– 480 ಪಾಕಿಸ್ತಾನ ಮೂಲದ ಸೋಶಿಯಲ್ ಮೀಡಿಯಾ ಖಾತೆಗಳು ಬ್ಲಾಕ್
ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ರಾಷ್ಟ್ರವ್ಯಾಪಿ ಪ್ರತಿಭಟನೆಗೆ (CJP Nationwide Protest) ಕರೆ ನೀಡಿದ ಹಿನ್ನೆಲೆ ದೆಹಲಿ ಪೊಲೀಸ್ ಇಲಾಖೆಯು ಎಲ್ಲಾ ಸಿಬ್ಬಂದಿಯ ರಜೆಗಳನ್ನ (leaves) ರದ್ದುಪಡಿಸಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.
ಜುಲೈ 24ರಂದು ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುವಂತೆ ಸಿಜೆಪಿ ಕರೆ ನೀಡಿದ್ದು, ರಾಜಧಾನಿ ದೆಹಲಿಯಲ್ಲಿ (Delhi) ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಈ ಹಿನ್ನೆಲೆ ದೆಹಲಿ ಪೊಲೀಸರ ಎಲ್ಲಾ ರೀತಿಯ ರಜೆಗಳನ್ನ ಮುಂದಿನ ಆದೇಶದವರೆಗೆ ರಜೆ ರದ್ದುಗೊಳಿಸಿರುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದೇ ವೇಳೆ, ಸಿಜೆಪಿ ಪ್ರತಿನಿಧಿ ಮಂಡಳಿಯು ಇಂದು ಮಧ್ಯಾಹ್ನ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ (Constitution Club of India) ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಿದೆ. ಸರ್ಕಾರದೊಂದಿಗೆ ಯಾವುದೇ ಸಂವಾದವು ತಟಸ್ಥ ಸ್ಥಳದಲ್ಲೇ ನಡೆಯಬೇಕು ಎಂಬ ತನ್ನ ನಿಲುವನ್ನ ಸಿಜೆಪಿ ಮುಂದುವರಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರೂ, ಜವಾಬ್ದಾರಿಯ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ ಹಾಗೂ ನೀಟ್ (NEET) ಪರೀಕ್ಷೆ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ತಮ್ಮ ಪ್ರಮುಖ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ಸಿಜೆಪಿ ಆರೋಪಿಸಿದೆ. ಹೀಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ಸ್ಪಷ್ಟಪಡಿಸಿದೆ.
ಪಾಕ್ ಮೂಲದ 480 ಸೋಶಿಯಲ್ ಮೀಡಿಯಾ ಖಾತೆ ಬ್ಲಾಕ್
ಸಿಜೆಪಿ ಪ್ರತಿಭಟನೆಯ ನಡುವೆಯೇ ದೆಹಲಿ ಪೊಲೀಸರು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದವು ಎಂದು ಶಂಕಿಸಲಾದ 480 ಸೋಶಿಯಲ್ ಮೀಡಿಯಾ ಖಾತೆಗಳನ್ನ ಬ್ಲಾಕ್ ಮಾಡಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಕಾಯ್ದೆ: 10 ವರ್ಷ ಜೈಲು, 1 ಕೋಟಿ ದಂಡಕ್ಕೆ ಕೇಂದ್ರ ಸಿದ್ಧತೆ!
ದೆಹಲಿ ಪೊಲೀಸರ ಪ್ರಕಾರ, ಈ ಖಾತೆಗಳು ಸಂಘಟಿತ ರೀತಿಯಲ್ಲಿ ವದಂತಿ ಮತ್ತು ತಪ್ಪು ಮಾಹಿತಿಯನ್ನ ಹರಡುತ್ತಿದ್ದು, ವಿಶೇಷವಾಗಿ ವಿದ್ಯಾರ್ಥಿಗಳು ಹಾಗೂ ಯುವಜನರನ್ನ ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಪತ್ತೆ ಹಚ್ಚಲು ಎಐ, ಫೇಶಿಯಲ್ ರೆಕಗ್ನಿಷನ್ ಮೊರೆ ಹೋದ ಪೊಲೀಸರು
