ ಮಾಡಬಹುದು ಎನ್ನುವ ಸ್ವಾತಂತ್ರ‍್ಯವೂ ನೀಡಲಾಯಿತು. ನಮ್ಮ ಸೇನೆ ಭಯೋತ್ಪಾದಕರಿಗೆ ಶಿಕ್ಷೆ ನೀಡಿದೆ. ಆ ಶಿಕ್ಷೆ ಭಯೋತ್ಪಾದಕರ ನಿದ್ದೆಯನ್ನು ಇಂದಿಗೂ ಕಸಿದಿದೆ ಎಂದು ಹೇಳಿದ್ದಾರೆ.
ಪೆಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಭಾರತದ ಪ್ರತಿದಾಳಿ ಬಗ್ಗೆ ಗೊತ್ತಿತ್ತು. ಹೀಗಾಗಿ ಪರಮಾಣು ದಾಳಿಯ ಬೆದರಿಕೆ ಬರಲು ಆರಂಭಿಸಿದ್ದವು. ನಾವು ಅಂದುಕೊಂಡಂತೆ ದಾಳಿ ನಡೆಸಿದೆವು. ಪಾಕಿಸ್ತಾನ ಏನು ಮಾಡಲು ಸಾಧ್ಯವಾಗಲಿಲ್ಲ. ಪೆಹಲ್ಗಾಮ್ ದಾಳಿಗೆ ಸೇನೆ ಪ್ರತಿಕಾರ ತೀರಿಸಿಕೊಂಡಿತು. ಈ ಮೊದಲು ನಾವು ಎಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ, ಅಲ್ಲಿಗೆ ನಾವು ಹೋದೆವು. ಭಯೋತ್ಪಾದಕ ನೆಲೆಗಳನ್ನು ಹುಡುಕಿ ಹೊಡೆದು ಬೂದಿ ಮಾಡಿದೆವು. ಪಾಕ್ ಪರಮಾಣು ಬೆದರಿಕೆ ಸುಳ್ಳೆಂದು ಸಾಬೀತು ಮಾಡಿದೆವು. ಪರಮಾಣು ಬೆದರಿಕೆ ನಡೆಯುವುದಿಲ್ಲ, ಇದಕ್ಕೆ ಭಾರತ ಬಗ್ಗಲ್ಲ ಎನ್ನುವ ಸಂದೇಶ ರವಾನಿಸಿದ್ದೇವೆ ಎಂದು ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಖರ್ಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ನಡ್ಡಾ ಹೇಳಿಕೆ
ನಮ್ಮ ದಾಳಿಯಿಂದ ಪಾಕ್ ಏರ್‌ಬೇಸ್ ಐಸಿಯು ನಲ್ಲಿವೆ. ಆಪರೇಷನ್ ಸಿಂಧೂರದಲ್ಲಿ ಸಫಲತೆ ಸಿಕ್ಕಿದೆ. ತಂತ್ರಜ್ಞಾನದ ಯುದ್ಧದಲ್ಲಿ ಎಷ್ಟು ನಷ್ಟವಾಗಬಹುದಿತ್ತು. ನಾವು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮೊದಲ ಬಾರಿಗೆ ಆತ್ಮನಿರ್ಭರ ಭಾರತ್ ತಾಕತ್ತನ್ನು ವಿಶ್ವ ನೋಡಿದೆ. ಮೇಡ್ ಇನ್ ಇಂಡಿಯಾ ಡ್ರೋನ್, ಮಿಸೈಲ್ ಶಕ್ತಿ ಪ್ರದರ್ಶನವಾಯಿತು. ಈ ಆಪರೇಷನ್‌ನಲ್ಲಿ ಮೂರು ಸೇನೆ ಜಂಟಿಯಾಗಿ ಕೆಲಸ ಮಾಡಿವೆ ಎಂದು ತಿಳಿಸಿದ್ದಾರೆ.
ದಾಳಿ ಬಳಿಕ ಮಾಸ್ಟರ್‌ಮೈಂಡ್‌ಗಳು ಆರಾಮವಾಗಿ ಇರುತ್ತಿದ್ದರು. ಮುಂದಿನ ದಾಳಿಗೆ ಸಂಚು ರೂಪಿಸುತ್ತಿದ್ದರು. ಈಗ ದಾಳಿ ಮಾಡಿದರೆ ಭಾರತ ಬರುತ್ತೆ, ದಾಳಿ ಮಾಡುತ್ತೆ ಎನ್ನುವ ಭಯ ಹುಟ್ಟಿಸಿದೆ. ಭಾರತದಲ್ಲಿ ದಾಳಿ ನಡೆಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಪಷ್ಟವಾಗಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ ನಮ್ಮದೇ ರೀತಿಯಲ್ಲಿ ನಮ್ಮ ಟೈಮ್‌ನಲ್ಲಿ ಉತ್ತರ ಕೊಡುತ್ತೇವೆ. ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ನಾವು ಭಯೋತ್ಪಾದಕ ಪೋಷಿತ ಸರ್ಕಾರ ಮತ್ತು ಸಂಘಟನೆಯನ್ನು ಬೇರೆಯಾಗಿ ನೋಡುವುದಿಲ್ಲ ಎಂದು ಪಾಕ್‌ಗೆ ಖಡಕ್ ಸಂದೇಶ ಕೊಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡಲು ಆಗದಿದ್ರೆ ಪಾಕ್‌ಗೆ ಸಹಾಯ ಮಾಡಲು ಸಿದ್ಧ: ರಾಜನಾಥ್ ಸಿಂಗ್