ಯಾದಗಿರಿ: ಜೂನ್ ತಿಂಗಳು ಮುಗಿಯುತ್ತಾ ಬಂದರೂ ವರುಣದೇವ ಕೃಪೆ ತೋರದ ಹಿನ್ನೆಲೆ ಯಾದಗಿರಿಯ (Yadagiri) ಜೀವನಾಡಿಯಾದ ಕೃಷ್ಣಾ ಮತ್ತು ಭೀಮಾ ನದಿಗಳ ಒಡಲು ಈಗ ಸಂಪೂರ್ಣ ಬರಿದಾಗಿದೆ.
ಎರಡು ನದಿಗಳು ಬತ್ತಿ ಹೋಗಿದ್ದು, ಜಿಲ್ಲೆಯಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ನದಿಯ ನೀರನ್ನೇ ನಂಬಿ ಭತ್ತದ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ಅನ್ನದಾತರು ಈಗ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಯಾದಗಿರಿ ನಗರ ಸೇರಿದಂತೆ ನೂರಾರು ಹಳ್ಳಿಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಎದುರಾಗುವ ಆತಂಕ ಶುರುವಾಗಿದೆ. ಇದನ್ನೂ ಓದಿ: Top Updates | ರಾಮಮಂದಿರದ 7 ಕೋಟಿ ದೇಣಿಗೆ ಕಳ್ಳತನ – 70 ಬಾರಿ ಲೂಟಿ, ಸಿಎಂ ಯೋಗಿ ಎಚ್ಚರಿಕೆ

ಕಳೆದ ವರ್ಷ ಇದೇ ಜೂನ್ ತಿಂಗಳಲ್ಲಿ ಮಳೆಯ ಅಬ್ಬರಕ್ಕೆ ಭೀಮಾ ನದಿ (Bhima River) ಉಕ್ಕಿ ಹರಿಯುತ್ತಿತ್ತು. ಆದರೆ, ಈ ವರ್ಷ ಪ್ರಕೃತಿಯ ಮುನಿಸಿಗೆ ನದಿಯ ಒಡಲು ಸಂಪೂರ್ಣ ಖಾಲಿಯಾಗಿದೆ. ಎಲ್ಲೆಡೆ ನೀರು ಇರಬೇಕಾದ ಜಾಗದಲ್ಲಿ ಈಗ ಬರಿ ಬಂಡೆಗಲ್ಲುಗಳು ಮತ್ತು ಮರಳು ಮಾತ್ರ ಕಾಣಿಸುತ್ತಿದೆ. ಯಾದಗಿರಿ ಜಿಲ್ಲೆಯ ಜನರ ಜೀವನಾಡಿಯಾಗಿರುವ ಭೀಮಾ ನದಿಯ ಈ ಭೀಕರ ದೃಶ್ಯಗಳು ಜಿಲ್ಲೆಯ ಜನರನ್ನು ಹಾಗೂ ಅನ್ನದಾತರನ್ನು ಅಕ್ಷರಶಃ ನಡುಗಿಸುವಂತೆ ಮಾಡಿದೆ.
ಒಂದು ಕಡೆ ಕೃಷ್ಣಾ ನದಿಯೂ (Krishna River) ಬತ್ತಿ ಹೋಗಿದೆ, ಮತ್ತೊಂದೆಡೆ ಭೀಮಾ ನದಿಯಲ್ಲೂ ನೀರಿನ ಕೊರತೆ ಎದುರಾಗಿದೆ. ಈ ಎರಡು ನದಿಗಳ ನೀರನ್ನೇ ನಂಬಿ ಯಾದಗಿರಿ ಜಿಲ್ಲೆಯ ಲಕ್ಷಾಂತರ ಎಕರೆ ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆಯುತ್ತಿದ್ದರು. ಈ ಬಾರಿಯೂ ಭತ್ತದ ನಾಟಿಗಾಗಿ ಜಮೀನು ಸಿದ್ಧತೆ ಮಾಡಿಕೊಂಡಿದ್ದ ಅನ್ನದಾತರಿಗೆ ನದಿ ಬತ್ತಿ ಹೋಗಿರುವುದು ಬರಸಿಡಿಲು ಬಡಿದಂತಾಗಿದೆ. ನೀರಿಲ್ಲದ ಕಾರಣ ರೈತರು ಭತ್ತದ ನಾಟಿ ಮಾಡಲಾಗದೆ ಕೈಕಟ್ಟಿ ಕುಳಿತಿದ್ದು, ನದಿ ತೀರದ ಸಾವಿರಾರು ಎಕರೆ ಜಮೀನುಗಳು ಈಗ ಖಾಲಿ ಖಾಲಿಯಾಗಿ ಕಾಣಿಸುತ್ತಿವೆ.ಇದನ್ನೂ ಓದಿ: ಮುತ್ತತ್ತಿಯ ಕಾವೇರಿ ನದಿಯಲ್ಲಿ ಪ್ರಾಣಹಾನಿ ತಡೆಯಲು ಸುರಕ್ಷತಾ ಕ್ರಮ ಕೈಗೊಳ್ಳಿ – ಗೃಹ ಸಚಿವರಿಗೆ ಪತ್ರ ಬರೆದ ಹೆಚ್‌ಡಿಕೆ

ಇನ್ನು ನದಿ ಬತ್ತಿ ಹೋಗಿರುವುದು ಕೇವಲ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಇಡೀ ಯಾದಗಿರಿ ನಗರದ ಜನಜೀವನಕ್ಕೂ ಕಂಟಕವಾಗಿ ಪರಿಣಮಿಸಿದೆ. ಯಾದಗಿರಿ ನಗರಸಭೆ ವ್ಯಾಪ್ತಿ ಸೇರಿದಂತೆ ನದಿ ತೀರದ ಹತ್ತಾರು ಹಳ್ಳಿಗಳಿಗೆ ಇದೇ ಭೀಮಾ ನದಿಯಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈಗ ನದಿಯೇ ಒಣಗಿರುವುದರಿಂದ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜನ ಹನಿ ಹನಿಗೂ ಪರದಾಡುವ ಭೀತಿ ಎದುರಾಗಿದೆ.
ಒಟ್ಟಿನಲ್ಲಿ ಉಕ್ಕಿ ಹರಿಯಬೇಕಾದ ನದಿಯ ಒಡಲಿನಲ್ಲಿ ಬಂಡೆಗಲ್ಲುಗಳು ತೇಲುತ್ತಿರುವುದು ಗಡಿನಾಡಿನ ಭೀಕರ ಬರದ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಅನ್ನದಾತನ ಕಣ್ಣಲ್ಲಿ ಕಣ್ಣೀರು ತರಿಸಿರುವ ಮಳೆರಾಯ ಇನ್ನಾದರೂ ಕೃಪೆ ತೋರುತ್ತಾನಾ, ಬತ್ತಿದ ಭೀಮಾ ನದಿಗೆ ಜೀವ ಕಳೆ ಬರುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.ಇದನ್ನೂ ಓದಿ: ಕುಮಾರಸ್ವಾಮಿ ಭೈರಮಂಗಲಕ್ಕೆ ಬರ್ತಾರೆ – ಸಿಎಂ ಡಿಕೆಶಿ ಬಂದು ಚರ್ಚೆ ಮಾಡಲಿ: ನಿಖಿಲ್ ಸವಾಲ್
