ಬೆಂಗಳೂರು: ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಃ ಅಲ್ಪಸಂಖ್ಯಾತ, ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ, ಕ್ರಮ ಜರಗಿಸಲಾಗುತ್ತದೆ. ಖಚಿತ ಮಾಹಿತಿ ಮೇರೆಗೆ ಎನ್‌ಐಎ (NIA) ಅಧಿಕಾರಿಗಳು ಹಲವು ಕಡೆ ಶೋಧ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸರು (Shivamogga Police) ಇಬ್ಬರು ವ್ಯಕ್ತಿಗಳು ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕನ್ನಡ ಭಾಷಾ ಕಡ್ಡಾಯ ಬಳಕೆಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ – ದಂಡ ವಿಧಿಸಲು ಅವಕಾಶ
ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ ಪೊಲೀಸರ ಕಾರ್ಯ ಕ್ಷಮತೆಯ ಬಗ್ಗೆ ಅಭಿನಂದಿಸುತ್ತೇನೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು, ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರೂ ಮಾಜಿ ವಿಧಾನ ಸಭಾ ಸ್ಪೀಕರ್ ಸಹ ಆಗಿದ್ದ ಕಾಂಗ್ರೆಸ್ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಹೇಳಿದ್ದು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: 2026ಕ್ಕೆ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ!