– ಮೋದಿ ರಹಸ್ಯಗಳೆಲ್ಲವೂ ಈ ಫೋನ್ನಲ್ಲಿದೆ, ಚರ್ಚೆಗೆ ಬಂದ್ರೆ ತಿಳಿಯುತ್ತೆ
– ಗೌತಮ್ ಅದಾನಿ, ಮೋಹನ್ ಭಾಗವತ್ ತೀರ್ಪುಗಾರರಾಗಲಿ ಎಂದ ವಿಪಕ್ಷ ನಾಯಕ
ನವದೆಹಲಿ: ನಾನು ಮಾಡಿರುವ ಎಲ್ಲಾ ಆರೋಪಗಳಿಗೆ ನನ್ನ ಫೋನ್ನಲ್ಲಿ ಪೂರಕವಾದ ಸಾಕ್ಷ್ಯಗಳಿವೆ. ಈ ರಹಸ್ಯ ಮೋದಿಗೆ (PM Modi) ತಿಳಿದಿದ್ದೇ, ಅವರು ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಬಾಂಬ್ ಸಿಡಿಸಿದ್ದಾರೆ.
ಎಕ್ಸ್ನಲ್ಲಿ (X) ವಿಡಿಯೋ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು ಪ್ರಧಾನಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಮತ್ತೊಮ್ಮೆ ಬಹಿರಂಗ ಚರ್ಚೆಗೆ ಸವಾಲ್ ಹಾಕಿದ್ದಾರೆ.
ʻXʼನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ನಾನು ಮಾಡಿರುವ ಎಲ್ಲಾ ಆರೋಪಗಳಿಗೆ ಪೂರಕ ಸಾಕ್ಷ್ಯ ಇಲ್ಲಿದೆ. ಅದು ಈ ಫೋನ್ನಲ್ಲೇ ಇದೆ. ಪ್ರಧಾನಿಯವರು ನನ್ನ ಫೋನ್ ಟ್ಯಾಪ್ ಮಾಡಿಸುವುದರಿಂದ ಅವರಿಗೆ ಈ ವಿಚಾರ ಗೊತ್ತಿದೆ. ಅವರು ನನ್ನೊಂದಿಗೆ ನೇರ ಚರ್ಚೆಗೆ ಬಂದರೆ, ಯಾರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ? ಯಾರು ನಿಜವಾದ ದೇಶವಿರೋಧಿ? ಎಂಬ ಸತ್ಯ ಎಲ್ಲರಿಗೂ ತಿಳಿಯುತ್ತದೆ. ಅವರಿಗೆ ಸಂಬಂಧಿಸಿದ ಇನ್ನೂ ಹಲವು ರಹಸ್ಯ ವಿವರಗಳು ನನಗೆ ತಿಳಿದಿದ್ದು, ಅವೆಲ್ಲವೂ ನನ್ನ ಫೋನ್ನಲ್ಲಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ನೇರವಾಗಿ ಸವಾಲ್ ಹಾಕಿರುವ ರಾಹುಲ್ ಗಾಂಧಿ, ದೀರ್ಘ ಭಾಷಣಗಳ ಬದಲಿಗೆ ನೇರವಾಗಿ ವಿಷಯಗಳ ಬಗ್ಗೆ ಚರ್ಚೆ ನಡೆಸೋಣ. ಇಂತಹ ಚರ್ಚೆ ನಡೆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನೂ ಇನ್ಸ್ಟಾಗ್ರಾಂನಲ್ಲಿ ನಡೆದ ‘ಆಸ್ಕ್ ಮಿ’ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದೀಯ ಚರ್ಚೆಯನ್ನೇ ಸೂಕ್ತ ವೇದಿಕೆ ಎಂದು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ್ದಾರೆ. ಲೋಕಸಭೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡುತ್ತಿಲ್ಲ. ಮೈಕ್ರೊಫೋನ್ ಕೂಡ ಸ್ಥಗಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್), ಚೀನಾ ವಿಚಾರ, ಜನರಲ್ ನರಾವಣೆ ಅವರ ಪುಸ್ತಕ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ರಾಹುಲ್ ಗಾಂಧಿ ದೂರಿದ್ದಾರೆ. ಇದನ್ನೂ ಓದಿ: ಯಲಹಂಕದಲ್ಲಿ ಪತ್ನಿ ಎದುರೇ ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ
ನರೇಂದ್ರ ಮೋದಿ ಮತ್ತು ತಾವು ಮುಖಾಮುಖಿಯಾಗಿ ಕುಳಿತು ಚರ್ಚೆ ನಡೆಸಬೇಕು. ಇಬ್ಬರೂ ಪರಸ್ಪರ ಆರೋಪಗಳನ್ನು ಮಾಡಿಕೊಳ್ಳುವ ಮೂಲಕ ವಿಷಯಗಳನ್ನು ನೇರವಾಗಿ ಚರ್ಚಿಸಬೇಕು. ಇದಕ್ಕೆ ಯಾವುದೇ ದೀರ್ಘ ಭಾಷಣಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Rahul Gandhi challenges PM Modi to a one-on-one debate
Congress leader Rahul Gandhi said that his phone contains evidence supporting all his allegations and claimed that the Prime Minister has tapped his phone.
He further said that a one-on-one debate would reveal who is controlled by foreign powers, who is anti-national, and since when, adding that he has several other details on his phone.
@RahulGandhi
— Atulkrishan (@iAtulKrishan1) November 13, 2026
ಈ ಚರ್ಚೆಗೆ ತೀರ್ಪುಗಾರರನ್ನಾಗಿ ಉದ್ಯಮಿ ಗೌತಮ್ ಅದಾನಿ ಅಥವಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆದರೆ ಅವರು ಪ್ರಧಾನಿಯಾಗಿ ಉಳಿಯುವುದಿಲ್ಲ ಎಂಬ ವಿಶ್ವಾಸವಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಹಿಂದೆ ಕೂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ಆದರೆ, ಬಿಜೆಪಿ ನಾಯಕರು ಸಂಸತ್ತೇ ಚರ್ಚೆಗೆ ಸೂಕ್ತ ವೇದಿಕೆ ಎಂದು ಹೇಳಿ ಈ ಸವಾಲನ್ನು ತಿರಸ್ಕರಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ: ದಿಲ್ಲಿಯಲ್ಲಿ ವಿಷವಾಗುತ್ತಿದೆ ಉಸಿರಾಡುವ ಗಾಳಿ – WHO ಮಿತಿಗಿಂತ ಹಲವು ಪಟ್ಟು ಹೆಚ್ಚಿದ ಪಿಎಂ 2.5 ಪ್ರಮಾಣ
