– ರಜಾದಿನವಾದ್ದರಿಂದ ತಪ್ಪಿದ ಭಾರೀ ದುರಂತ
ತಿರುವನಂತಪುರಂ: ಇಲ್ಲಿನ ಕೋಝಿಕ್ಕೋಡ್‌ನ (Kozhikode) ತೈಲ ಕಾರ್ಖನೆಯಲ್ಲಿ (Oil Factory) ಸಂಭವಿಸಿದ ಭಾರೀ ಅವಘಡದಿಂದಾಗಿ (Fire Accident) ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿದ್ದು, ಸತತ 8 ಗಂಟೆಗಳ ಕಾಲ ಮಿಲ್ ಹೊತ್ತಿಯುರಿದಿದೆ.
ಭಾನುವಾರ (ಜು.26) ಸಂಜೆ ಕೋಝಿಕ್ಕೋಡ್‌ನ ಬೇಪೋರ್‌ನಲ್ಲಿರುವ ರೇಣುಕಾ ಆಯಿಲ್ & ಫ್ಲೋರ್ ಮಿಲ್‌ನಲ್ಲಿ (Renuka Oil and Flour Mill) ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಭಾನುವಾರವಾದ್ದರಿಂದ ಕಾರ್ಖಾನೆಯಲ್ಲಿ ಕಾರ್ಮಿಕರು ಇರಲಿಲ್ಲ. ಸೆಕ್ಯೂರಿಟಿ ಗಾರ್ಡ್ ಒಬ್ಬರು ಮಾತ್ರ ಸ್ಥಳದಲ್ಲಿದ್ದರು. ಬೆಂಕಿ ಕಾಣಿಸಿಕೊಂಡ ಕೂಡಲೇ ಅವರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹೊತ್ತಿ ಉರಿದ ಗ್ಯಾರೇಜ್ – 20ಕ್ಕೂ ಹೆಚ್ಚು ಕಾರು, 8 ಆಟೋಗಳು ಸುಟ್ಟು ಕರಕಲು
ಮಾಹಿತಿ ಪ್ರಕಾರ, ಕಾರ್ಖಾನೆಯಲ್ಲಿ ತೆಂಗಿನ ಎಣ್ಣೆ ಉತ್ಪಾದಿಸುವ ವಿಭಾಗದಲ್ಲಿ ಬೆಂಕಿ ಮೊದಲು ಕಾಣಿಸಿಕೊಂಡಿದ್ದು, ಬಳಿಕ ಸಂಗ್ರಹಿಸಿಟ್ಟಿದ್ದ ತೆಂಗಿನಎಣ್ಣೆ ಹಾಗೂ ಹಿಂಡಿಯಿಂದಾಗಿ (ಕೊಬ್ಬರಿ ಅರೆದು ಎಣ್ಣೆ ತೆಗೆದ ನಂತರ ಉಳಿಯುವ ಗಟ್ಟಿಯಾದ ಭಾಗ) ಮತ್ತಷ್ಟು ವ್ಯಾಪಿಸಿಕೊಂಡಿದೆ.
10 ಅಗ್ನಿಶಾಮಕ ದಳದಿಂದ 8 ಗಂಟೆಗಳ ಕಾರ್ಯಾಚರಣೆ:
ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕೋಝಿಕ್ಕೋಡ್‌ನಿಂದ 9 ಹಾಗೂ ಮಲಪ್ಪುರಂನಿಂದ 1 ಒಟ್ಟು 10 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದವು. ಕಾರ್ಖಾನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗಿನಎಣ್ಣೆ ಮತ್ತು ಹಿಂಡಿ ಸಂಗ್ರಹಿಸಿಟ್ಟಿದ್ದರಿಂದ ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿತು. ಹೀಗಾಗಿ ಸಿಬ್ಬಂದಿ ಸತತ 8 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ಹತೋಟಿಗೆ ತರುವಲ್ಲಿ ಯಶಸ್ವಿಯಾದರು.
ಈವರೆಗೂ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ. ಅಧಿಕಾರಿಗಳು ಸದ್ಯ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದನ್ನು ಪತ್ತೆ ಹಚ್ಚಲು ಮತ್ತು ಕಾರ್ಖಾನೆಗೆ ಆಗಿರುವ ಒಟ್ಟು ನಷ್ಟದ ಅಂದಾಜು ಮಾಡಲು ವಿವರವಾದ ತನಿಖೆ ನಡೆಸುವ ನಿರೀಕ್ಷೆಯಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವಾದರೂ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ-ಪಾಸ್ತಿ ಸುಟ್ಟುಹೋಗಿದೆ ಎಂದು ಅಂದಾಜಿಸಲಾಗಿದೆ.ಇದನ್ನೂ ಓದಿ: ಕಲಬುರಗಿ | ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ
