– ಯುವಕರಿಗೆ ಡಿಕೆಶಿ ನೀಡಿದ ಸಲಹೆಯೇನು..?
ಬೆಂಗಳೂರು: ಪಂಚ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕಾಂಗ್ರೆಸ್ ಕಾರ್ಯಕರ್ತರು ಕುಗ್ಗಿದ್ದಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಹೇಳುತ್ತಿದ್ದಾರೆ. ಇಂತಹ ಮಾತುಗಳು ಸಹಜ ಎಂದು ಡಿ.ಕೆ ಶಿವಕುಮಾರ್ (DK Shivakumar) ಹೇಳಿದರು.
ಕರ್ನಾಟಕ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಪಂಜಾಬ್ ನಲ್ಲಿ ನಮ್ಮ ಸರ್ಕಾರ ಇತ್ತು, ನಾವು ಸೋತಿದ್ದೇವೆ. ಬೇರೆ ರಾಜ್ಯಗಳಲ್ಲಿ ಪ್ರಮಾಣ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಮೇಲೆ ದಾಳಿ ಆದಾಗ ಬಿಜೆಪಿ ಕೊಚ್ಚಿ ಹೋಯ್ತು. ಅದರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಗೋವಾದಲ್ಲಿ ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್‍ನಲ್ಲಿ ಕೇವಲ ಇಬ್ಬರು ಶಾಸಕರು ಮಾತ್ರ ಇದ್ದರು. ಈಗ ಮತ್ತೆ 12 ಶಾಸಕರು ಗೆದ್ದಿದ್ದಾರೆ. ಹಿಂದೆ ಇಂದು ಕಾಲದಲ್ಲಿ ವಾಜಪೇಯಿ (Atal Bihari Vajpayee) ಹಾಗೂ ಅಡ್ವಾಣಿ (Lal Krishna Advani) ಅವರು ಮಾತ್ರ ಸಂಸತ್ತಿನಲ್ಲಿದ್ದರು ಎಂದರು.
Advertisement
Advertisement
ರಾಜಕೀಯದಲ್ಲಿ ಯಾವುದೂ ಯಾವತ್ತೂ ಶಾಶ್ವತವಲ್ಲ. ಅನೇಕ ನಾಯಕರು ಪಕ್ಷ ಬಿಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಅವರಿಗೆ ಅಧಿಕಾರದಾಹ ಅದಕ್ಕೆ ಪಕ್ಷ ಬಿಡುತ್ತಿದ್ದಾರೆ. ಅವರು ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ (Congress) ಪಕ್ಷ ಕಾರಣವೇ ಹೊರತು, ಕಾಂಗ್ರೆಸ್ ಹೊರತಾಗಿ ಅವರು ಬೆಳೆಯಲಿಲ್ಲ. ಕಾಂಗ್ರೆಸ್ ಚಿಹ್ನೆ ಮೇಲೆ ಸ್ಪರ್ಧಿಸಿದ್ದಕ್ಕೆ ಅಲ್ಲವೇ ನಾನು ಮಾಜಿ ಮಂತ್ರಿ, ಶಾಸಕನಾಗಿರುವುದು, ಅಧ್ಯಕ್ಷನಾಗಿರುವುದು. ಈಗ ಪಕ್ಷ ತೊರೆದವರು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಬೆಳೆದಿದ್ದಕ್ಕೆ ಆ ಮಟ್ಟಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ಇಲ್ಲದಿದ್ದರೆ ಇವರನ್ನು ಯಾವ ನಾಯಿಯೂ ಮೂಸುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಚಂದ್ರಬಾಬು ನಾಯ್ಡು (Chandra Babu Naidu), ಮಮತಾ ಬ್ಯಾನರ್ಜಿ (Mamta Banerjee), ಕೆ.ಸಿ ಚಂದ್ರಶೇಖರ್ ರಾವ್ (K C Chandrashekhar Rao) ಅವರೆಲ್ಲರೂ ಕಾಂಗ್ರೆಸ್ ನಲ್ಲಿದ್ದವರೇ. ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದ ಬೇರೆಯಾಗಿರಬಹುದು. ತಪ್ಪುಗಳು ಸಹಜ. ಆದರೆ ಅವು ಉದ್ದೇಶಪೂರ್ವಕ ತಪ್ಪುಗಳಲ್ಲ. ಕೆಲವು ಸಂದರ್ಭದಲ್ಲಿ ನಮ್ಮ ತೀರ್ಮಾನ ತಪ್ಪಾಗುವುದು ಉಂಟು. ಗಾಂಧಿ ಕುಟುಂಬದಲ್ಲಿ ರಾಹುಲ್ ಗಾಂಧಿ(Rahul Gandhi) ಹಾಗೂ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಶ್ರಮಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು 230ಕ್ಕೂ ಹೆಚ್ಚು ಸಮಾವೇಶಗಳನ್ನು ಮಾಡಿದ್ದಾರೆ ಎಂದರು.
