ನವದೆಹಲಿ: ಮಹದೇವ್ ಆನ್ಲೈನ್ ಅಕ್ರಮ ಬೆಟ್ಟಿಂಗ್ (Mahadev Online Betting App) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ದೇಶದ ಆರು ರಾಜ್ಯಗಳ 33 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ದಾಳಿ ವೇಳೆ ಅಕ್ರಮ ಬೆಟ್ಟಿಂಗ್ ನಡೆಸುತ್ತಿದ್ದ ಲೈವ್ ಪ್ಯಾನೆಲ್ಗಳನ್ನು ಪತ್ತೆಹಚ್ಚಿ ಧ್ವಂಸಗೊಳಿಸಲಾಗಿದೆ. ಮೊಬೈಲ್ ಫೋನ್ಗಳು, ಡಿಜಿಟಲ್ ಸಾಧನಗಳು ಹಾಗೂ ಹವಾಲಾ ಹಣ ವರ್ಗಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: USನಲ್ಲಿ ವಿಮಾನ ಹಾರಾಟ ನಿರ್ಬಂಧ ತೆರವು – ಹಳೆಯ ಹಾರ್ಡ್ವೇರ್, ರೂಟರ್ ಓವರ್ಲೋಡ್ ಆಗಿದ್ದೇ ಕಾರಣ
ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಹದೇವ್ ಆನ್ಲೈನ್ ಬುಕ್ನ ಪ್ರಮುಖ ಪ್ರವರ್ತಕ ಸೌರಭ್ ಚಂದ್ರಕರ್ ನೀಡಿದ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ. ಓಮನ್ನಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದ ಆತನನ್ನು ಸಿಬಿಐ ನವೆಂಬರ್ 1ರಂದು ಬಂಧಿಸಿತ್ತು. ವಿಚಾರಣೆಗಾಗಿ ರಾಯ್ಪುರದ ವಿಶೇಷ ಸಿಬಿಐ ನ್ಯಾಯಾಲಯವು ಎಂಟು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು.
ವಿಚಾರಣೆ ವೇಳೆ ಬೆಟ್ಟಿಂಗ್ ವೇದಿಕೆಯ ಕಾರ್ಯವೈಖರಿ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ಯಾನೆಲ್ ಆಪರೇಟರ್ಗಳ ಜಾಲದ ಕುರಿತು ಮಾಹಿತಿ ಲಭ್ಯವಾಗಿದೆ. ವಿದೇಶದಲ್ಲಿರುವ ಪ್ರಧಾನ ಕಚೇರಿಯಿಂದ ಈ ವೇದಿಕೆ ಕಾರ್ಯನಿರ್ವಹಿಸುತ್ತಿದ್ದು, ಭಾರತದಲ್ಲಿ ಪ್ಯಾನೆಲ್ ಆಪರೇಟರ್ಗಳು ಗ್ರಾಹಕರಿಗೆ ಬೆಟ್ಟಿಂಗ್ ಐಡಿಗಳನ್ನು ಒದಗಿಸಿ, ಇತರರ ಹೆಸರಿನಲ್ಲಿ ತೆರೆಯಲಾದ ಅಥವಾ ಬಾಡಿಗೆಗೆ ಪಡೆದ ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹಿಸುತ್ತಿದ್ದರು. ಬಳಿಕ ಲಾಭದ ಹಣವನ್ನು ಹವಾಲಾ ಮಾರ್ಗದ ಮೂಲಕ ವಿದೇಶಕ್ಕೆ ವರ್ಗಾಯಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.ಇದನ್ನೂ ಓದಿ: ರಾಜ್ಯದಲ್ಲಿ ಮಿಕ್ಸ್ ಪೆಟ್ರೋಲ್ ಸಮರ – ಬಂಕ್ಗಳಲ್ಲಿ ಎಥೆನಾಲ್ ಡಿಸ್ಪ್ಲೇ ಕಡ್ಡಾಯ; ಶೀಘ್ರದಲ್ಲೇ ನ್ಯೂ ರೂಲ್ಸ್
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ನವೆಂಬರ್ 12ರಂದು ಸೌರಭ್ ಚಂದ್ರಕರ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನವೆಂಬರ್ 19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಛತ್ತೀಸ್ಗಢ ಸರ್ಕಾರದಿಂದ ತನಿಖೆ ವರ್ಗಾವಣೆಯಾದ ಬಳಿಕ ಸಿಬಿಐ ಈ ಪ್ರಕರಣದಲ್ಲಿ ಎರಡು ಎಫ್ಐಆರ್ಗಳನ್ನು ದಾಖಲಿಸಿದೆ. ವಿದೇಶದಲ್ಲಿರುವ ಆರೋಪಿಗಳು, ಬೆಟ್ಟಿಂಗ್ ಜಾಲದ ಕಾರ್ಯಾಚರಣೆಗೆ ನೆರವು ನೀಡಿದವರು ಹಾಗೂ ಸಂಬಂಧಿತ ಸರ್ಕಾರಿ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ. ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಹಸ್ತಾಂತರಕ್ಕೂ ಸಿಬಿಐ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಬಳ್ಳಾರಿಯಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವ GST ವಂಚನೆ – ಯುವಕನ ಹೆಸರಲ್ಲಿ 350 ಕೋಟಿ ಫ್ರಾಡ್!
