– ಕೇರಳದಿಂದ ಸಿಕಾರ್‌ಗೆ ನೀಟ್ ಪ್ರಶ್ನೆಪತ್ರಿಕೆ ತಲುಪಿದ್ದು ಹೇಗೆ?
ದೇಶದ ಲಕ್ಷಾಂತರ ವಿದ್ಯಾರ್ಥಿಗಳ (NEET Students) ಕನಸಿಗೆ ದೊಡ್ಡ ಹೊಡೆತ ನೀಡಿದ ನೀಟ್ ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿರುವ ನೀಟ್ ಯುಜಿ ಪರೀಕ್ಷೆಯನ್ನು ರದ್ದುಪಡಿಸುವ ಮಟ್ಟಕ್ಕೆ ಹೋದ ಈ ಹಗರಣದಲ್ಲಿ ಈಗ ಮಹಾರಾಷ್ಟ್ರದ ನಾಸಿಕ್ ಮೂಲದ 30 ವರ್ಷದ ಶುಭಂ ಖೈರ್ನಾರ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ಪರೀಕ್ಷೆ ಶುರುವಾಗುವುದಕ್ಕೂ ಮುನ್ನವೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿಬಂದ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮಂಗಳವಾರ ಪರೀಕ್ಷೆಯನ್ನ ರದ್ದುಗೊಳಿಸಿದೆ. ತನಿಖೆ ಆರಂಭಿಸಿದ ಸಿಬಿಐ ಸೋರಿಕೆಯ ಹಾದಿ ಕರ್ನಾಟಕದ ನೆರೆಯ ಕೇರಳ ರಾಜ್ಯದಿಂದ ಮಹಾರಾಷ್ಟ್ರದ ನಾಸಿಕ್‌ನವರೆಗೆ ತಲುಪಿರುವುದನ್ನು ಬಯಲಿಗೆಳೆದಿದೆ.

ಲುಕ್ ಬದಲಿಸಿದ್ದ ಆರೋಪಿ:
ಪ್ರಕರಣ ಬೆಳಕಿಗೆ ಬಂದ ನಂತರ ತಲೆಮರೆಸಿಕೊಂಡಿದ್ದ ಶುಭಂ ಖೈರ್ನಾರ್‌ನ್ನು ಸಿಬಿಐ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಬಂಧಿಸಿದ್ದಾರೆ. ದೇವಸ್ಥಾನಕ್ಕೆ ತೆರಳುತ್ತಿದ್ದಾಗಲೇ ಆರೋಪಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಬಂಧನದಿಂದ ತಪ್ಪಿಸಿಕೊಳ್ಳಲು ಶುಭಂ ತನ್ನ ಲುಕ್‌ನ್ನೇ ಬದಲಿಸಿಕೊಂಡಿದ್ದ. ಆರೋಪಿ ಕೂದಲು ಕತ್ತರಿಸಿಕೊಂಡು ಯಾರಿಗೂ ಗುರುತಿಸಲು ಸಾದ್ಯವಾಗದಂತೆ ತಲೆಮರೆಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಹಳೆಯ ಫೋಟೋಗಳು ಮತ್ತು ಡಿಜಿಟಲ್ ಟ್ರ‍್ಯಾಕಿಂಗ್ ಸಹಾಯದಿಂದ ಸಿಬಿಐ ಕೊನೆಗೂ ಆತನನ್ನು ಗುರುತಿಸಿ ಬಂಧಿಸಿದೆ.
5 ಲಕ್ಷ ಲಾಭಕ್ಕಾಗಿ ಸೋರಿಕೆ:
ನಾಸಿಕ್‌ನ ಇಂದಿರಾನಗರ ಪ್ರದೇಶದ ನಿವಾಸಿಯಾದ ಶುಭಂ, ಆಯುರ್ವೇದ ವೈದ್ಯಕೀಯ (ಬಿಎಎಮ್‌ಎಸ್) ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪುಣೆ ಮೂಲದ ಶಂಕಿತ ವ್ಯಕ್ತಿಯಿಂದ ಆತ ಪ್ರಶ್ನೆಪತ್ರಿಕೆಯನ್ನು 10 ಲಕ್ಷ ರೂಪಾಯಿಗೆ ಖರೀದಿಸಿದ್ದಾನೆ. ನಂತರ ಅದನ್ನು ಹರಿಯಾಣದ ಖರೀದಿದಾರರಿಗೆ 15 ಲಕ್ಷ ರೂಪಾಯಿಗೆ ಮಾರಾಟ ಮಾಡಿ 5 ಲಕ್ಷ ರೂಪಾಯಿ ಲಾಭ ಗಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಪೂರ್ಣ ವ್ಯವಹಾರ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಆಪ್‌ಗಳ ಮೂಲಕ ನಡೆದಿತ್ತು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಈ ಹಗರಣ ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಡೆಸಿದ ದೊಡ್ಡ ಜಾಲ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪೋರ್ಟಬಲ್ ಸ್ಕ್ಯಾನರ್‌ಗಳು, ಟೆಲಿಗ್ರಾಂ ಗ್ರೂಪ್‌ಗಳು, ಸೀಕ್ರೆಟ್ ಸರ್ವರ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಿದ ಫೈಲ್‌ಗಳ ಮೂಲಕ ಪ್ರಶ್ನೆಪತ್ರಿಕೆ ಹರಿಬಿಡಲಾಗಿದೆ. ಪರೀಕ್ಷೆ ಆರಂಭವಗುವ 45 ಗಂಟೆಗಳ ಮುಂಚೆಯೇ ಪ್ರಶ್ನೆಪತ್ರಿಕೆ ಕೆಲವರ ಕೈ ಸೇರಿತ್ತು ಎಂಬುದು ತನಿಖೆಯಲ್ಲಿ ಹೊರಬಂದಿದೆ.