ರಾಷ್ಟ್ರಪತಿ ಅಬ್ದುಲ್ ಕಲಾಂ (Abdul Kalam) ಅವರೇ ಪ್ರಧಾನಮಂತ್ರಿ ಸ್ಥಾನಕ್ಕೆ ಸೋನಿಯಾ ಗಾಂಧಿ (Sonia Gandhi) ಅವರಿಗೆ ಆಹ್ವಾನ ಕೊಟ್ಟಾಗ ಅವರು ದೇಶಕ್ಕೆ ಉತ್ತಮ ಆರ್ಥಿಕ ತಜ್ಞರ ಅಗತ್ಯವಿದೆ ಎಂದು ಹೇಳಿ ಆ ಸ್ಥಾನವನ್ನು ಮನಮೋಹನ್ ಸಿಂಗ್ (Manmohan Singh) ಅವರಿಗೆ ನೀಡಿದ್ದಾರೆ. ಸೀತಾರಾಮ್ ಕೇಸರಿ ಅವರ ಸಮಯದಲ್ಲಿ ಪಕ್ಷ ಒಡೆದು ಚೂರಾಗುತ್ತಿದ್ದಾಗ ನಾವೆಲ್ಲರೂ ಅವರಿಗೆ ಮನವಿ ಮಾಡಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದೆವು. ಆಗ ಅವರು ಮುಂದೆ ಬಂದು ಪಕ್ಷದ ಜವಾಬ್ದಾರಿ ವಹಿಸಿಕೊಂಡರು. ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಕಾಂಗ್ರೆಸ್ 10 ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿದೆ. ಅವರು ಪಕ್ಷದ ರಕ್ಷಣೆ ಮಾಡಿದ್ದಾರೆ. ಅವರಿಗೆ ಅಧಿಕಾರ ಮುಖ್ಯವಾಗಿದ್ದರೆ ಅವರು ಪ್ರಧಾನ ಮಂತ್ರಿಯಾಗಬಹುದಿತ್ತು ಎಂದರು.
ಯುವಕರ ಧ್ವನಿ ಕಾಂಗ್ರೆಸ್ ಅಧ್ಯಕ್ಷರ ಧ್ವನಿಯಾಗಬೇಕು, ಹೀಗಾಗಿ ನಾನು ಇಲ್ಲಿ ನಿಮ್ಮ ಮಾತುಗಳನ್ನು ಕೇಳಲು ಬಂದಿದ್ದೇನೆ. ಇಲ್ಲಿ ಅನೇಕರು ನಿರುದ್ಯೋಗ, ಸದಸ್ಯತ್ವ ಹಾಗೂ ಜನರ ಸಮಸ್ಯೆ ಬಗ್ಗೆ ಮಾತನಾಡಿದ್ದೀರಿ. ಬಿಜೆಪಿ (BJP) ಸರ್ಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿತ್ತು. ಆದರೆ ಅವರು ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿ ಎಂದು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಭಾವನಾತ್ಮಕ ವಿಚಾರವಾಗಿ ಜನರನ್ನು ಸೆಳೆಯುವುದು ನಮ್ಮ ಉದ್ದೇಶವಲ್ಲ. ಅವರಿಗೆ ಕೇವಲ ಆರ್ಟಿಕಲ್ 370, ಗೋಹತ್ಯೆ, ಮತಾಂತರ ನಿಷೇಧದಂತಹ ವಿಚಾರ ಬಿಟ್ಟು ಅಭಿವೃದ್ಧಿ ಯೋಜನೆಗಳಿವೆಯೇ? ನಾವು ಕೊಟ್ಟ ಶಿಕ್ಷಣ ಹಕ್ಕು, ಆಹಾರ ಭದ್ರತೆ, ಉದ್ಯೋಗ ಭದ್ರತೆಯ ಯೋಜನೆಗಳನ್ನು ಜಾರಿಗೆ ತಂದಿದ್ದಾರಾ? ಕಳೆದ 7 ವರ್ಷಗಳ ಆಡಳಿತದಲ್ಲಿ ಬಿಜೆಪಿ ಸರ್ಕಾರ ಯಾವುದಾದರೂ ಒಂದು ವರ್ಗಕ್ಕೆ ಅನುಕೂಲವಾಗುವಂತಹ ಯೋಜನೆಯನ್ನು ಜಾರಿಗೆ ತಂದಿದೆಯಾ? ಅವರ ಅಜೆಂಡಾ ಬೇರೆ. ದೇವಾಲಯ, ಜಾತಿ, ಧರ್ಮ ವಿಚಾರವಾಗಿ ಸಮಾಜ ಒಡೆಯುವುದು ಅವರ ಅಜೆಂಡಾ ಎಂದು ಕಿಡಿಕಾರಿದರು.
