ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್(Sting Operation) ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್(Seemanth Kumar Singh) ಸ್ಫೋಟಕ ಹೇಳಿಕೆ ಬೆನ್ನಲ್ಲೇ ಪ್ರಕರಣದ ತನಿಖೆಯ ದಿಕ್ಕು ಇದೀಗ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರತ್ತ ತಿರುಗಿದ್ದು, ಈ ವಿವಾದ ರಾಜಕೀಯ ವಲಯದಲ್ಲಿ ತೀವ್ರ ಕಾವೇರಿದೆ.
ಸ್ಟಿಂಗ್ ವಿಡಿಯೋ ಹಂಚಿಕೆ ಸೂತ್ರಧಾರರ ಪತ್ತೆಗೆ ಸಿಸಿಬಿ ಪೊಲೀಸರು(CCB Police) ಬಲೆ ಬೀಸಿದ್ದಾರೆ. ಆರೋಪಿಗಳಾದ ಪ್ರಜ್ವಲ್ ಪ್ರಸಾದ್ ಮತ್ತು ರಿತೇಶ್ ಪಾಂಡೆ ನಡುವೆ ಹಣಕಾಸಿನ ವಹಿವಾಟು ನಡೆದಿರುವುದು ಪತ್ತೆಯಾಗಿದೆ.
ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಸೀಮಂತ್ ಕುಮಾರ್, ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣದ ತಂಡದ ಸದಸ್ಯ ಪ್ರಜ್ವಲ್ ಪ್ರಸಾದ್ ಸೂಚನೆ ಮೇರೆಗೆ ರಿತೀಶ್ ಪಾಂಡೆ ಮತ್ತು ಆತನ ಸಹಚರ ವಿನೋದ್ ಶರ್ಮಾ ದೆಹಲಿಯ ಕರೋಲ್ ಬಾಗ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯ ಸಿಕ್ಕಿವೆ ಎಂದು ತಿಳಿಸಿದ್ದರು.
ಮೊಬೈಲ್ ಹೆಚ್ಡಿ ಕುಮಾರಸ್ವಾಮಿ ಅವರ ದೆಹಲಿಯ ಅಧಿಕೃತ ನಿವಾಸದಲ್ಲಿ ಪ್ರಜ್ವಲ್ ಪ್ರಸಾದ್ಗೆ ಹಸ್ತಾಂತರವಾಗಿದೆ. ಆರೋಪಿ ರಿತೇಶ್ ಪಾಂಡೆ ಮತ್ತು ಪ್ರಜ್ವಲ್ ಪ್ರಸಾದ್ ದೆಹಲಿಯಲ್ಲಿರುವ ಹೆಚ್ಡಿಕೆ ಅವರ ಅಧಿಕೃತ ನಿವಾಸದಲ್ಲಿದ್ದರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದೆಹಲಿಯ ನಿವಾಸದಲ್ಲಿ ಸ್ಥಳ ಮಹಜರು ನಡೆಸಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ತಮ್ಮ ವಿರುದ್ಧವೇ ತನಿಖೆ ತಿರುಗಲಿದೆ ಎಂದು ಹೆಚ್ಡಿಕೆ ಹೇಳಿದ್ದ ಮಾತುಗಳು ಇದೀಗ ನಿಜವಾಗಿದ್ದು, ಸ್ಟಿಂಗ್ ಆಪರೇಷನ್ ತನಿಖಾಸ್ತ್ರ ಅವರ ಬುಡಕ್ಕೇ ಬಂದಂತಾಗಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ತಮ್ಮತ್ತ ಬೊಟ್ಟು ಮಾಡುತ್ತಿದೆ ಎಂದು ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಮೇಲೆ ಪೊಲೀಸ್ ಕಮಿಷನರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಜೆ.ಪಿ. ಭವನದಲ್ಲಿ ತುರ್ತು ಸುದ್ದಿಗೋಷ್ಠಿ ಕರೆದಿದ್ದು, ತನಿಖೆಯ ದಿಕ್ಕು ಬದಲಾವಣೆ ಹಾಗೂ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಕಟ್ಟಿಹಾಕಲು ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ದೀಪಾವಳಿ ಹೊಸ್ತಿಲಲ್ಲೇ ಸ್ಫೋಟಗೊಂಡಿರುವ ಈ ಸ್ಟಿಂಗ್ ಆಪರೇಷನ್ ಬಾಂಬ್ ತನಿಖೆ ಕುಮಾರಸ್ವಾಮಿ ಅವರನ್ನೇ ಕೇಂದ್ರಬಿಂದುವಾಗಿಸಿಕೊಂಡು ಮುನ್ನಡೆಯುತ್ತಿದೆ. ಸ್ಟಿಂಗ್ ಚಕ್ರವ್ಯೂಹ ಇನ್ನಷ್ಟು ನಾಯಕರನ್ನು ಸುತ್ತಿಕೊಳ್ಳುವ ಸಾಧ್ಯತೆಗಳ ನಡುವೆ, ಮಿತ್ರಪಕ್ಷ ಬಿಜೆಪಿಯು ಈ ಪ್ರಕರಣದಿಂದ ಅಂತರ ಕಾಯ್ದುಕೊಳ್ಳಲಿದೆಯೇ ಅಥವಾ ಮೈತ್ರಿ ಪಾಲುದಾರರ ಬೆಂಬಲಕ್ಕೆ ನಿಲ್ಲಲಿದೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.
