ಕರಾಕಾಸ್: ವೆನೆಜುವೆಲಾದಲ್ಲಿ(Venezuela Earthquake) ಸಂಭವಿಸಿದ ಭೀಕರ ಅವಳಿ ಭೂಕಂಪದ ನಡುವೆ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ಫುಟ್‌ಬಾಲ್ ಆಟಗಾರ ಹೆಕ್ಟರ್ ಬೆಲ್ಲೊ(Héctor Bello) ಅವರ ಪತ್ನಿ ಆಂಡ್ರಿಯಾ (Andrea Bello), ತಮ್ಮ ಒಂದು ವರ್ಷದ ಮಗಳು ಅಲಾನಾಳನ್ನು ರಕ್ಷಿಸುವ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಸಂಭವಿಸಿದ ಭೂಕಂಪದ ತೀವ್ರತೆಗೆ ಅವರ ನಿವಾಸದ ಕಟ್ಟಡ ಕುಸಿದು ಬಿದ್ದಿತ್ತು. ಆ ವೇಳೆ ಆಂಡ್ರಿಯಾ ತಮ್ಮ ಮಗಳನ್ನು ಎದೆಗೆ ಅಪ್ಪಿಕೊಂಡು ರಕ್ಷಿಸಲು ಪ್ರಯತ್ನಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಒಂದು ವರ್ಷದ ಅಲಾನಾ ಜೀವಂತವಾಗಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಕಾರಕಾಸ್‌ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ದುರದೃಷ್ಟವಶಾತ್, ಮಗಳನ್ನು ರಕ್ಷಿಸಲು ಮುಂದಾದ ತಾಯಿ ಆಂಡ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತ್ನಿಯ ನಿಧನದ ಬಳಿಕ ಹೆಕ್ಟರ್ ಬೆಲ್ಲೊ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನೀನೇ ನಮ್ಮ ಜೀವನದ ನಿಜವಾದ ಹೀರೋ. ನಮ್ಮ ಮಗಳು ದೊಡ್ಡವಳಾದ ಮೇಲೆ, ನೀನು ಅವಳನ್ನು ಎಷ್ಟು ಪ್ರೀತಿಸುತ್ತಿದ್ದೆ ಮತ್ತು ಅವಳಿಗಾಗಿ ನಿನ್ನ ಜೀವವನ್ನೇ ತ್ಯಾಗ ಮಾಡಿದ್ದೆ ಎಂಬುದನ್ನು ನಾನು ಹೇಳುತ್ತೇನೆ. ಕೊನೆಯ ಉಸಿರಿರುವವರೆಗೂ ನೀನು ನಮ್ಮ ಮಗಳನ್ನು ಬಿಟ್ಟಿರಲಿಲ್ಲ. ಅವಳನ್ನು ಉಳಿಸಲು ನಿನ್ನ ಜೀವವನ್ನೇ ಕೊಟ್ಟೆ. ನಿನ್ನ ಧೈರ್ಯದ ಕಥೆಯನ್ನು ನಾನು ಅವಳಿಗೆ ಹೇಳುತ್ತೇನೆ ಎಂದು ಪೋಸ್ಟ್ ಕ್ಯಾಪ್ಷನ್‌ನಲ್ಲಿ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ಈ ವರ್ಷವೇ ನಾನು ಬಾಂಗ್ಲಾದೇಶಕ್ಕೆ ಮರಳಲಿದ್ದೇನೆ : ಶೇಖ್ ಹಸೀನಾ
View this post on Instagram
ತಮ್ಮ ಮಗಳನ್ನು ಉದ್ದೇಶಿಸಿ, ಮಗಳೇ… ನೀನು ಧೈರ್ಯವಾಗಿರಬೇಕು. ನನ್ನ ಹೃದಯ ಈಗ ಚೂರಾಗಿದೆ. ಅದನ್ನು ಮತ್ತೆ ಜೋಡಿಸುವ ಶಕ್ತಿ ನೀನೇ. ಇನ್ನು ಮುಂದೆ ನಾವು ಇಬ್ಬರೇ. ನಿನ್ನ ಅಮ್ಮ ಸ್ವರ್ಗದಿಂದ ನಮ್ಮನ್ನು ನೋಡಿಕೊಳ್ಳುತ್ತಾಳೆ. ನಿನ್ನನ್ನು ನಾನು ನನ್ನ ಜೀವಕ್ಕಿಂತ ಹೆಚ್ಚಾಗಿ ಕಾಪಾಡುತ್ತೇನೆ ಎಂದು ಬರೆದಿದ್ದಾರೆ.
ವೆನೆಜುವೆಲಾದಲ್ಲಿ ಸಂಭವಿಸಿದ ಈ ಅವಳಿ ಭೂಕಂಪದಿಂದ ಭಾರಿ ಪ್ರಮಾಣದ ಹಾನಿಯಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಮೃತರ ಸಂಖ್ಯೆ 900 ದಾಟಿದೆ. ಇನ್ನೂ ಸಾವಿರಾರು ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.ಇದನ್ನೂ ಓದಿ: ತೊಡೆ ತಟ್ಟೋದು, ಪ್ರಚೋದನೆ ಕೊಡೋದು ತಪ್ಪು: ಪ್ರಿಯಾಂಕ್ ಖರ್ಗೆ
