ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ನಾಯಕನಾಗಿ ತೆರೆಮೇಲೆ ಮಿಂಚಲು ರೆಡಿಯಾಗಿರುವ ಎರಡನೇ ಸಿನಿಮಾ ಲಕ್ಷ್ಮೀಪುತ್ರ. ಸ್ಟಾರ್ ಡೈರೆಕ್ಟರ್ ಎಪಿ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ AMB ಕಪಾಲಿಯಲ್ಲಿ ‘ಇನ್ಮೇಲೆ’ ಎಂಬ ಮೆಲೋಡಿ ಗೀತೆಯನ್ನು ಚಿತ್ರರಂಗದ ಎಂಟು ನಟಿಮಣಿಯರಿಂದ ಅನಾವರಣ ಮಾಡಿಸಲಾಯಿತು. ಈ ಸಂದರ್ಭದಲ್ಲಿ ನಿರ್ಮಾಪಕ ಎಪಿ ಅರ್ಜುನ್ ಮಾತನಾಡಿ, ಯಾವಾಗಲೂ ಮಾತನಾಡುವ ಪದದಿಂದ ಹಾಡು ಶುರುವಾಗಬೇಕು. ಹಾಡು ಎಲ್ಲರ ಬಾಯಲ್ಲಿ ಇರಬೇಕು ಅನ್ನೋದು ನನ್ನ ತಲೆಯಲ್ಲಿ ಇತ್ತು. ಲವರ್ಸ್ಸ್ ಮಾತನಾಡುವಾಗ ಇನ್ನೇಲೆ, ಆಮೇಲೆ ಅಂತಾರೆ ಮಾತನಾಡ್ತುತ್ತಾರೆ. ಅದನ್ನು ಇಟ್ಕೊಂಡು ಮಾಡಿದ ಹಾಡು ಇದು. ಇದನ್ನು ಕರ್ನಾಟಕ ಜನತೆಗೆ ಅರ್ಪಿಸಿದ್ದೇವೆ. ಅಪ್ಪಟ ಕನ್ನಡ ಹಾಡು. ಮಂಡ್ಯ ಸೊಗಡು ಇರುವ ಗೀತೆ. ಇದನ್ನು ಹಾಡಿರುವವರು ದರ್ಶನ್, ಸರಿಗಮಪ ರನ್ನರ್ ಅಪ್. ಅಪ್ಪಟ ಉತ್ತರ ಕರ್ನಾಟಕದ ಪ್ರತಿಭೆ. ಅವರ ಮೊದಲ ಹಾಡು ಇದಾಗಿದೆ. ಇನ್ನು ಅವರ ಜೊತೆ ಪೃಥ್ವಿ ಭಟ್ ಹಾಡಿದ್ದಾರೆ. ಎಲ್ಲರಿಗೂ ಹಾಡು ಕೇಳಿಸಿದಾಗ ಇಷ್ಟಪಟ್ಟರು ಎಂದು ಹೇಳಿದರು.
ನಟ ಚಿಕ್ಕಣ್ಣ ಮಾತನಾಡಿ, ಎಪಿ ಅರ್ಜುನ್ ಸಾಹಿತ್ಯ ಬರೆಯುತ್ತಾರೆ, ಅರ್ಜುನ್ ಜನ್ಯ ಸರ್ ಮ್ಯೂಸಿಕ್ ಮಾಡ್ತಾರೆ ಎಂದಾಗ ಭಯ ಆಗಿತ್ತು. ನನ್ನ ಮೊದಲ ಚಿತ್ರದ ನನಗೆ ನೀನು ಹಾಡು ಹಿಟ್ ಕೊಟ್ಟ ಜೋಡಿ. ಮತ್ತೆ ಒಂದಾಗ್ತಾರೆ ಎಂದಾಗ ಆ ನಿರೀಕ್ಷೆ ತಲುಪುತ್ತೇವಾ? ಎಂಬ ಭಯವಿತ್ತು. ಆ ನಿರೀಕ್ಷೆ ತಲುಪಿದ್ದೇವೆ. ಅದಕ್ಕಿಂದ ದೊಡ್ಡ ಮಟ್ಟದ ಯಶಸ್ಸು ಕೊಡ್ತಿರಾ ಎಂದು ಭಾವಿಸಿದ್ದೇನೆ. ಒಂದು ಚಿತ್ರದ ಮೊದಲ ಇನ್ವಿಟೇಷನ್ ಎಂದರೆ ಹಾಡು. ಹಾಡುಗಳು ಪ್ರೇಕ್ಷಕರನ್ನು ತಲುಪಲು ಬೇಕಿರೋದು ಆಡಿಯೋ ಕಂಪನಿಗಳು. ನಮ್ಮಚಿತ್ರದ ಆಡಿಯೋ ಹಕ್ಕನ್ನು ಒಂದೊಳ್ಳೆ ಮೊತ್ತಕ್ಕೆ ಡಿಬೀಟ್ಸ್ ಕಂಪನಿ ಕೊಂಡುಕೊಂಡಿದೆ ಎಂದು ಸಂತಸ ಹಂಚಿಕೊಂಡರು.

ಡಿಬೀಟ್ಸ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಇನ್ಮೇಲೆ ಗೀತೆಗೆ ಎಪಿ ಅರ್ಜುನ್ ಪದ ಪೋಣಿಸಿದ್ದಾರೆ. ದರ್ಶನ್ ಮೇಳವಂಕಿ ಹಾಗೂ ಪೃಥ್ವಿಭಟ್ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ಮೇಲೆ ಎನ್ನುತ್ತಾ ಚಿಕ್ಕಣ್ಣ ವಂದಿತಾ ಹೆಜ್ಜೆ ಹಾಕಿದ್ದಾರೆ. ಲಕ್ಷ್ಮೀಪುತ್ರ ಚಿತ್ರವನ್ನು ಎ.ಪಿ.ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಅವರು ನಿರ್ಮಾಣ ಮಾಡಿದ್ದಾರೆ. ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಸಂತೋಷ್ ಲಾಡ್ ಅವರ ಆಶೀರ್ವಾದ ಈ ಚಿತ್ರಕ್ಕಿದೆ.
ಎಪಿ ಅರ್ಜುನ್ ಗರಡಿಯಲ್ಲಿ ಪಳಗಿರುವ ವಿಜಯ್ ಸ್ವಾಮಿ ಆಕ್ಷನ್ ಕಟ್ ಹೇಳಿದ್ದು, ಅವರು ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಸಿನಿಮಾಗೆ ಅರ್ಜುನ್ ಜನ್ಯ ಮ್ಯೂಸಿಕ್ ಒದಗಿಸಿದ್ದಾರೆ. ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್ಗಳಿಗೆ ಮಾಸ್ ಮಾದ ನಿರ್ದೇಶನ ಮಾಡಿದ್ದಾರೆ. ಗಿರೀಶ್ ಆರ್.ಗೌಡ ಅವರ ಕ್ಯಾಮೆರಾ ಹಿಡಿದಿದ್ದಾರೆ. ಲಕ್ಷ್ಮೀಪುತ್ರ ಚಿತ್ರದ ಮೂಲಕ ಯುವ ನಟಿ ವಂದಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಉಳಿದಂತೆ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಎಲ್ಲಾ ಕೆಲಸ ಮುಗಿಸಿರುವ ಲಕ್ಷ್ಮೀಪುತ್ರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರವನ್ನು ಬೆಳ್ಳಿಪರದೆ ಅಖಾಡಕ್ಕೆ ಇಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
