ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರ ತಂದೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನೀಡಿರುವ ಹೇಳಿಕೆಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರು ತಮ್ಮ ಹೇಳಿಕೆಯನ್ನು ಕೂಡಲೇ ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ 85 ವರ್ಷ ವಯಸ್ಸಾಗಿದ್ದು, ಅವರು ತಮ್ಮ ಉತ್ತಮ ಪರಿಚಯಸ್ಥರು. ಆದರೆ, ಇತ್ತೀಚಿನ ಅವರ ಹೇಳಿಕೆಗಳು ಮತ್ತು ಸಂದೇಶಗಳಿಂದ ಅವರ ಮೇಲಿದ್ದ ಗೌರವ ಕಡಿಮೆಯಾಗುತ್ತಿದೆ. ಜನರು ಅವರ ಮೇಲೆ ಇಟ್ಟಿರುವ ನಂಬಿಕೆಯನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಭಿಕ್ಷೆಯಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ – ಮೋದಿ ತಂದೆ ಕುರಿತ ಖರ್ಗೆ ಹೇಳಿಕೆಗೆ ಸಿ.ಟಿ ರವಿ ತೀವ್ರ ಆಕ್ಷೇಪ
ಖರ್ಗೆ ಅವರ ಭಾಷೆ ಮತ್ತು ನಡವಳಿಕೆ ಅವರ ಘನತೆಗೆ ತಕ್ಕದ್ದಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಮಾತನಾಡುವಾಗ ಜವಾಬ್ದಾರಿಯಿಂದ ವರ್ತಿಸಬೇಕು. ಹೆತ್ತವರನ್ನು ಯಾವುದೇ ಕಾರಣಕ್ಕೂ ನಿಂದಿಸಬಾರದು. ಪ್ರಧಾನಿ ಮೋದಿ ಅವರು ಸಾರ್ವಜನಿಕ ಜೀವನದಲ್ಲಿ ತೆರೆದ ಪುಸ್ತಕದಂತಿದ್ದಾರೆ. ಹೀಗಿರುವಾಗ ಅವರ ಕುಟುಂಬದ ಬಗ್ಗೆ ಇಂತಹ ಹೇಳಿಕೆ ನೀಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಜನರು ಧೂಳಿಪಟ ಮಾಡಿದ್ದಾರೆ ಎಂದು ಹೇಳಿದ ಅವರು, ಖರ್ಗೆ ಅವರು ಯಾವ ಕಾರಣಕ್ಕಾಗಿ ಇಂತಹ ಪದಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅವರ ಹೇಳಿಕೆಗಳು ಮತ್ತು ನಡವಳಿಕೆ ಸರಿಯಾಗಿಲ್ಲ. ದಲಿತರನ್ನು ಉನ್ನತ ಸ್ಥಾನಕ್ಕೆ ತರುವ ಪ್ರಯತ್ನವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಮೋದಿಯವರನ್ನು ನಿಂದಿಸುವುದು ಇದೇ ಮೊದಲಲ್ಲ. ಕಳೆದ 12 ವರ್ಷಗಳಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಇಂತಹ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಟಿಕೆಟ್ ಪಡೆಯಲು ಕೃಪಾ ಆಳ್ವರಿಂದ ಸ್ಟಿಂಗ್ ಷಡ್ಯಂತ್ರ: ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್.ಎಂ ಹುಸೇನ್ ವಾಗ್ದಾಳಿ
ಖರ್ಗೆ ಅವರೇ ಇಂತಹ ಹೇಳಿಕೆ ನೀಡಿದರೆ, ಪಕ್ಷದ ಕಾರ್ಯಕರ್ತರಿಂದ ಯಾವ ರೀತಿಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ ಸೋಮಣ್ಣ, ಖರ್ಗೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಬೇಷರತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅ.30ರಂದು ಪಿಎಂ ಕಿಸಾನ್ 24ನೇ ಕಂತು ಬಿಡುಗಡೆ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 24ನೇ ಕಂತು ಅಕ್ಟೋಬರ್ 30ರಂದು ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಈ ಸಂಬಂಧ ಕರ್ನಾಟಕದಲ್ಲಿಯೂ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದರು. ಇದೇ ದಿನ ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ಭಾಗಗಳಲ್ಲಿ ಡಿ-ಫ್ಲೋರೈಡೇಶನ್ ಘಟಕಗಳ ಸ್ಥಾಪನೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಅ.31ಕ್ಕೆ ಗೃಹ ಜ್ಯೋತಿ ಸಮೀಕ್ಷೆ ಮುಕ್ತಾಯ – ಶೇ.98.49 ಸಮೀಕ್ಷೆ ಪೂರ್ಣ, ಗಡುವು ವಿಸ್ತರಣೆ ಇಲ್ಲ
