ನವದೆಹಲಿ: ಮಧ್ಯಪ್ರದೇಶ ರಾಜ್ಯಸಭಾ ಚುನಾವಣೆಯಲ್ಲಿ ನಾಮಪತ್ರ ತಿರಸ್ಕೃತವಾಗಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ (Supreme Court) ಮೆಟ್ಟಿಲೇರಿದ್ದ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್‌ಗೆ(Meenakshi Natarajan) ಹಿನ್ನಡೆಯಾಗಿದ್ದು ಅರ್ಜಿ ವಜಾಗೊಂಡಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರಿದ್ದ ನ್ಯಾಯಪೀಠ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ ನ್ಯಾಯಾಲಯಗಳು ಮಧ್ಯಪ್ರೇಶಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಭಾರತದ ಸಂವಿಧಾನದ 329ನೇ ವಿಧಿಯ ಪ್ರಕಾರ, ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ ಅದರಲ್ಲಿ ಹಸ್ತಕ್ಷೇಪ ಮಾಡಲು ನ್ಯಾಯಾಲಯಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಚುನಾವಣಾಧಿಕಾರಿಯು (Returning Officer) ನಾಮಪತ್ರವನ್ನು ತಿರಸ್ಕರಿಸಿದ ನಂತರ ಅದಕ್ಕೆ ಕಾನೂನಾತ್ಮಕ ಪರಿಹಾರ ಪಡೆಯಲು ಅಭ್ಯರ್ಥಿಯು ಕೇವಲ ಚುನಾವಣಾ ಆಯೋಗ (Election Commission) ಅಥವಾ ಚುನಾವಣಾ ನ್ಯಾಯಮಂಡಳಿಯನ್ನು ಮಾತ್ರ ಸಂಪರ್ಕಿಸಬೇಕು ಎಂದು ಹೇಳಿತು.
ಚುನಾವಣೆ ಮುಗಿದ ನಂತರ ಹೈಕೋರ್ಟ್‌ನಲ್ಲಿ ಚುನಾವಣಾ ಅರ್ಜಿ (Election Petition) ಸಲ್ಲಿಸುವ ಮೂಲಕ ಈ ನಾಮಪತ್ರ ತಿರಸ್ಕಾರವನ್ನು ಪ್ರಶ್ನಿಸುವ ಹಕ್ಕು ಮೀನಾಕ್ಷಿ ನಟರಾಜನ್ ಅವರಿಗೆ ಇರುತ್ತದೆ. ಸದ್ಯಕ್ಕೆ ನಾವು ಈ ಪ್ರಕರಣದ ಒಳಗಿನ ಸರಿ-ತಪ್ಪುಗಳ ಬಗ್ಗೆ ಯಾವುದೇ ತೀರ್ಪು ನೀಡುತ್ತಿಲ್ಲ, ಕೇವಲ ನಿಯಮಗಳ ಆಧಾರದ ಮೇಲೆ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ನ್ಯಾಯಪೀಠ ತಿಳಿಸಿತು. ಇದನ್ನೂ ಓದಿ: ಧರ್ಮಸ್ಥಳ ಕೇಸಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಹೆಸರು ಪ್ರಸ್ತಾಪ ಆದ ಕೂಡಲೇ ಕ್ರಿಮಿನಲ್ ಅಲ್ಲ: ಪ್ರಿಯಾಂಕ್ ಖರ್ಗೆ
ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕಾರದ ಅರ್ಜಿಯನ್ನು ನಾವು ಇಲ್ಲಿ ಸ್ವೀಕರಿಸಿ, ಉಳಿದ ಸಾಮಾನ್ಯ ಅಭ್ಯರ್ಥಿಗಳನ್ನು ಚುನಾವಣಾ ನ್ಯಾಯಮಂಡಳಿಗೆ ಹೋಗಿ ಎಂದು ಹೇಳಲು ಸಾಧ್ಯವಿಲ್ಲ. ಇಂತಹ ತಾರತಮ್ಯದ ಆಚರಣೆಗಳನ್ನು ಕೋರ್ಟ್ ಪ್ರೋತ್ಸಾಹಿಸುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಚುನಾವಣೆ ನಡೆಯದಂತೆ ಅಥವಾ ಫಲಿತಾಂಶ ಘೋಷಣೆಯಾಗದಂತೆ ಯಾವುದೇ ಮಧ್ಯಂತರ ತಡೆಯಾಜ್ಞೆ (Interim Relief) ನೀಡುವುದಿಲ್ಲ. ಒಮ್ಮೆ ಪ್ರಕ್ರಿಯೆ ಆರಂಭವಾದ ಮೇಲೆ ಅದನ್ನು ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸಬಾರದು ಎಂದು ತಿಳಿಸಿತು.

