– 72 ಗಂಟೆಗಳಲ್ಲಿ ಮತ್ತೆ 30 ಲಕ್ಷ ಕ್ಯೂಬಿಕ್ ಮೀಟರ್ ನೀರು ಹರಿಯುವ ಸಾಧ್ಯತೆ ಎಂದು ಮುನ್ನೆಚ್ಚರಿಕೆ
ಕಠ್ಮಂಡು: ನೇಪಾಳ–ಟಿಬೆಟ್ ಗಡಿ ಸಮೀಪದಲ್ಲಿ ಹೊಸದಾಗಿ ರೂಪುಗೊಂಡಿರುವ ‘ಬ್ಯಾರಿಯರ್ ಲೇಕ್’ (Barrier Lake) (ನೈಸರ್ಗಿಕವಾಗಿ ನೀರು ತಡೆದು ನಿಂತಿರುವ ಸರೋವರ) ಮತ್ತಷ್ಟು ಪ್ರವಾಹದ ಆತಂಕ ಸೃಷ್ಟಿಸಿದೆ. ಈಗಾಗಲೇ ನೇಪಾಳದಲ್ಲಿ ಉಂಟಾಗಿರುವ ಹಠಾತ್ ಪ್ರವಾಹ ಹಾಗೂ ಭೂಕುಸಿತದ (Landslides) ಭೀಕರ ಪರಿಣಾಮ ನಿಭಾಯಿಸಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ಭೀತಿ ಹೆಚ್ಚಿಸಿದೆ.

ಚೀನಾದ ಜಲಸಂಪನ್ಮೂಲ ಸಚಿವಾಲಯದ ಪ್ರಕಾರ, ನೇಪಾಳದ (Nepal) ಛೋಚೆನ್ ಖೋಲಾ ಮತ್ತು ಪುರೆಪು ತ್ಸಾಂಗ್ಪೊ ನದಿಗಳ ಸಂಗಮದ ಸಮೀಪ ಈ ಬ್ಯಾರಿಯರ್ ಲೇಕ್ ರೂಪುಗೊಂಡಿದೆ. ಗುರುವಾರ ಬೆಳಗ್ಗಿನ ವೇಳೆಗೆ ಸರೋವರದಲ್ಲಿ ಸುಮಾರು 20 ಲಕ್ಷ ಘನ ಮೀಟರ್ (ಕ್ಯೂಬಿಕ್ ಮೀಟರ್) ನೀರು ಸಂಗ್ರಹವಾಗಿತ್ತು. ಈಗಾಗಲೇ ನೀರು ಉಕ್ಕಿ ಹರಿಯುತ್ತಿದ್ದು, ಮುಂದಿನ 3 ದಿನಗಳಲ್ಲಿ ಇನ್ನೂ ಸುಮಾರು 30 ಲಕ್ಷ ಘನ ಮೀಟರ್ ನೀರು ಸರೋವರಕ್ಕೆ ಸೇರುವ ಸಾಧ್ಯತೆಯಿದೆ. ಇದರಿಂದ ಸರೋವರದ ಕಟ್ಟೆ ಒಡೆದು ಭಾರೀ ಪ್ರಮಾಣದ ನೀರು ಹರಿದುಬರುವ ಅಪಾಯ ಹೆಚ್ಚಿದೆ ಎಂದು ವರದಿಗಳು ತಿಳಿಸಿವೆ.

ಪರಿಸ್ಥಿತಿಯ ಮೇಲೆ ಚೀನಾದ ನಿಗಾ
ಚೀನಾದ ಅಧಿಕಾರಿಗಳು ಪರಿಸ್ಥಿತಿಯನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸರೋವರದ ತಡೆ ಒಡೆದರೆ ಉಂಟಾಗಬಹುದಾದ ಪರಿಣಾಮಗಳನ್ನ ಅಂದಾಜಿಸಲು ಪ್ರವಾಹದ ವಿವಿಧ ಸನ್ನಿವೇಶಗಳ ಪರಿಶೀಲಿಸಲಾಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಈ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ನೇಪಾಳದ ಮೂರು ಜಿಲ್ಲೆಗಳಲ್ಲಿ ಬುಧವಾರ ಸುರಿದ ಭಾರೀ ಮಳೆಯಿಂದ ಹಠಾತ್ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ ಬಳಿಕ ಚೀನಾದಿಂದ ಮತ್ತೊಂದು ಪ್ರವಾಹದ ಎಚ್ಚರಿಕೆ ಬಂದಿದೆ. ದುರಂತದಲ್ಲಿ ವ್ಯಾಪಕ ಹಾನಿಯಾಗಿದ್ದು, ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳು ಹಾನಿಗೊಳಗಾಗಿರುವುದರಿಂದ ದೂರದ ಹಾಗೂ ಪರ್ವತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುವುದು ಮತ್ತಷ್ಟು ಸವಾಲಿನದ್ದಾಗಿದೆ.

ಸಾವಿನ ಸಂಖ್ಯೆ 332ಕ್ಕೆ ಏರಿಕೆ
ಈ ನಡುವೆ ನೇಪಾಳದಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ ಗುರುವಾರ 332ಕ್ಕೆ ಏರಿಕೆಯಾಗಿದೆ. ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರಲ್ಲಿ 260 ವಿದೇಶಿ ಪ್ರಜೆಗಳೂ ಸೇರಿದ್ದಾರೆ ಎಂದು ವರದಿಯಾಗಿದೆ.