ನಿಮಗೆ ಮೊದಲು ಪಕ್ಷ ನಿಷ್ಠೆ ಇರಬೇಕು. Loyalty will pay Royalty. ನಿಮಗೆ ತಾಳ್ಮೆ ಇದ್ದರೆ ಇವತ್ತಲ್ಲಾ ನಾಳೆ ನೀವು ನಾಯಕನಾಗಿ ಬೆಳೆಯುತ್ತೀರಿ. ನಿಮ್ಮಲ್ಲಿ ಸದಸ್ಯತ್ವ ಮಾಡಿ ಚುನಾವಣೆ ಎದುರಿಸಿದ್ದೀರಿ. ಕೆಲವರು ಗೆದ್ದಿದ್ದೀರಿ. ಕೆಲವರು ಸೋತಿದ್ದೀರಿ. ಈಗ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸದಸ್ಯತ್ವವೇ ಭದ್ರ ಅಡಿಪಾಯ. ನೀವು ಅಧಿಕಾರಕ್ಕೆ ಬರಲು ನೀವು ಸದಸ್ಯತ್ವ ಮಾಡಿದ್ದೀರಿ. ಪಕ್ಷ ಅಧಿಕಾರಕ್ಕೆ ಬರಲು ಯಾಕೆ ಸದಸ್ಯತ್ವ ಮಾಡುತ್ತಿಲ್ಲ? ಇದಕ್ಕೆ ನನಗೆ ಉತ್ತರ ಬೇಕು ಎಂದು ಹೇಳಿದರು.
ಕಾಲೇಜುಗಳಲ್ಲಿ ಚುನಾವಣೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್‍ನಲ್ಲಿ ಹೊಸ ನಾಯಕರನ್ನು ಹುಟ್ಟುಹಾಕಲು ಚುನಾವಣೆ ನಡೆಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಹಣವಿರುವವರ ಮಕ್ಕಳು, ರಾಜಕೀಯ ಕುಟುಂಬದ ಹಿನ್ನೆಲೆ ಇರುವವರಿಗೆ ಅನುಕೂಲವಾಗುತ್ತದೆ ಎಂದು ಮಾತನಾಡುತ್ತಾರೆ. ಆದರೆ ನಮ್ಮ ಯೂಥ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಯಾವ ಬೆಂಬಲ, ಹಿನ್ನೆಲೆ ಇತ್ತು? ಪರಿಶ್ರಮ ತಕ್ಕ ಫಲ ನೀಡಲಿದೆ ಎಂದು ತಿಳಿಸಿದರು.
ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೆ, ಜನಸಂಪರ್ಕ, ಅವರ ಜತೆ ಸಂಭಾಷಣೆ ಮಾಡುವುದು ಎಲ್ಲವೂ ತಿಳಿದಿರುತ್ತದೆ. ಆ ಮೂಲಕ ಅವರಿಗೆ ಅನುಕೂಲವಾಗುತ್ತದೆ. ರಾಜ್ಯದಲ್ಲಿ ಎನ್‍ಎಸ್ ಯುಐ ಬಗ್ಗೆ ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನು ನಾಲ್ಕೈದು ಎನ್‍ಎಸ್‌ಯುಐ ಅಧ್ಯಕ್ಷರಿಗೆ ಉತ್ತೇಜನ ನೀಡಿದೆ. ನಾನು ಯಾವುದೇ ರಾಜಕೀಯ ಕುಟುಂಬದ ಹಿನ್ನೆಲೆ ಇರುವವರಿಗೆ ಉತ್ತೇಜನ ನೀಡಿಲ್ಲ. ಅವಕಾಶ ನಿಮ್ಮ ಮನೆ ಬಾಗಿಲಿಗೆ ಹುಡುಕಿ ಬರುವುದಿಲ್ಲ, ನೀವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು. ನೀವು ಪಕ್ಷವನ್ನು ಪ್ರೀತಿಸುವುದೇ ಆದರೆ, ನೀವು ಪಕ್ಷಕ್ಕೆ ನಿಷ್ಠೆಯಿಂದಿರಿ, ಪಕ್ಷದ ಸದಸ್ಯತ್ವ ಹೆಚ್ಚಿಸಿ ಎಂದರು.