ಈ ಪ್ರಕರಣದ ಮೊದಲ ಸುಳಿವು ರಾಜಸ್ಥಾನದ ಸಿಕಾರ್‌ನಲ್ಲಿ ಸಿಕ್ಕಿತ್ತು. ಕೇರಳದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ತನ್ನ ತಂದೆಗೆ ಇದು ಊಹೆ ಪ್ರಶ್ನೆಪತ್ರಿಕೆ ಎಂದು ಪಿಡಿಎಫ್ ಕಳುಹಿಸಿದ್ದಾನೆ. ಸಿಕಾರ್‌ನಲ್ಲಿ ಪಿಜಿ ಹಾಸ್ಟೆಲ್ ನಡೆಸುತ್ತಿದ್ದ ಆತನ ತಂದೆ, ಪರೀಕ್ಷೆಯ ದಿನವೇ ಕೆಲ ವಿದ್ಯಾರ್ಥಿನಿಯರಿಗೆ ಅದನ್ನು ಹಂಚಲು ಯತ್ನಿಸಿದ್ದಾನೆ ಎನ್ನಲಾಗಿದೆ. ಪರೀಕ್ಷೆ ಮುಗಿದ ಬಳಿಕ ಶಿಕ್ಷಕರು ಪ್ರಶ್ನೆಪತ್ರಿಕೆ ಪರಿಶೀಲಿಸಿದಾಗ ನಿಜವಾದ ನೀಟ್ ಪ್ರಶ್ನೆಗಳ ಜೊತೆಗೆ ಹಲವು ಪ್ರಶ್ನೆಗಳು ಹೋಲಿಕೆಯಾಗಿದ್ದವು. ರಸಾಯನಶಾಸ್ತ್ರದ 108 ಪ್ರಶ್ನೆಗಳಲ್ಲಿ 45 ಹಾಗೂ ಜೀವಶಾಸ್ತ್ರದ 204 ಪ್ರಶ್ನೆಗಳಲ್ಲಿ 90 ಪ್ರಶ್ನೆಗಳು ಒಂದೇ ಆಗಿದ್ದವು ಎಂಬ ಮಾಹಿತಿ ಬೆಚ್ಚಿಬೀಳಿಸಿತು.
ಪೊಲೀಸರಿಂದ ನಿರಾಕರಣೆ
ಮೊದಲಿಗೆ ಶಿಕ್ಷಕರು ಪೊಲೀಸರಿಗೆ ದೂರು ನೀಡಲು ಮುಂದಾದರೂ, ಸಿಕಾರ್ ಪೊಲೀಸರು ದೂರು ಸ್ವೀಕರಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಳಿಕ ವಿಷಯವನ್ನು ಎನ್‌ಟಿಎ ಗಮನಕ್ಕೆ ತರಲಾಗಿತ್ತು. ಅಲ್ಲಿಂದ ಗುಪ್ತಚರ ದಳ (ಐಬಿ) ಮತ್ತು ನಂತರ ರಾಜಸ್ಥಾನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ತನಿಖೆ ಆರಂಭಿಸಿತು. ಮೇ 8ರಂದು ಸಿಕಾರ್‌ನಿಂದ ಜೈಪುರ, ಹರಿಯಾಣ ಮತ್ತು ಮಹಾರಾಷ್ಟ್ರದ ನಾಸಿಕ್‌ವರೆಗೆ ಹರಡಿದ್ದ ಈ ಜಾಲದ ಕೊಂಡಿಗಳು ಪತ್ತೆಯಾಗಿವೆ.

15 ಮಂದಿ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಎಸ್‌ಒಜಿ ಇದುವರೆಗೆ 15 ಮಂದಿಯನ್ನು ಬಂಧಿಸಿದೆ. ಆರೋಪಿಗಳಾದ ಮನೀಶ್ ಯಾದವ್ ಮತ್ತು ರಾಕೇಶ್ ಮಾಂಡ್ವಾರಿಯಾ ಪ್ರಮುಖ ಪಾತ್ರ ವಹಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ರಾಕೇಶ್ ಸಿಕಾರ್‌ನ ಕೋಚಿಂಗ್ ಮತ್ತು ಕೌನ್ಸೆಲಿಂಗ್ ಜಾಲದ ಜೊತೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
ದೇಶದ ಕೋಟ್ಯಾಂತರ ಕುಟುಂಬಗಳ ಕನಸಾದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡುವ ಪರೀಕ್ಷೆಯ ಪ್ರಶ್ನೆಪತ್ರಿಕೆಯೇ ಸೋರಿಕೆಯಾಗಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭಾರೀ ಆತಂಕ ಮೂಡಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳ ಶ್ರಮ, ಕನಸು ಮತ್ತು ಭವಿಷ್ಯ ಇದೀಗ ಅನಿಶ್ಚಿತತೆಯ ನಡುವೆ ಸಿಲುಕಿದೆ.

