ಸುದೀಪ್ (Sudeep) ನಟನೆಯ ಹೊಸ ಸಿನಿಮಾದ (ಕಿಚ್ಚ46) (Kiccha 46) ಕುರಿತು ಕೆಲವು ಮಾಹಿತಿಗಳು ಹೊರ ಬಂದರೂ, ನಿರ್ದೇಶಕರ ವಿಷಯದಲ್ಲಿ ಇನ್ನೂ ಮ್ಯೂಸಿಕಲ್ ಚೇರ್ ಆಟ ನಿಂತಿಲ್ಲ. ಮೊದಲು ಕಿಚ್ಚ 46 ಸಿನಿಮಾವನ್ನು ಅನೂಪ್ ಭಂಡಾರಿ (Anoop Bhandari) ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆ ನಂತರ ನಂದಕಿಶೋರ್ ಹೆಸರು ಕೇಳಿ ಬಂತು, ಅಚ್ಚರಿ ಎನ್ನುವಂತೆ ತಮಿಳಿನ ನಿರ್ದೇಶಕ ವಿಜಯ್ (Vijay) ಅವರ ಪ್ರವೇಶ ಮಾಡಿತ್ತು. ಇದೀಗ ಮತ್ತೋರ್ವ ನಿರ್ದೇಶಕನ ಹೆಸರು ತೇಲಿ ಬಂದಿದೆ.
ಮಲಯಾಳಂ ಖ್ಯಾತ ನಿರ್ದೇಶಕ ಆಂಟೋನಿ ಜೋಸೆಫ್ (Antony Joseph) ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದು, ಅವರೇ ಕಿಚ್ಚನ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ನಿನ್ನೆಯಷ್ಟೇ ಆಂಟೋನಿ ಜೋಸೆಫ್ ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಆ ಫೋಟೋವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 2018ರ ಹೆಸರಿನ ಸಿನಿಮಾ ಮೂಲಕ ಆಂಟೋನಿ ಸಖತ್ ಫೇಮಸ್ ಆದವರು. ಈಗ ಅವರ ಹೆಸರು ಕೂಡ ಕಿಚ್ಚನ ಸಿನಿಮಾಗಳ ನಿರ್ದೇಶಕರ ಯಾದಿಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಹೃದಯ ಕಿತ್ತು ಎದೆಗೆ ಹಚ್ಚಿಕೊಂಡು ಪಾರ್ಟಿಗೆ ಬಂದ ಉರ್ಫಿ ಜಾವೇದ್
ಹೊಸ ಸಿನಿಮಾದ ಬಗ್ಗೆ ಅಧಿಕೃತವಾಗಿ ನಿರ್ದೇಶಕರ ಹೆಸರು ಬಹಿರಂಗಗೊಳ್ಳದೇ ಇದ್ದರೂ, ತಾಂತ್ರಿಕ ವರ್ಗದ ಕೆಲವರ ಹೆಸರನ್ನು ನಿರ್ಮಾಣ ಸಂಸ್ಥೆ ಅಧಿಕೃತಗೊಳಿಸಿದೆ. ಸಿನಿಮಾವನ್ನು ತಮಿಳು ಚಿತ್ರ ನಿರ್ಮಾಣ ಸಂಸ್ಥೆ ತಯಾರಿಸುತ್ತಿದ್ದರೆ ಸಂಗೀತ, ಸಿನಿಮಾಟೋಗ್ರಫಿ ಮತ್ತು ಕಲಾ ನಿರ್ದೇಶನವನ್ನು ಕನ್ನಡದ ತಂತ್ರಜ್ಞರೇ ಮಾಡಲಿದ್ದಾರೆ. ಅಜನೀಶ್ ಲೋಕನಾಥ (Ajanish Loknath) ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದರೆ, ಶಿವಕುಮಾರ್ ಕಲಾನಿರ್ದೇಶಕ. ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿ ಚಿತ್ರಕ್ಕೆ ಇರಲಿದೆಯಂತೆ. ಆದರೆ, ಈ ಮಾಹಿತಿಯನ್ನು ಚಿತ್ರತಂಡ ಇನ್ನೂ ಖಚಿತ ಪಡಿಸಿಲ್ಲ.
ಈ ಸಿನಿಮಾಗೆ ತಮಿಳಿನ ಕಲೈಪುಲಿ ಎಸ್ ತನು (Kalaipuli S Tanu) ನಿರ್ಮಾಣ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಮೊನ್ನೆಯಷ್ಟೇ ಕಿಚ್ಚ ಕಾರಿನಿಂದ ಇಳಿಯುವುದರ ಜೊತೆಗೆ ಮೇಕಪ್ ನಲ್ಲಿ ಭಾಗಿಯಾಗುವ ಸಣ್ಣದೊಂದು ವಿಡಿಯೋ ಬಿಡುಗಡೆ ಮಾಡಿತ್ತು ಚಿತ್ರತಂಡ. ಸುದೀಪ್ ಅವರ ಗೆಟಪ್ ಜಭರದಸ್ತಾಗಿ ಇರಲಿದೆ ಎನ್ನುವ ಸುಳಿವನ್ನೂ ನೀಡಿತ್ತು.
ಒಂದು ದಿನದಲ್ಲಿ ನಡೆಯುವ ಕಥೆಯು ಇದಾಗಿದ್ದು, ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಮಾದರಿಯ ಚಿತ್ರವಂತೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಭಾರೀ ಬಜೆಟ್ ನ ಚಿತ್ರ ಇದಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಈ ಸಿನಿಮಾ ಏಕಕಾಲಕ್ಕೆ ರೆಡಿಯಾಗಲಿದೆ. ಅರ್ಜುನ್ ಜನ್ಯ ಬದಲಾಗಿ ಈ ಚಿತ್ರಕ್ಕೆ ಹ್ಯಾರೀಸ್ ಜೈರಾಜ್ ಎನ್ನುವವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅಧಿಕೃತವಾಗಿ ಚಿತ್ರತಂಡ ಮಾಹಿತಿ ಕೊಡದೇ ಇದ್ದರೂ, ಸುದೀಪ್ ಅವರ ಆಪ್ತರಿಂದಲೇ ಇವಿಷ್ಟು ಮಾಹಿತಿ ಹೊರ ಬಂದಿವೆ.