– ಜಿ7 ಶೃಂಗಸಭೆ ಪೋಟೋ ವಿವಾದಕ್ಕೆ ಟ್ರಂಪ್ ವಿರುದ್ಧ ಮೆಲೋನಿ ಕಿಡಿ
ರೋಮ್: ಜಿ7 ಶೃಂಗಸಭೆಯಲ್ಲಿ(G7 Summit) ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni) ತಮ್ಮೊಂದಿಗೆ ಫೋಟೋ ತೆಗೆಸಿಕೊಳ್ಳಲು ಬೇಡಿಕೊಂಡಿದ್ದರು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಯನ್ನು ಮೆಲೋನಿ ತಳ್ಳಿಹಾಕಿದ್ದು, ಅದು ಸಂಪೂರ್ಣ ಸುಳ್ಳು ಎಂದು ತಿರುಗೇಟು ನೀಡಿದ್ದಾರೆ.
ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಟ್ರಂಪ್ ಮತ್ತು ಮೆಲೋನಿ ಭೇಟಿಯಾಗಿದ್ದರು. ಈ ಭೇಟಿಯ ಬಳಿಕ ಇಟಾಲಿಯನ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಮೆಲೋನಿ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳಲು ತುಂಬಾ ಆಸಕ್ತಿ ತೋರಿದ್ದರು. ಅವರು ಬೇಡಿಕೊಂಡ ಕಾರಣ ನಾನು ಫೋಟೋಗೆ ಒಪ್ಪಿಕೊಂಡೆ. ನನಗೇನು ಅವರೊಂದಿಗೆ ಮಾತನಾಡುವ ಅಗತ್ಯ ಇರಲಿಲ್ಲ. ಅವರು ನನ್ನೊಂದಿಗೆ ಮಾತನಾಡಿದ್ದಕ್ಕೆ ಖುಷಿಯಾಗಿರಬಹುದು ಎಂದು ಟ್ರಂಪ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿರುವ ಮೆಲೋನಿ, ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಟ್ರಂಪ್ ಹೇಳಿರುವುದು ಸಂಪೂರ್ಣವಾಗಿ ಕಟ್ಟುಕಥೆ. ಅಮೆರಿಕ ಅಧ್ಯಕ್ಷರು ತಮ್ಮ ಮಿತ್ರ ರಾಷ್ಟ್ರಗಳ ನಾಯಕರ ಬಗ್ಗೆ ಹೀಗೆ ಮಾತನಾಡುವುದು ಬೇಸರದ ಸಂಗತಿ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಬೇಕು. ನಾನು ಮತ್ತು ಇಟಲಿ ಯಾರ ಬಳಿಯೂ ಬೇಡಿಕೊಳ್ಳುವುದಿಲ್ಲ ಎಂದು ಮೆಲೋನಿ ತಿಳಿಸಿದ್ದಾರೆ.ಇದನ್ನೂ ಓದಿ: ಅಮೆರಿಕ – ಇರಾನ್ ಮಾತುಕತೆ ದಿಢೀರ್ ರದ್ದು
ಟ್ರಂಪ್ ಹೇಳಿಕೆ ಇಟಲಿಯ ರಾಜಕೀಯ ವಲಯದಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ. ಇಟಲಿ ಉಪ ಪ್ರಧಾನಿ ಅಂಟೋನಿಯೊ ತಜಾನಿ, ಟ್ರಂಪ್ ಹೇಳಿಕೆಯನ್ನು ಅವಮಾನಕರ ಎಂದು ಕರೆದಿದ್ದು, ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಒಂದು ಕಾಲದಲ್ಲಿ ಟ್ರಂಪ್ ಆಪ್ತರಾಗಿದ್ದ ಮೆಲೋನಿ, 2025ರಲ್ಲಿ ಅವರ ಪ್ರಮಾಣವಚನ ಸಮಾರಂಭಕ್ಕೂ ಹಾಜರಾಗಿದ್ದರು. ಆದರೆ ಇರಾನ್ ಯುದ್ಧ ಹಾಗೂ ಇತರ ರಾಜತಾಂತ್ರಿಕ ವಿಷಯಗಳ ಬಳಿಕ ಇಬ್ಬರ ನಡುವೆ ಅಂತರ ಹೆಚ್ಚಾಗಿದೆ.ಇದನ್ನೂ ಓದಿ: ಶಾಂತಿ ಒಪ್ಪಂದದ ಬಳಿಕವೂ ಇಸ್ರೇಲ್ ಆಕ್ರಮಣ – ವಾಯುದಾಳಿಗೆ ಲೆಬನಾನ್‌ನಲ್ಲಿ 16 ಬಲಿ
