– ನಾನು ಸಂಪಾದನೆ ಮಾಡೋದಕ್ಕೂ ನಿಮ್ಮಮ್ಮ ಬಿಡ್ತಿಲ್ಲ ಅಂತಾ ಮಗಳಿಗೆ ಹೇಳ್ತಿದ್ದ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿಯನ್ನ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಂದುಶೇಖರ್ನ ಕೃತ್ಯಕ್ಕೆ ಸಂಬಂಧಿಸಿದಂತೆ ಒಂದೊಂದೇ ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಿವೆ.
ಕೌಟುಂಬಿಕ ಕಲಹವೇ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುವುದಾಗಿ ಪೊಲೀಸರು (Bengaluru Police) ತಿಳಿಸಿದ್ದಾರೆ. ಆರೋಪಿಯ ಮಗಳ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ.
ಮಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದ ತಂದೆ
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಹಂತಕ ಇಂದುಶೇಖರ್ ತನ್ನ ಮಗಳ ಮನಸ್ಸಿನಲ್ಲಿ ತಾಯಿಯ ವಿರುದ್ಧವೇ ದ್ವೇಷ ಮೂಡಿಸುವ ರೀತಿಯಲ್ಲಿ ಮಾತನಾಡುತ್ತಾ, ಪ್ರತಿದಿನ ಆಕೆಯ ಬ್ರೈನ್ವಾಷ್ (Brainwash) ಮಾಡ್ತಿದ್ದ.
ನಿಮ್ಮ ಅಮ್ಮನ ಕುಟುಂಬದವರಿಂದಲೇ ನನಗೆ ಈ ಸ್ಥಿತಿ ಬಂದಿದೆ. ನಾನು ಸಂಪಾದನೆ ಮಾಡುವುದಕ್ಕೂ ನಿಮ್ಮ ಅಮ್ಮ ಬಿಡುತ್ತಿಲ್ಲ. ಕೆಲಸಕ್ಕೆ ಹೋಗಲು ನಿಮ್ಮ ಅಜ್ಜಿ ಸಮಸ್ಯೆ ಮಾಡ್ತಿದ್ದಾಳೆ. ಹೀಗೆಯೇ ಮುಂದುವರಿದರೆ ನಾನು ಬದುಕುವುದಿಲ್ಲ, ಸತ್ತು ಹೋಗುತ್ತೇನೆ ಎಂದು ಹೇಳುತ್ತಾ ಮಗಳ ಮನಸ್ಸಿನಲ್ಲಿ ತಾಯಿಯ ಕುಟುಂಬದವರ ಬಗ್ಗೆ ದ್ವೇಷ ಭಾವನೆ ಮೂಡಿಸುತ್ತಿದ್ದ.
ಅಷ್ಟೇ ಅಲ್ಲ….. ನಾನು ದಿನವಿಡೀ ದುಡಿದು ನಿನ್ನನ್ನು ಸಾಕುತ್ತಿದ್ದೇನೆ. ನಿಮ್ಮ ಅಮ್ಮನ ನಡತೆ ಸರಿಯಿಲ್ಲ. ಹೀಗಾಗಿ ನನ್ನ ಮೇಲೆ ಜಗಳ ಮಾಡ್ತಾಳೆ ಅಂತಾ ವಿಷಬೀಜ ಬಿತ್ತುತ್ತಲೇ ಬಂದಿದ್ದ. ಅಪ್ಪ – ಅಮ್ಮನ ಜಗಳ ನೋಡಿ ರೋಸಿ ಹೋಗಿದ್ದ ಮಗಳು, ಅಪ್ಪನ ಜೊತೆ ಅತಿಯಾದ ಸಲುಗೆ ಪ್ರೀತಿ ಬೆಳೆಸಿಕೊಂಡಳು. ಇದೇ ವೇಳೆ ಅಮ್ಮನನ್ನ ದ್ವೇಷ ಮಾಡುತ್ತಾ ಬೆಳೆದಳು. ಹೀಗಾಗಿ ಅಪ್ಪನಿಗೆ ಕೊಲೆಯಲ್ಲಿ ಸಾಥ್ ನೀಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
7 ಮಂದಿಯ ಹತ್ಯೆ ಬಳಿಕವೂ ಪಶ್ಚಾತ್ತಾಪವಿಲ್ಲ
ಬೆಂಗಳೂರಿನಲ್ಲಿ ನಡೆದ ಈ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಆರೋಪಿ ಇಂದುಶೇಖರ್ನ ವರ್ತನೆ ಪೊಲೀಸರಿಗೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಳು ಮಂದಿಯ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಇಂದುಶೇಖರ್ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿ ಸುನೀತಾ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿಯನ್ನು ಹತ್ಯೆ ಮಾಡಿ, ಮೃತದೇಹಗಳನ್ನು ವಿವಿಧ ಸ್ಥಳಗಳಲ್ಲಿ ಎಸೆದಿರುವ ಆರೋಪ ಆತನ ಮೇಲಿದೆ.
ಇಟಿಯೋಸ್ ಕಾರಿನಲ್ಲೇ ಮೃತದೇಹಗಳ ಸಾಗಾಟ!
ಹತ್ಯೆಯ ಬಳಿಕ ಮೃತದೇಹಗಳನ್ನು ಸಾಗಿಸಲು ಆರೋಪಿ ತನ್ನ ಇಟಿಯೋಸ್ ಕಾರನ್ನ ಬಳಸಿದ್ದಾನೆ. ಮೃತದೇಹಗಳನ್ನು ಸಾಗಿಸುವ ಸಂದರ್ಭದಲ್ಲಿ ಯತೀನ್ ಎಂಬಾತ ಇದನ್ನ ಕಣ್ಣಾರೆ ಕಂಡಿದ್ದಾನೆ. ‘ಕಸ ಇದೆ, ಬಿಸಾಡಿ ಬರುತ್ತೇನೆ’ ಎಂದು ಯತೀನ್ಗೆ ಹೇಳಿ ಆರೋಪಿ ಅಲ್ಲಿಂದ ತೆರಳಿದ್ದ. ಮೃತದೇಹಗಳನ್ನು ಸಾಗಿಸುವ ಮೊದಲು ಎರಡು ದಿನಗಳ ಹಿಂದೆಯೇ ಹತ್ಯೆ ಮಾಡಿ ಮೂಟೆ ಕಟ್ಟಿದ್ದ ಎಂಬ ಮಾಹಿತಿಯೂ ತನಿಖೆಯ ವೇಳೆ ಹೊರಬಂದಿದೆ ಎಂದು ಮೂಲಗಳು ತಿಳಿಸಿವೆ.
