ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯ ನಡುವೆ ಇರಾನ್ ಮಿಲಿಟರಿ ಪಡೆಗಳು ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ(Strait of Hormuz) ಮೇಲೆ ತಮಗೆ ಪೂರ್ಣ ನಿಯಂತ್ರಣವಿದೆ ಎಂದು ಘೋಷಿಸಿದ್ದು ಯಾವುದೇ ವಿದೇಶಿ ಹಸ್ತಕ್ಷೇಪದ ವಿರುದ್ಧ ತೀವ್ರ ಎಚ್ಚರಿಕೆ ನೀಡಿವೆ.
ಇರಾಕ್ ಭೇಟಿಯ ಸಂದರ್ಭದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಮುಂದಿನ 30 ದಿನಗಳವರೆಗೆ ಆಯಕಟ್ಟಿನ ಹಾರ್ಮುಜ್ ಜಲಸಂಧಿಯು ಸಂಪೂರ್ಣ ಇರಾನಿನ ನಿಯಂತ್ರಣದಲ್ಲಿ ಉಳಿಯುತ್ತದೆ ಎಂದು ಹೇಳಿದರು. ಹಾರ್ಮುಜ್ ಜಲಸಂಧಿಗೆ ಯಾವುದೇ ಸವಾಲು ಬಂದರೆ ಉದ್ವಿಗ್ನತೆ ಹೆಚ್ಚಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ (IRGC) ಮುಂದಿನ 30 ದಿನಗಳ ಅವಧಿಗೆ ಹಾರ್ಮುಜ್ ಜಲಸಂಧಿಯ ಸಂಪೂರ್ಣ ಭದ್ರತೆ ಮತ್ತು ಸಂಚಾರ ನಿಯಂತ್ರಣವನ್ನು ತನ್ನ ಹಸ್ತಕ್ಕೆ ತೆಗೆದುಕೊಂಡಿರುವುದಾಗಿ ಪ್ರಕಟಿಸಿದೆ. ಈ ಅವಧಿಯಲ್ಲಿ ಈ ಸಮುದ್ರ ಮಾರ್ಗದಲ್ಲಿ ಚಲಿಸುವ ಪ್ರತಿಯೊಂದು ಹಡಗಿನ ಮೇಲೂ ಕಣ್ಣಿಡಲಾಗುವುದು ಎಂದು ಇರಾನ್ ತಿಳಿಸಿದೆ. ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ; ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಅಟ್ಯಾಕ್ – ಇರಾನ್ ಮೇಲೆ ದಾಳಿ ನಡೆಸಿದ ಅಮೆರಿಕ

ಯಾವುದೇ ವಿದೇಶಿ ಶಕ್ತಿಗಳು ವಿಶೇಷವಾಗಿ ಅಮೆರಿಕ (US) ಅಥವಾ ಅದರ ಮಿತ್ರರಾಷ್ಟ್ರಗಳು ಈ ವಲಯದಲ್ಲಿ ಮಧ್ಯಪ್ರವೇಶಿಸಲು ಅಥವಾ ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಯತ್ನಿಸಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಇರಾನ್ ಸೇನೆ ಎಚ್ಚರಿಸಿದೆ. ಯಾವುದೇ ಉದ್ರೇಕಕಾರಿ ಕ್ರಮಗಳನ್ನು ಸಹಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಹಾರ್ಮುಜ್ ಜಲಸಂಧಿಯು ಜಾಗತಿಕವಾಗಿ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖವಾದ ಸಮುದ್ರ ಮಾರ್ಗವಾಗಿದೆ. ವಿಶ್ವದ ಒಟ್ಟು ಕಚ್ಚಾ ತೈಲದ (Crude Oil) ಸಾಗಣೆಯ ಸರಿಸುಮಾರು ಐದನೇ ಒಂದು ಭಾಗ (20% ಕ್ಕೂ ಹೆಚ್ಚು) ಇದೇ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಹೀಗಾಗಿ ಇರಾನ್‌ನ ಈ ಹಠಾತ್ ಕ್ರಮವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಆತಂಕ ಮೂಡಿಸಿದ್ದು, ತೈಲ ಬೆಲೆ ಏರಿಕೆಯಾಗುವ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಪಾಕ್ ಸೇನಾ ನೆಲೆ ಮೇಲೆ ಪುಲ್ವಾಮಾ ಮಾದರಿ ದಾಳಿ – 6 ಉಗ್ರರ ಹತ್ಯೆ, ನಾಲ್ವರು ಸೈನಿಕರು ಸಾವು
