– ಆಸರ ಓಣಿಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ (Old Hubballi) ಆಸರ ಓಣಿಯ ಪುಷ್ಕರಣಿ (Pushkarini Row) ವಿವಾದ ತಾರಕಕ್ಕೇರಿದೆ. ಪುಷ್ಕರಣಿ ಸ್ಥಳ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿದ್ದು, ಅನಧಿಕೃತ ರಸ್ತೆಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿವೆ.
ಅನಧಿಕೃತವಾಗಿ ನಿರ್ಮಾಣ ಮಾಡಿರುವ ರಸ್ತೆ ಕಿತ್ತು ಹಾಕುತ್ತವೆಂದು ಹಿಂದೂಪರ ಸಂಘಟನೆಗಳು ಹೇಳಿದೆ. ಆದರೆ, ರಸ್ತೆ ಕಿತ್ತುಹಾಕಲು ಬಿಡೋದಿಲ್ಲ ಅಂತ ಮುಸ್ಲಿಂ ಸಮುದಾಯ ಹೇಳಿಕೆ ನೀಡಿದೆ. ಇದರಿಂದ ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಹಳೇ ಹುಬ್ಬಳ್ಳಿ ಈ ಹಿಂದೆ ನಡೆದಿರುವ ಗಲಭೆ ಪ್ರದೇಶದಲ್ಲಿಯೇ ಮತ್ತೊಂದು ವಿವಾದ ತಲೆಯೆತ್ತಿದೆ. ಭವಾನಿ ಶಂಕರ್ ದೇವಸ್ಥಾನ ಮುಂಭಾಗದಲ್ಲಿ ಪುಷ್ಕರಣಿ ಇದ್ದು, ಅದನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎನ್ನುವುದು ಹಿಂದೂಪರ ಸಂಘಟನೆಗಳ ಆರೋಪವಾಗಿದೆ. ಒಂದು ಕಡೆ ಮಸೀದಿ, ಮತ್ತೊಂದು ಕಡೆ ದೇವಸ್ಥಾನ ನಡುವೆ ಇರುವ ಅತ್ಯಂತ ಸೂಕ್ಷ್ಮ ಜಾಗದಲ್ಲಿ ವಿವಾದ ಉಂಟಾಗಿದೆ. ಇದನ್ನೂ ಓದಿ: ಎ ಖಾತಾ ಅರ್ಜಿ ಸಲ್ಲಿಕೆಗೆ ನಾಳೆ ಕೊನೆ ದಿನ – ಅವಧಿ ವಿಸ್ತರಣೆ ಇಲ್ಲ
ಹಳೇ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಪೊಲೀಸ್ ಸರ್ಪಗಾವಲು ಹೆಚ್ಚಿಸಲಾಗಿದೆ. ಆಸರ ಓಣಿಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧ ವಿಧಿಸಲಾಗಿದೆ. ಬಿಎನ್‌ಎಸ್‌ಎಸ್ 163 ಸೆಕ್ಷನ್ ಕಾಯ್ದೆಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಳೇ ಹುಬ್ಬಳ್ಳಿ ಪ್ರಮುಖ ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ರಸ್ತೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿಭಟನೆ ನಡೆಸದಂತೆ, ಘೋಷಣೆ ಕೂಗದಂತೆ, ಗುಂಪು ಗುಂಪಾಗಿ ಜನ ಓಡಾಡಲು ಸಹ ನಿಷೇಧ ಹೇರಲಾಗಿದೆ. ಎಂಟು ಕೆಸ್‌ಆರ್‌ಪಿ ತುಕಡಿ, ಓರ್ವ ಐಜಿಪಿ, ಮೂವರು ಡಿಸಿಪಿ, ಹತ್ತು ಎಸಿಪಿ, 20 ಇನ್ಸ್ಪೆಕ್ಟರ್ ನೇತೃತ್ವದಲ್ಲಿ 1500 ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಚನ್ನಪೇಟ ಗಾರ್ಡನ್ ಬಳಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ಪುಷ್ಕರಣಿ ಉಳಿಸಿ, ಭವಾನಿ ಶಂಕರ ಕೀರ್ತಿ ಬೆಳಸಿ ಅಂತ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದು, ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ. ಶಾಸಕ ಮಹೇಶ್ ಟೆಂಗಿನಕಾಯಿ, ಎಂಎಲ್ಸಿ ಪ್ರದೀಪ್ ಶೆಟ್ಟರ, ಅರವಿಂದ್ ಬೆಲ್ಲದ್ ಸೇರಿ ಬಿಜೆಪಿಯ ಅನೇಕ ನಾಯಕರು ಹಾಗೂ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಐಎಎಸ್ ಅಧಿಕಾರಿ ನಾಪತ್ತೆ