ಎದುರಾಳಿ ಅಭ್ಯರ್ಥಿಯ ಪರ ವಾದ ಮಂಡಿಸಿದ ಮುಕುಲ್ ರೋಹಟಗಿ ಅವರು, 2018 ರ ನಿಯಮಗಳ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಮೇಲಿರುವ ಎಲ್ಲಾ ಬಾಕಿ ಇರುವ ಪ್ರಕರಣಗಳ ವಿವರಗಳನ್ನು ಫಾರ್ಮ್ 26 ರಲ್ಲಿ ನೀಡಲೇಬೇಕು ಎಂದು ವಾದಿಸಿದರು. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿ, ಚುನಾವಣಾಧಿಕಾರಿಯ ನಿರ್ಧಾರವನ್ನು ಸದ್ಯಕ್ಕೆ ಪ್ರಶ್ನಿಸಲು ಸಾಧ್ಯವಿಲ್ಲ ಎಂದಿತು.
ತಿರಸ್ಕೃತವಾಗಿದ್ದು ಯಾಕೆ?
ಮೀನಾಕ್ಷಿ ನಟರಾಜನ್ ಅವರು ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ತೆಲಂಗಾಣದ ನ್ಯಾಯಾಲಯವೊಂದರಲ್ಲಿ ಬಾಕಿ ಇರುವ ಪ್ರಕರಣದ ವಿವರಗಳನ್ನು ಉಲ್ಲೇಖಿಸಿರಲಿಲ್ಲ. ತೆಲಂಗಾಣದ ಹೈದರಾಬಾದ್ (ನಾಂಪಲ್ಲಿ) ನ್ಯಾಯಾಲಯದಲ್ಲಿ ಇವರ ವಿರುದ್ಧ ದಾಖಲಾಗಿರುವ ಖಾಸಗಿ ದೂರಿಗೆ ಸಂಬಂಧಿಸಿದ ವಿವರಗಳನ್ನು ಇವರು ನಾಮಪತ್ರದಲ್ಲಿ ಉಲ್ಲೇಖಿಸದೆ ಮುಚ್ಚಿಟ್ಟಿದ್ದಕ್ಕೆ ಚುನಾವಣಾ ಅಧಿಕಾರಿ ನಾಮಪತ್ರ ತಿರಸ್ಕರಿಸಿದ್ದರು.
ಹೈದರಾಬಾದ್ ನ್ಯಾಯಾಲಯದಲ್ಲಿ ಮಾಜಿ ಕಾರ್ಪೊರೇಟ್ ಅಧಿಕಾರಿಯೊಬ್ಬರು ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಆ ಸಮಯದಲ್ಲಿ ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಮೀನಾಕ್ಷಿ ನಟರಾಜನ್ ಅವರು ದೂರು ಬಂದರೂ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಈ ಪ್ರಕರಣದಲ್ಲಿ ಅವರನ್ನೂ 4ನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಇವರಿಗೆ ನೋಟಿಸ್ ಜಾರಿ ಮಾಡಿತ್ತು.
ಕಾಂಗ್ರೆಸ್ ವಾದ ಏನಿತ್ತು?
ಇದು ಕೇವಲ ಒಬ್ಬ ವ್ಯಕ್ತಿ ನೀಡಿರುವ ಖಾಸಗಿ ದೂರು. ಇವರ ವಿರುದ್ಧ ಯಾವುದೇ ಎಫ್‌ಐಆರ್ (FIR) ದಾಖಲಾಗಿಲ್ಲ, ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ ಅಥವಾ ನ್ಯಾಯಾಲಯದಲ್ಲಿ ದೋಷಾರೋಪಣೆ (Charges Framed) ಪಟ್ಟಿಯೂ ಸಿದ್ಧವಾಗಿಲ್ಲ.
ನ್ಯಾಯಾಲಯದಿಂದ ಕೇವಲ ವಿವರಣೆ ಕೇಳಿ ನೋಟಿಸ್ ಬಂದಿತ್ತಷ್ಟೇ. ಕಾನೂನಿನ ದೃಷ್ಟಿಯಲ್ಲಿ ಇದು ಇನ್ನು ‘ಕ್ರಿಮಿನಲ್ ಮೊಕದ್ದಮೆ’ ಎಂದು ಪರಿಗಣಿತವಾಗದ ಕಾರಣ ಅಫಿಡವಿಟ್‌ನಲ್ಲಿ ಬರೆಯುವ ಅಗತ್ಯವಿರಲಿಲ್ಲ ಎಂಬುದು ಕಾಂಗ್ರೆಸ್ ವಾದಿಸಿತ್ತು.
