ಕೌಲಾಲಂಪುರ್: 16 ವರ್ಷದೊಳಗಿನ ಮಕ್ಕಳು ಸೋಷಿಯಲ್ ಮೀಡಿಯಾ ಖಾತೆ ತೆರೆಯುವುದನ್ನು ಮಲೇಷ್ಯಾ ಸರ್ಕಾರ (Malaysia Government) ನಿಷೇಧಿಸಿದೆ. ಈ ಮೂಲಕ ಮಕ್ಕಳ ಸೋಷಿಯಲ್ ಮೀಡಿಯಾ ವ್ಯಸನವನ್ನು ಕಡಿಮೆ ಮಾಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ನಿಯಮಾನುಸಾರ 16 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಹಾಗೂ ಯೂಟ್ಯೂಬ್ ಸೇರಿದಂತೆ ಯಾವುದೇ ಸೋಶಿಯಲ್ ಮೀಡಿಯಾಗಳಲ್ಲಿ ಖಾತೆ ಹೊಂದಲು ಅವಕಾಶವಿಲ್ಲ. ಈ ಮೂಲಕ ಸೋಶಿಯಲ್ ಮೀಡಿಯಾ ಕಂಪನಿಗಳು ಬಳಕೆದಾರರ ವಯಸ್ಸು ಪರಿಶೀಲಿಸುವ ವ್ಯವಸ್ಥೆ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಸರ್ಕಾರ ಸೂಚಿಸಿದೆ. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವ – ಒಂದೇ ರಾತ್ರಿ 260 ಡ್ರಿಂಕ್ & ಡ್ರೈವ್ ಕೇಸ್ ದಾಖಲು
ನಿಯಮ ಉಲ್ಲಂಘಿಸುವ ಕಂಪನಿಗಳಿಗೆ 1 ಕೋಟಿ ರಿಂಗಿಟ್ (ಸುಮಾರು 23.95 ಕೋಟಿ ಭಾರತೀಯ ರೂಪಾಯಿಗಳು) ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮಕ್ಕಳನ್ನು ಹಾನಿಕಾರಕ ವಿಷಯಗಳು, ಸೈಬರ್ ಬುಲ್ಲಿಂಗ್ ಹಾಗೂ ಅತಿಯಾದ ಸೋಶಿಯಲ್ ಮೀಡಿಯಾ ಬಳಕೆಯಿಂದ ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಈ ನಿಯಮ ಮಕ್ಕಳಿಗೆ ಇಂಟರ್‌ನೆಟ್ ಅಥವಾ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ತಡೆಯುವುದಿಲ್ಲ ಎಂದು ಮಲೇಷ್ಯಾ ಸ್ಪಷ್ಟಪಡಿಸಿದೆ.
ಮಕ್ಕಳ ಸುರಕ್ಷತೆಗಾಗಿ ಸೋಶಿಯಲ್ ಮೀಡಿಯಾ ವೇದಿಕೆಗಳು ವಿಶೇಷ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಅಪ್ರಾಪ್ತರ ಖಾತೆಗಳು ಹಾಗೂ ಹಾನಿಕಾರಕ ವಿಷಯಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ರೀತಿಯ ನಿಯಮಗಳನ್ನು ಆಸ್ಟ್ರೇಲಿಯಾ, ಬ್ರೆಜಿಲ್ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವು ದೇಶಗಳು ಈಗಾಗಲೇ ಜಾರಿಗೆ ತಂದಿವೆ.ಇದನ್ನೂ ಓದಿ: ಜಮೀರ್ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ
