ಬಳ್ಳಾರಿ: ರಾಬಕೊವಿ ಹಾಲು ಒಕ್ಕೂಟದಲ್ಲಿ ಸತ್ತ ಜಾನುವಾರುಗಳ ವಿಮಾ ಹಣ ಲೂಟಿ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಆರೋಪಿ ತನ್ನ ಸಂಬಂಧಿಗಳ ಅಕೌಂಟ್ಳಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡಿರುವ ವಿಚಾರ (Ballari) ತನಿಖೆಯಲ್ಲಿ ತಿಳಿದುಬಂದಿದೆ.
ಅಕೌಂಟೆಂಟ್ ಉಮಾಮಹೇಶ್ವರಿ ಚಾಲಾಕಿತನದ ಬಗ್ಗೆ ಇದೀಗ ಸ್ಪೋಟಕ ದಾಖಲೆಗಳು ಲಭ್ಯವಾಗಿದ್ದು, ಹಗರಣಕ್ಕೆ ಮತ್ತೊಂದು ಆಯಾಮ ನೀಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಮಾದರಿಯಲ್ಲೇ ಇಲ್ಲೂ ಅಕೌಂಟೆಂಟ್ ತನ್ನ ಸಂಬಂಧಿಗಳ ಅಕೌಂಟ್ಳಿಗೆ ಲಕ್ಷ ಲಕ್ಷ ಹಣ ವರ್ಗಾವಣೆ ಮಾಡುವ ಮೂಲಕ ಹಣ ಲೂಟಿ ಮಾಡಿದ್ದಾಳೆ.
ಬಳ್ಳಾರಿಯಲ್ಲಿರುವ ರಾಬಕೊವಿ ಹಾಲು ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರೈತರಿಗೆ ಸೇರಬೇಕಾದ ಸತ್ತ ಜಾನುವಾರುಗಳ ವಿಮಾ ಹಣದ ಪೈಕಿ 16.5 ಕೋಟಿಯನ್ನ ಲೂಟಿ ಮಾಡಲಾಗಿದೆ ಎಂದು ಒಕ್ಕೂಟದ ಮಾಜಿ ನಿರ್ದೇಶಕ ಧನಂಜಯ್ ಹಮಾಲ್ ದೂರು ನೀಡಿದ್ದರು. ಈಗಾಗಲೇ ಒಕ್ಕೂಟದಲ್ಲಿ ಆತಂರಿಕವಾಗಿ ಮೊದಲ ಹಂತದಲ್ಲಿ ತನಿಖೆ ನಡೆದಿದ್ದು, ಅಕೌಂಟೆಂಟ್ ಉಮಾಮಹೇಶ್ವರಿ ಕಳ್ಳಾಟ ಬಯಲಾಗಿದೆ.
ಉಮಾಮಹೇಶ್ವರಿ ತನ್ನ ಸಂಬಂಧಿಗಳ ಹಲವು ಬ್ಯಾಂಕ್ ಅಕೌಂಟ್ಗಳಿಗೆ ಲಕ್ಷ-ಲಕ್ಷ ಹಣ ವರ್ಗಾವಣೆ ಮಾಡಿರೋದು ಗೊತ್ತಾಗಿದೆ. ಉಮಾಮಹೇಶ್ವರಿ ತನ್ನ ತಂದೆ ಬಸವರಾಜ್, ತಾಯಿ ಈರಮ್ಮ, ಪತಿ ಸಾಗರ್ ಬಾಬು ಹಾಗೂ ಕಚೇರಿ ಸಿಬ್ಬಂದಿ ಸಗಾಯಿ ಬಾಯಿಗೆ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿದ್ದಾಳೆ. ಬರೋಬ್ಬರಿ 47 ಲಕ್ಷ ರೂ. ವರ್ಗಾವಣೆ ಮಾಡಿರೋದು ದಾಖಲೆಗಳ ಸಮೇತ ಪತ್ತೆಯಾಗಿದೆ. ಇದನ್ನೂ ಓದಿ: ಪಾಕ್ ಲಷ್ಕರ್ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದವನ ಅರೆಸ್ಟ್ ಕೇಸ್ – ಉಗ್ರನ ವಿರುದ್ಧ ಎಫ್ಐಆರ್
ಉಮಾಮಹೇಶ್ವರಿ ಕಳ್ಳಾಟ ಬಯಲಾದ ಬಳಿಕ ರಾಬಕೊವಿ ಆಡಳಿತ ಮಂಡಳಿ ಆಕೆಯಿಂದ ಹಣ ರಿಕವರಿ ಮಾಡಿ, ಸಸ್ಪೆಂಡ್ ಮಾಡಿದೆ. 16.5 ಕೋಟಿ ಅಲ್ಲ, 47 ಲಕ್ಷ ರೂ. ಮಾತ್ರ ವರ್ಗಾವಣೆಯಾಗಿದೆ ಎಂದು ರಾಬಕೊವಿ ಆಡಳಿತ ಮಂಡಳಿ ಹೇಳಿದೆ. ಕಳೆದ ಮೂರು ವರ್ಷಗಳಿಂದ ಈ ಅಕ್ರಮ ನಡೆದಿದೆ. ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ನಂತರ ಪತ್ತೆ ಹಚ್ಚುವ ಮೂಲಕ ಉಮಾಮಹೇಶ್ವರಿಯಿಂದ ರಿಕವರಿ ಮಾಡಿಕೊಂಡ ಹಣವನ್ನ ರೈತರಿಗೆ ತಲುಪಿಸಿರೋದಾಗಿ ಹೇಳಿದ್ದಾರೆ. ಈ ಮೂಲಕ ಅಕ್ರಮ ನಡೆದಿರೋದನ್ನ ಸ್ವತಃ ಆಡಳಿತ ಮಂಡಳಿ ಒಪ್ಪಿಕೊಂಡಿದೆ.
ಈ ಪ್ರಕರಣ ಈಗ ಗಂಭೀರ ಸ್ವರೂಪ ಪಡೆದಿದ್ದು, ಒಕ್ಕೂಟದಲ್ಲಾದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಫೀಲ್ಡಿಗೆ ಇಳಿದಿದೆ. ಎಸ್ಟಿ ಅಭಿವೃದ್ದಿ ನಿಗಮದಲ್ಲಾದ ಭ್ರಷ್ಟಾಚಾರದಂತೆ ರಾಬಕೊವಿ ಹಾಲು ಒಕ್ಕೂಟದಲ್ಲೂ ಪ್ಲ್ಯಾನ್ ಮಾಡಿ ಹಣ ಲೂಟಿ ಮಾಡಲಾಗಿದೆ. ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಅಕೌಂಟೆಂಟ್ ಮೂಲಕ ಹಲವು ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.ಇದನ್ನೂ ಓದಿ: ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ; ರೈತರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ
