* ಬೆನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ ತಾತ್ಕಾಲಿಕ ವೇಗ ನಿರ್ಬಂಧ
ಬೆಂಗಳೂರು: ಬೆನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ ತಾತ್ಕಾಲಿಕ ವೇಗ ನಿರ್ಬಂಧ ಕ್ರಮಕೈಗೊಳ್ಳಲಾಗಿದೆ. ಇನ್ಮುಂದೆ ನೇರಳೆ ಮಾರ್ಗದಲ್ಲಿ ರೈಲಿನ ವೇಗ ಕಡಿಮೆಯಾಗಲಿದೆ.
ಈ ಸಂಬಂಧ ಬಿಎಂಆರ್‌ಸಿಎಲ್ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಓಪನ್ ವೆಬ್ ಗರ್ಡರ್ (OWG) ನಿಗದಿತ ನಿರ್ವಹಣೆ ಕಾರ್ಯ ಮಾಡಲಾಗ್ತಿದೆ. ನಿಯಮಿತವಾಗಿ ವೆಬ್ ಗರ್ಡರ್ ನಿರ್ವಹಣೆ ಕುರಿತು ಪರಿಶೀಲನೆ ನಡೆಸಲಾಗುತ್ತೆ. ಈ ಸಂದರ್ಭದಲ್ಲಿ ರೈಲುಗಳ ವೇಗಕ್ಕೆ ಕಡಿವಾಣ ಹಾಕಲಾಗುವುದು.
ಸಾಮಾನ್ಯವಾಗಿ ಗರ್ಡರ್ ಮೇಲೆ ರೈಲಿನ ವೇಗ ಗಂಟೆಗೆ 65ಕಿ.ಮೀ ಇರುತ್ತೆ. ನಿರ್ವಹಣಾ ಅವಧಿಯಲ್ಲಿ ಈ ಅವಧಿ ಕಡಿಮೆ ಮಾಡಲಾಗುತ್ತದೆ. ನಿರ್ವಹಣಾ ಹಿನ್ನೆಲೆ ರೈಲುಗಳನ್ನು ತಾತ್ಕಾಲಿಕವಾಗಿ ಗಂಟೆಗೆ ಗರಿಷ್ಠ 40ಕಿ.ಮೀ. ವೇಗದಲ್ಲಿ ಚಾಲನೆ ಮಾಡಲಾಗುತ್ತದೆ. ಇನ್ನುಳಿದಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಇರಲಿದೆ.
ಈ ಸಂದರ್ಭದಲ್ಲಿ ಪ್ರಯಾಣದ ಸಮಯದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸವಷ್ಟೇ ಉಂಟಾಗಲಿದೆ. ನಿರ್ವಹಣಾ ಕಾರ್ಯವು 2026ರ ಅಕ್ಟೋಬರ್ ಎರಡನೇ ವಾರದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕಾರ್ಯ ಪೂರ್ಣಗೊಂಡ ನಂತರ ತಾಂತ್ರಿಕ ಮೌಲ್ಯಮಾಪನದ ಆಧಾರದ ಮೇಲೆ ತಾತ್ಕಾಲಿಕ ವೇಗ ನಿರ್ಬಂಧವನ್ನು ಮರುಪರಿಶೀಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
