– ಬೆಂಗಳೂರಲ್ಲಿ ಮುಂದುವರೆದ ʼಆಪರೇಷನ್ ಮುಕ್ತʼ
– 53 ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆ
– ಇದುವರೆಗೆ 3,200ಕ್ಕೂ ಹೆಚ್ಚು ಜನರ ದಾಖಲೆಗಳನ್ನು ಪರಿಶೀಲನೆ
ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ (Bengaluru) ವಲಸಿಗರ ಪತ್ತೆಗಾಗಿ ಬೆಂಗಳೂರು ಪೊಲೀಸರು ನಡೆಸುತ್ತಿರುವ ‘ಆಪರೇಷನ್ ಮುಕ್ತ’ ಕಾರ್ಯಾಚರಣೆ (Illegal Immigrants) ಮುಂದುವರಿದಿದೆ. ಈ ನಡುವೆ ಅಕ್ರಮ ವಲಸಿಗರಿಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ಬಾಡಿಗೆಗೆ ನೀಡಿದ ಆರೋಪದಲ್ಲಿ ಜಾಗದ ಮಾಲೀಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ನಗರದ ಹೊರವಲಯದಲ್ಲಿ ಹಣದಾಸೆಗೆ ಶೆಡ್ ನಿರ್ಮಿಸಿಕೊಳ್ಳಲು ಜಾಗ ನೀಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕು ಸೈಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಲ್ವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
3,200ಕ್ಕೂ ಹೆಚ್ಚು ಜನರ ದಾಖಲೆ ಪರಿಶೀಲನೆ
‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಲ್ಲಿ ಇದುವರೆಗೆ 3,200ಕ್ಕೂ ಹೆಚ್ಚು ಜನರ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವೈಟ್‌ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ನಡೆಸಿದ ಪರಿಶೀಲನೆಯಲ್ಲಿ ಒಟ್ಟು 53 ಅಕ್ರಮ ಬಾಂಗ್ಲಾದೇಶಿ ವಲಸಿಗರು ಪತ್ತೆಯಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ 15 ಮಂದಿ ಹಾಗೂ ವೈಟ್‌ಫೀಲ್ಡ್‌ನಲ್ಲಿ 38 ಮಂದಿ ಪತ್ತೆಯಾಗಿದ್ದಾರೆ. ಇವರ ಬಗ್ಗೆ ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.
30ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ
ನಿನ್ನೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಬೆಳ್ಳಂದೂರು, ಬೇಗೂರು, ವೈಟ್‌ಫೀಲ್ಡ್, ಕಾಡುಗೋಡಿ, ಕೆ.ಆರ್.ಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸುಮಾರು 30 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಪರಪ್ಪನ ಅಗ್ರಹಾರ, ಹುಳಿಮಾವು, ಬಂಡೆಪಾಳ್ಯ, ಹೆಬ್ಬಗೋಡಿ ಹಾಗೂ ಬೇಗೂರು ಸೇರಿದಂತೆ 29 ಕಡೆ ಪರಿಶೀಲನೆ ನಡೆಸಲಾಗಿದೆ. ವೈಟ್‌ಫೀಲ್ಡ್ ವ್ಯಾಪ್ತಿಯ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ಹಲವು ಕಡೆ ಶೋಧ ನಡೆಸಲಾಗಿದೆ. ಶೆಡ್‌ಗಳಲ್ಲಿ ವಾಸಿಸುತ್ತಿದ್ದವರ ಆಧಾರ್, ವೋಟರ್ ಐಡಿ ಸೇರಿದಂತೆ ಗುರುತಿನ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಜೊತೆಗೆ ಈ ಶೆಡ್‌ಗಳಿಗೆ ಜಾಗ ನೀಡಿದ ಮಾಲೀಕರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ.
ಮಾಲೀಕರಿಗೂ ಬಿಸಿ ಮುಟ್ಟಿಸಿದ ಪೊಲೀಸರು
ಅಕ್ರಮವಾಗಿ ನೆಲೆಸಿರುವವರಿಗೆ ಜಾಗ ನೀಡಿರುವ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ದಾಳಿ ನಡೆಸಿದ 30ಕ್ಕೂ ಹೆಚ್ಚು ಸ್ಥಳಗಳ ಮಾಲೀಕರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ನಗರದಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ಮುಂದುವರಿದಿದ್ದು, ಅನುಮಾನಾಸ್ಪದ ವ್ಯಕ್ತಿಗಳ ದಾಖಲೆ ಪರಿಶೀಲನೆಯನ್ನೂ ಪೊಲೀಸರು ಮುಂದುವರಿಸಿದ್ದಾರೆ.



