ಮೈಸೂರು: ಮುಡಾ ಪ್ರಕರಣದಲ್ಲಿ (MUDA Case) ಕೋರ್ಟ್ ತನಿಖೆಗೆ ಅಸ್ತು ಎಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ದೂರುದಾರರಲ್ಲಿ ಒಬ್ಬರಾದ ಪ್ರದೀಪ್ ಕುಮಾರ್ (Pradeep Kumar) ಮೈಸೂರು ಲೋಕಾಯುಕ್ತ (Mysuru Lokayukta) ಎಸ್‌ಪಿಗೆ ದೂರು ನೀಡಿದ್ದಾರೆ.
ಜೆಡಿಎಸ್ ಮುಖಂಡರ ಜೊತೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ತೆರಳಿದ ಪ್ರದೀಪ್ ಕುಮಾರ್, ಸಿದ್ದರಾಮಯ್ಯ, ಯತೀಂದ್ರ ಸಿದ್ದರಾಮಯ್ಯ, ಪಾರ್ವತಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಮೇಲೆ ಎಫ್‌ಐಆರ್ (FIR) ಹಾಕಬೇಕು ಎಂದು ದೂರು ನೀಡಿದರು.
ಈ ವೇಳೆ ಹಿಂದಿನ ದೂರುಗಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂಬ ಬಗ್ಗೆ ಹಿಂಬರಹ ನೀಡುವಂತೆ ಪ್ರದೀಪ್ ಕುಮಾರ್ ಒತ್ತಾಯಿಸಿದರು. ಆದರೆ ಈಗ ಕೊಡಲು ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಹಿಂಬರಹ ಕೊಡುತ್ತೇನೆ ಎಂದು ಲೋಕಾಯುಕ್ತ ಎಸ್‌ಪಿ ತಿಳಿಸಿದರು. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂಗೆ ಅಸಲಿ ಸಂಕಷ್ಟ – ಕೋರ್ಟ್ ಆದೇಶದಲ್ಲಿ ಏನಿದೆ? ಯಾರ ವಿರುದ್ಧ ತನಿಖೆ?
ಇದಕ್ಕೆ ಪ್ರದೀಪ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡದ ಹೊರತು ಲೋಕಾಯುಕ್ತ ತನಿಖೆ ಸಾಧ್ಯವಾಗಲ್ಲ ಎಂದರು.
ಸಿದ್ದರಾಮಯ್ಯನವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ದೂರುದಾರ ಪ್ರದೀಪ್ ಕುಮಾರ್ ಇಂದು ಸುಪ್ರೀಂಕೋರ್ಟ್‌ನಲ್ಲಿ ಕೇವಿಯೆಟ್ ಹಾಕಿದ್ದಾರೆ.