ಅಹಮದಾಬಾದ್: 2008ರಿಂದ ಕಳೆದ ವರ್ಷದವರೆಗೂ ಪ್ರತಿ ಐಪಿಎಲ್‌ನಲ್ಲಿ (IPL) ಆಡಿರುವ ದಿಗ್ಗಜ ಕ್ರಿಕಟೆಗ ಎಂ.ಎಸ್ ಧೋನಿ (MS Dhoni) ಇದೇ ಮೊದಲ ಬಾರಿಗೆ ಸಂಪೂರ್ಣ ಆವೃತ್ತಿಗೆ ಗೈರಾಗಿದ್ದಾರೆ.
ಈ ವರ್ಷ ಐಪಿಎಲ್ ಆರಂಭಕ್ಕೂ ಮುನ್ನವೇ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಧೋನಿ ಲೀಗ್ ಹಂತದ 14 ಪಂದ್ಯಗಳನ್ನೂ ಆಡಿಲ್ಲ. ಆರಂಭದಲ್ಲಿ ಕೆಲ ಪಂದ್ಯಗಳಿಗೆ ಮಾತ್ರ ಗೈರಾಗಲಿದ್ದಾರೆ ಎಂದು ಹೇಳಲಾಗಿತ್ತಾದರೂ, ಅಭ್ಯಾಸದ ವೇಳೆ ಮತ್ತೆ ಗಾಯಗೊಂಡ ಕಾರಣ ಒಂದೂ ಪಂದ್ಯ ಆಡಿಲ್ಲ. ಇದರೊಂದಿಗೆ ಧೋನಿ ನಿವೃತ್ತಿಯ ಬಗ್ಗೆ ಚರ್ಚೆ ಜೋರಾಗಿದೆ.
ಧೋನಿ ಜುಲೈನಲ್ಲಿ 45ನೇ ವರ್ಷಕ್ಕೆ ಕಾಲಿಡಲಿದ್ದು, ಗಾಯಗೊಂಡ ಹಿನ್ನೆಲೆ ಅವರ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ಮುಂದಿನ ವರ್ಷದ ಐಪಿಎಲ್‌ಗೂ ಮುನ್ನವೇ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಗುಜರಾತ್ ಟೈಟಾನ್ಸ್ ತಂಡದ ಆಲ್‌ರೌಂಡ್ ಆಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಧೂಳಿಪಟ ಆಗಿದೆ. 89 ರನ್‌ಗಳ ಬೃಹತ್ ಅಂತರದಿAದ ಸೋತ ಸಿಎಸ್‌ಕೆ, ಇತಿಹಾಸದಲ್ಲೇ ಮೊದಲ ಬಾರಿಗೆ ಸತತ 3ನೇ ಬಾರಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿದೆ.
2024ರಲ್ಲಿ ಆರ್‌ಸಿಬಿ ವಿರುದ್ಧ ನಾಕೌಟ್ ಪಂದ್ಯದಲ್ಲಿ ಸೋತ ಸಿಎಸ್‌ಕೆ, 2025 ರಲ್ಲಿ ಲೀಗ್‌ನಲ್ಲಿ ಕೇವಲ 4 ಪಂದ್ಯ ಗೆದ್ದು ಹೊರಬಿದ್ದಿತ್ತು. ಈ ಬಾರಿ ಸತತ ಬ್ಯಾಟಿಂಗ್, ಬೌಲಿಂಗ್ ವೈಫಲ್ಯ ಎದುರಿಸಿದ ಸಿಎಸ್‌ಕೆ ಲೀಗ್‌ನಲ್ಲೇ ಹೊರನಡೆದಿದೆ.

