ಮಡಿಕೇರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣಕ್ಕೆ (Valmiki Corporation Scam) ಸಂಬಂಧಿಸಿದಂತೆ ದಾಖಲಾಗಿದ್ದ 8 ಎಫ್‌ಐಆರ್‌ಗಳ ತನಿಖೆ ಪೂರ್ಣಗೊಂಡಿದ್ದು, ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ ಎಂದು ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ (AS Ponnanna) ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸಿಐಡಿ ತನಿಖೆಯಲ್ಲಿ (CID Investigation) ಸಚಿವ ನಾಗೇಂದ್ರ ಅವರ ಪಾತ್ರಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ನಿಗಮದ ಹಣ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿರುವುದು, ಹಣದ ದುರುಪಯೋಗ, ನಂತರ ಹಣ ವಾಪಸ್ ಪಡೆಯಲಾಗಿರುವ ಕುರಿತು ತನಿಖೆ ನಡೆದಿದೆ. ವಾಪಸ್ ಪಡೆದ ಹಣಕ್ಕೂ ನಾಗೇಂದ್ರ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.

ನಿಗಮದ ಯಾವುದೇ ಫೈಲ್‌ಗಳಲ್ಲಿ ಅಥವಾ ಹಣ ವರ್ಗಾವಣೆಯ ನಿರ್ಧಾರಗಳಲ್ಲಿ ಸಚಿವರ ಪಾತ್ರವಿದೆ ಎಂಬುದಕ್ಕೆ ಸಾಕ್ಷ್ಯ ದೊರೆತಿಲ್ಲ. ತನಿಖೆ ಕೂಡ ಪೂರ್ಣಗೊಂಡಿರುವ ಹಿನ್ನೆಲೆ ನಾಗೇಂದ್ರ (B Nagendra) ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದಿದ್ದಾರೆ.
ಇದೇ ವೇಳೆ ಇ.ಡಿ. ಮತ್ತು ಸಿಬಿಐ ತನಿಖೆಗಳ ಕುರಿತು ಪ್ರತಿಕ್ರಿಯಿಸಿದ ಪೊನ್ನಣ್ಣ, ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಗಳು ರಾಜಕೀಯ ಪ್ರೇರಿತವಾಗಿವೆ. ತನಿಖೆಯಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಸ್ಪಷ್ಟವಾಗಿದೆ. ತಪ್ಪಿತಸ್ಥರಾಗಿದ್ದರೆ ನ್ಯಾಯಾಲಯ ತೀರ್ಮಾನಿಸಲಿ. ಆದರೆ ತನಿಖೆಯಿಂದ ಮುಕ್ತರಾದ ಬಳಿಕ ಅವರು ಏಕೆ ರಾಜೀನಾಮೆ ನೀಡಬೇಕು? ಎಂದು ಪ್ರಶ್ನಿಸಿದ್ದಾರೆ.

