ಚಿತ್ರದುರ್ಗ: ಈ ಬಾರಿ ಮಳೆ ಕೈ ಕೊಟ್ಟ ಪರಿಣಾಮ ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಭೀಕರ ಬರದ ಛಾಯೆ ಆವರಿಸಿದೆ. ತೋಟಗಳಲ್ಲಿನ ಕೊಳವೆಬಾವಿಗಳು ಬತ್ತಿ ಬರಿದಾಗಿವೆ. ಹೀಗಾಗಿ ಅಡಿಕೆ ಹಾಗು ತೆಂಗು ನೀರಿನ ಅಭಾವದಿಂದ ಒಣಗಿ ಸರ್ವನಾಶವಾಗುತ್ತಿದ್ದು, ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರು (Farmers) ಕಂಗಾಲಾಗಿದ್ದಾರೆ.
ಹೌದು, ಈ ವರ್ಷ ಎಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ವರುಣ ಕೈಕೊಟ್ಟಿದ್ದಾನೆ. ಹೀಗಾಗಿ ಕೋಟೆನಾಡಿನಾದ್ಯಂತ ಬರದ ಛಾಯೆ ಆವರಿಸಿದೆ. ಕೈಗೆ ಬಂದಿರುವ ಅಡಿಕೆ ತೋಟಗಳು ಒಣಗಿ ಹೋಗುತ್ತಿವೆ. ಅಲ್ಲದೇ ಪ್ರತಿವರ್ಷ ಹೂವು ಹಾಗೂ ಆಹಾರ ಧಾನ್ಯಗಳನ್ನು ಬೆಳೆದುಕೊಂಡು ಹಾಯಾಗಿದ್ದ ರೈತರು, ಕಳೆದ ಎರಡು ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಬರುವುದೆಂಬ ನಿರೀಕ್ಷೆಯಲ್ಲಿ ಅವರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿಕೊಂಡು ಅಡಿಕೆ ಬೆಳೆಯಲು ಮುಂದಾಗಿದ್ದರು. ಆದರೆ ಈ ಗ್ರಾಮದ ಕೆರೆ ಸಹ ಕೆರೆ ತುಂಬಿಸುವ ಯೋಜನೆಗೆ ಸೇರ್ಪಡೆಯಾಗಿಲ್ಲ. ಹೀಗಾಗಿ ಕಳೆದ ಐದು ವರ್ಷಗಳಿಂದ ಹೊಟ್ಟೆ ಬಟ್ಟೆ ಕಟ್ಟಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದ ರೈತರಿಗೆ ಕೊಳವೆಬಾವಿಗಳು ದಿಢೀರ್ ಬತ್ತಿ ಬರಿದಾಗಿ ಶಾಕ್ ನೀಡಿವೆ.

ಅಂತರ್ಜಲ ತಳಮಟ್ಟಕ್ಕೆ ಕುಸಿದ ಪರಿಣಾಮ ಈ ವರ್ಷ ಅಪಾರ ಲಾಭದ ನಿರೀಕ್ಷೆಯಲ್ಲಿದ್ದ ರೈತರ ನಂಬಿಕೆ ಹುಸಿಯಾಗಿದೆ. ಹೀಗಾಗಿ ಅಡಿಕೆ ಗಿಡ ನಾಟಿ ಮಾಡಿಸಲು ಮಾಡಿದ್ದ ಸಾಲ ತೀರಿಸೋದು ಹೇಗೆಂಬ ಆತಂಕಕ್ಕೆ ಸಿಲುಕಿರುವ ಅಡಿಕೆ ಬೆಳೆಗಾರರು ದಾರಿ ಕಾಣದೇ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ಕಡಿದುಹಾಕಲು ಮುಂದಾಗಿದ್ದಾರೆ.
ಇನ್ನು ಭೀಕರ ಬರದ ರೌದ್ರವತಾರಕ್ಕೆ ಅನ್ನದಾತ ನಲುಗಿ ಹೋಗಿದ್ದಾನೆ. ಸಕಾಲಕ್ಕೆ ಅಡಿಕೆ ಹಾಗೂ ತೆಂಗಿಗೆ ನೀರು ಹಾಯಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಡಿಕೆ, ತೆಂಗಿನ ಸಸಿಗಳು ನೀರಿಲ್ಲದೇ ಒಣಗುತ್ತಿರುವ ಪರಿಣಾಮ ಮಕ್ಕಳಂತೆ ಸಾಕಿ ಸಲುಹಿದ ಫಸಲು ಕಣ್ಮುಂದೆಯೇ ಒಣಗುವುದನ್ನು ಕಂಡ ರೈತರು ವಿಷ ಕುಡಿಯುವ ಪರಿಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಸರ್ಕಾರ ಅನ್ನದಾತರ ನೆರವಿಗೆ ಧಾವಿಸುವಂತೆ ಚಿತ್ರದುರ್ಗದ ರೈತ ಮುಖಂಡರು ಒತ್ತಾಯಿಸಿದ್ದಾರೆ.

ಒಟ್ಟಾರೆ ಕೋಟೆನಾಡು ಚಿತ್ರದುರ್ಗದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಅಂತರ್ಜಲ ತಳಪಾಯಕ್ಕೆ ಕುಸಿದು, ಕೊಳವೆಬಾವಿಗಳು ಬತ್ತಿ ಬರಿದಾಗಿವೆ. ಹೀಗಾಗಿ ಒಣಗುತ್ತಿರುವ ತೋಟದಲ್ಲಿ, ಕಂಗಾಲಾದ ಚಿತ್ರದುರ್ಗದ ರೈತರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
