ನವದೆಹಲಿ: ಭಾರತೀಯ ಚುನಾವಣಾ ಆಯೋಗ (Election Commission of India) ಮಹಾರಾಷ್ಟ್ರದ 16 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣಾ ದಿನಾಂಕ ಘೋಷಿಸಿದ್ದು, ಜೂನ್ 18ರಂದು ಮತದಾನ ಹಾಗೂ ಜೂನ್ 22ರಂದು ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರದ 16 ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳನ್ನು ಪ್ರತಿನಿಧಿಸುವ ಸದಸ್ಯರ ಅಧಿಕಾರಾವಧಿ 2022 ಮತ್ತು 2025ರ ನಡುವೆ ವಿವಿಧ ಹಂತಗಳಲ್ಲಿ ಮುಕ್ತಾಯಗೊಂಡಿದೆ ಎಂದು ಆಯೋಗ ಹೇಳಿದೆ. ಇದನ್ನೂ ಓದಿ: ಹೊಸ ಮದ್ಯ ನೀತಿಯಲ್ಲಿ ಅಕ್ರಮ ಕೇಸ್ – ಸಿಬಿಐ ಅರ್ಜಿ ವಿಚಾರಣೆ ನಡೆಸಲಿರುವ ನ್ಯಾ. ಮನೋಜ್ ಜೈನ್
ಚುನಾವಣಾ ವೇಳಾಪಟ್ಟಿಯ ಪ್ರಕಾರ, ಚುನಾವಣೆಗೆ ಅಧಿಕೃತ ಅಧಿಸೂಚನೆಯನ್ನು ಮೇ 25ರಂದು ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಜೂ.1 ಕೊನೆಯ ದಿನಾಂಕವಾಗಿದ್ದು, ಜೂ.2ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಭ್ಯರ್ಥಿಗಳು ಜೂ.4ರವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು. ಜೂ.18ರಂದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಎಲ್ಲಾ 16 ಸ್ಥಾನಗಳಿಗೆ ಮತದಾನ ನಡೆಯಲಿದೆ. ಜೂ.25ರೊಳಗೆ ಸಂಪೂರ್ಣ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದಿದೆ.
ಚುನಾವಣಾ ವೇಳಾಪಟ್ಟಿ ಘೋಷಣೆಯಾದ ನಂತರ ಸಂಬಂಧಿತ ಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ತಕ್ಷಣದಿಂದ ಜಾರಿಗೆಯಾಗಿದೆ. ಸೊಲ್ಲಾಪುರ, ಅಹಮದ್‌ನಗರ, ಥಾಣೆ, ಜಲಗಾಂವ್, ಸಾಂಗ್ಲಿ-ಕಮ್-ಸತಾರಾ, ನಾಂದೇಡ್, ಯವತ್ಮಾಲ್, ಪುಣೆ, ಭಂಡಾರ-ಕಮ್-ಗೊಂಡಿಯಾ, ರಾಯಗಡ-ಕಮ್-ರತ್ನಗಿರಿ-ಕಮ್-ಸಿಂಧುದುರ್ಗ, ನಾಸಿಕ್, ವಾರ್ಧಾ-ಕಮ್-ಚಂದ್ರಾಪುರ-ಕಮ್ ಒಸ್ಮಾನಾಬಾದ್-ಕಮ್-ಲಾತೂರ್-ಕಮ್-ಬೀಡ್, ಪರ್ಭಾನಿ-ಕಮ್-ಹಿಂಗೋಲಿ ಮತ್ತು ಔರಂಗಾಬಾದ್-ಕಮ್-ಜಲ್ನಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.ಇದನ್ನೂ ಓದಿ: ರೈಲು ಬೋಗಿಯಲ್ಲಿ ಶಿರಚ್ಛೇದಿತ ದೇಹ, ಕತ್ತರಿಸಿದ ರುಂಡ ಪತ್ತೆ – ಹೌಹಾರಿದ ಸಿಬ್ಬಂದಿ
ನಾಗ್ಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಉಪಚುನಾವಣೆ:
ಮಹಾರಾಷ್ಟ್ರ ವಿಧಾನ ಪರಿಷತ್ತಿನ ನಾಗ್ಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಉಪಚುನಾವಣೆಯನ್ನು ಚುನಾವಣಾ ಆಯೋಗ ಘೋಷಿಸಿದೆ. ಪ್ರಕಟಿತ ವೇಳಾಪಟ್ಟಿಯ ಪ್ರಕಾರ, ಜೂ.18ರಂದು ಮತದಾನ ನಡೆಯಲಿದ್ದು, ಜೂ.22ರಂದು ಫಲಿತಾಂಶ ಪ್ರಕಟವಾಗಲಿದೆ. 2024ರ ನವೆಂಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಆಯ್ಕೆಯಾದ ನಂತರ ಚಂದ್ರಶೇಖರ್ ಬಾವಂಕುಲೆ ಅವರು ತಮ್ಮ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಸ್ಥಾನ ತೆರವುಗೊಂಡಿತ್ತು.
ಸ್ಥಳೀಯ ಕಚೇರಿ ಕೆಲಸಗಳು ಮುಗಿಯದ ಕಾರಣ ಹಾಗೂ ಮತದಾರರ ಲಭ್ಯತೆಗೆ ಸಂಬಂಧಿಸಿದ ಕಡ್ಡಾಯ ಮಾನದಂಡಗಳನ್ನು ಪೂರೈಸದ ಕಾರಣ ಚುನಾವಣೆಗಳನ್ನು ಈ ಮೊದಲೇ ನಡೆಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದೆ. ಆ ಮಾನದಂಡಗಳನ್ನು ಈಗ ಪೂರೈಸಿದ ನಂತರ ಇದೀಗ ಚುನಾವಣಾ ದಿನಾಂಕ ಘೋಷಿಸಲಾಗಿದೆ.ಇದನ್ನೂ ಓದಿ: ಜೂ.15 ರಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ – ಮೊದಲ ಸಂಪುಟ ಸಭೆಯಲ್ಲೇ ವಿಡಿಎಸ್ ಘೋಷಣೆ

