ನವದೆಹಲಿ: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ವ್ಯವಸ್ಥೆಯಲ್ಲಿ ಜಾರಿಗೆ ತರಲಾಗುತ್ತಿರುವ ಸುಧಾರಣೆಗಳ ಕುರಿತು ಸಮಗ್ರ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ಪೀಠವು, ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆಗಾಗಿ ಭಾರತೀಯ ವಾಯುಪಡೆಯನ್ನು (IAF) ಬಳಸಿದ್ದು ಕೇವಲ ತಾತ್ಕಾಲಿಕ ಕ್ರಮವಷ್ಟೇ. ಪರೀಕ್ಷಾ ವ್ಯವಸ್ಥೆಯಲ್ಲಿ ಶಾಶ್ವತ ಸಂಸ್ಥಾಗತ ಸುಧಾರಣೆಗಳು ಜಾರಿಯಾಗಬೇಕು ಎಂದು ಸ್ಪಷ್ಟಪಡಿಸಿತು. ಅಷ್ಟೇ ಅಲ್ಲದೇ ಈ ಸುಧಾರಣಾ ಪ್ರಕ್ರಿಯೆಗಳನ್ನು ವರ್ಷಪೂರ್ತಿ ನಿಕಟವಾಗಿ ಮೇಲ್ವಿಚಾರಣೆ ಮಾಡುವುದಾಗಿ ಹೇಳಿದೆ. ಇದನ್ನೂ ಓದಿ: ಪ್ರಧಾನ್ ವಜಾಗೊಳಿಸೋವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಭಾಗವಹಿಸಲ್ಲ: ರಾಗಾ
ಉನ್ನತ ಮಟ್ಟದ ಸಮಿತಿಯು (High-Powered Committee) ನೀಡಿದ ಶಿಫಾರಸುಗಳ ಅನುಷ್ಠಾನದ ಕುರಿತು ವಿವರಣೆ ನೀಡುವಂತೆ ಕೋರ್ಟ್ ಸೂಚಿಸಿದೆ. ಇದರಲ್ಲಿ ಡಿಜಿಟಲ್ ಮೂಲಸೌಕರ್ಯ, ಭದ್ರತೆ, ಸಂಶೋಧನೆ ಮತ್ತು ಅಭಿವೃದ್ಧಿ, ಪಾರದರ್ಶಕತೆ, ಆಡಳಿತ ಹಾಗೂ ಮಾನವ ಸಂಪನ್ಮೂಲ ಸೇರಿದಂತೆ 10 ಪ್ರಮುಖ ವಿಭಾಗಗಳ ಪ್ರಗತಿ ವರದಿಯನ್ನು ಕೇಳಿದೆ.
ಪರೀಕ್ಷೆಗೂ ಮುನ್ನ, ಪರೀಕ್ಷೆಯ ಸಮಯದಲ್ಲಿ ಮತ್ತು ಪರೀಕ್ಷೆಯ ನಂತರದ ಹಂತಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು, ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಬದಲಾಗುವ ಪ್ರಸ್ತಾವನೆ, ಡೇಟಾ ಸಂರಕ್ಷಣೆ ಮತ್ತು ಅಭ್ಯರ್ಥಿಗಳ ಪರಿಶೀಲನೆಗೆ ಡಿಜಿ ಯಾತ್ರೆ (DigiYatra) ಮಾದರಿಯ ತಂತ್ರಜ್ಞಾನ ಬಳಸುವ ಕುರಿತ ಮಾಹಿತಿ, ಭದ್ರತೆ, ಮೇಲ್ವಿಚಾರಣೆ ಮತ್ತು ಜಾಗೃತ ದಳಕ್ಕಾಗಿ ಹೊಸದಾಗಿ ನೇಮಕಗೊಂಡಿರುವ ಹೆಚ್ಚುವರಿ ಡೈರೆಕ್ಟರ್ ಜನರಲ್‌ಗಳ ಪ್ರಗತಿ ವರದಿ ನೀಡುವಂತೆ ಸೂಚಿಸಿದೆ. ಇದನ್ನೂ ಓದಿ: ರಾಷ್ಟ್ರವ್ಯಾಪಿ ಪ್ರತಿಭಟನೆಗೆ ʻಕಾಕ್ರೋಚ್ʼ ಕರೆ – ದೆಹಲಿ ಪೊಲೀಸ್ ಇಲಾಖೆಯ ಎಲ್ಲಾ ಸಿಬ್ಬಂದಿ ರಜೆ ರದ್ದು