ಯುವ ಕಾಂಗ್ರೆಸಿಗರು 2 ಸಾವಿರ ಸದಸ್ಯರ ನೇಮಕ ಮಾಡಿರುವುದಾಗಿ ಹೇಳಿದ್ದಾರೆ. ನಿಮ್ಮ ಸಾಮರ್ಥಕ್ಕೆ ಈ ಗುರಿ ನಾಚಿಕೆ ತರುವಂತಹದ್ದಾಗಿದೆ. ನೀವು ಪದಾಧಿಕಾರಿಗಳಾಗಲು 80 ಸಾವಿರ, ಲಕ್ಷದವರೆಗೂ ಸದಸ್ಯರನ್ನು ಮಾಡಿದ್ದೀರಿ. ಅದರಲ್ಲಿ ಅರ್ಧದಷ್ಟು ಮಾಡಲು ಸಾಧ್ಯವಿಲ್ಲವೇ? ನಿಮ್ಮಲ್ಲಿ ಯಾರಾದರೂ ನಾಲ್ಕು ಜನ 50 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಮಾಡಿದರೆ, ಅವರನ್ನು ಕೆಪಿಸಿಸಿ ಕಾರ್ಯದರ್ಶಿಗಳಾಗಿ ನೇಮಕ ಮಾಡುತ್ತೇನೆ. ನೀವು ಈಗ ಮಾಡುವ ಸದಸ್ಯತ್ವ ಪಕ್ಷಕ್ಕಾಗಿ ಮಾಡುತ್ತಿರುವುದು. ಖಾಲಿ ಮಾತನಾಡಿದರೆ ನಾನು ಒಪ್ಪುವುದಿಲ್ಲ. ನೀವು ನಾಯಕರಾಗಿ ಬೆಳೆಯಬೇಕಾದರೆ ನಿಮ್ಮ ಪರಿಶ್ರಮ ಹಾಗೂ ಸಾಧನೆ ಮುಖ್ಯ ಎಂದು ನುಡಿದರು. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ
ಶ್ರೀನಿವಾಸ್ ಅವರಿಗೆ ಕುಟುಂಬ, ಹಣ, ಯಾವ ಬೆಂಬಲವೂ ಇಲ್ಲದಿದ್ದರೂ ನಮ್ಮ ನಾಯಕರು ಅವರನ್ನು ಯಾಕೆ ಗುರುತಿಸಿದ್ದಾರೆ? ನಿಮಗೆ ಅವರಿಗಿಂತಾ ದೊಡ್ಡ ಸ್ಫೂರ್ತಿ ಬೇಕಾ? ಪರಿಶ್ರಮ ಫಲ ಕೊಡುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ. ನಾನು ಯುವಕರು ಹಾಗೂ ಮಹಿಳೆಯರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇನೆ. ಈ ಇಬ್ಬರು ಇಡೀ ದೇಶದ ಚಿತ್ರಣವನ್ನೇ ಬದಲಿಸಬಲ್ಲರು. ಇಂದು ಪ್ರಿಯಾಂಕ ಗಾಂಧಿ ಅವರ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಗೆದ್ದರೋ ಸೋತರೋ, ಆದರೆ 400 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ತಯಾರು ಮಾಡಿ ಪರಿಶ್ರಮ ಹಾಕಿದರಲ್ಲ ಅದು ಮುಖ್ಯ. ಹುಟ್ಟಿದವರೆಲ್ಲ ಬಸವರಾಗಲು ಸಾಧ್ಯವಿಲ್ಲ. ಗಾಂಧಿ ಕುಟುಂಬವಿಲ್ಲದೆ ಕಾಂಗ್ರೆಸ್ ಒಟ್ಟಾಗಿರಲು ಸಾಧ್ಯವಿಲ್ಲ, ಕಾಂಗ್ರೆಸ್ ಇಲ್ಲದೆ ದೇಶ ಒಟ್ಟಾಗಿರಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಏನಾಗುತ್ತಿದೆ ಎಂದು ಜನರಿಗೆ ಅರಿವು ಮೂಡಿಸಲು ನಾವು ವಿಫಲವಾಗಿದ್ದೇವೆ. ಈ ಹಿಂದೆ ನಮ್ಮ ದೇಶದ ಜತೆ ನೇಪಾಳ, ಶ್ರೀಲಂಕಾ, ಚೀನಾ, ಎಲ್ಲ ದೇಶಗಳು ನಮ್ಮ ಜತೆ ಉತ್ತಮ ಸಂಬಂಧ ಹೊಂದಿದ್ದವು. ಆದರೆ ಈಗ ಯಾವ ದೇಶ ನಮ್ಮ ಜತೆ ಇದೆ. ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಎಂದು ಹೇಗೆ ಹೇಳಿದರು? ಬೇರೆಯವರು ಗೆದ್ದ ಮೇಲೆ ನಮ್ಮ ಜತೆ ಸಂಬಂಧ ಹೇಗೆ ಮುಂದುವರಿಯುತ್ತದೆ? ನೂತನ ಶಿಕ್ಷಣ ನೀತಿ ತರುತ್ತಿದ್ದಾರೆ. ಹಾಗಾದರೆ ಇಷ್ಟು ವರ್ಷ ನಮ್ಮ ದೇಶದಲ್ಲಿ ಇದ್ದ ಶಿಕ್ಷಣ ಸರಿ ಇರಲಿಲ್ಲವೇ? ನಾವು ಓದುತ್ತಿದ್ದಾಗ ವಿದೇಶಗಳು, ದೇಶದ ಎಲ್ಲ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿ ಬಂದು ಇಂಜಿನಿಯರಿಂಗ್ ಮಾಡುತ್ತಿದ್ದರು ಎಂದು ಹೇಳಿದರು.
ನಮ್ಮ ದೇಶ ವಿಶ್ವದ ಅತ್ಯುತ್ತಮ ವೈದ್ಯರು, ಇಂಜಿನಿಯರ್ ಗಳು, ಮಾನವ ಸಂಪನ್ಮೂಲವನ್ನು ಹುಟ್ಟುಹಾಕಿದೆ. ಇದು ನಮ್ಮ ದೇಶದ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿ. ಜಿಂದಾಲ್ ಸಂಸ್ಥೆಯ ಮಾಲೀಕರು ಓದಿದ್ದು ಬೆಂಗಳೂರಿನಲ್ಲೇ. ಹೀಗೆ ವಿಶ್ವದ ಪ್ರತಿಷ್ಠಿತ 500 ಕಂಪನಿಗಳಲ್ಲಿ ಭಾರತೀಯರು ಎಷ್ಟು ಜನ ಉತ್ತಮ ಹುದ್ದೆ ಅಲಂಕರಿಸಿಲ್ಲ. ನೀವು ಇಂದು ನಿರುದ್ಯೋಗದ ಬಗ್ಗೆ ಮಾತನಾಡಿದ್ದೀರಿ. ಯುವ ಕಾಂಗ್ರೆಸ್ ಸದಸ್ಯರು ಮೊದಲು ಪಕ್ಷದ ಸದಸ್ಯತ್ವ ಮಾಡಬೇಕು. ಇದರಲ್ಲಿ ಯುವಕರು ಹಾಗೂ ನಿರುದ್ಯೋಗಿಗಳ ವಿಭಾಗವಿದೆ. ನೀವು ಸದಸ್ಯತ್ವ ಮಾಡಲು ಹೋದಾಗ ಅಲ್ಲಿ ಎಷ್ಟು ಜನ ಎಸ್‍ಎಸ್‍ಎಲ್ ಸಿ ಯಿಂದ ಪದವಿ ವರೆಗೂ ಓದಿದ್ದಾರೆ, ಅವರಲ್ಲಿ ಎಷ್ಟು ಜನ ನಿರುದ್ಯೋಗಿಗಳು ಎಂಬುದನ್ನು ಪಟ್ಟಿ ಮಾಡಿ. ಇದನ್ನು ಮಾಡಲು ಬೇಕಾದ ಬೆಂಬಲವನ್ನು ನಾನು ನೀಡುತ್ತೇನೆ ಎಂದು ತಿಳಿಸಿದರು.
ನೀವು ನಿರುದ್ಯೋಗಿಗಳ ಅಂಕಿ-ಅಂಶ ಪಡೆಯಿರಿ. ನಂತರ ತಾಲೂಕು ಮಟ್ಟದಲ್ಲಿ 5 ಕಿ.ಮೀ ಪಾದಯಾತ್ರೆ ಮಾಡೋಣ. ಆ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಂದೇಶ ರವಾನಿಸೋಣ. ತಾಲೂಕಿನಲ್ಲಿ 5 ಸಾವಿರ ನಿರುದ್ಯೋಗಿಗಳು ಸಿಗುವುದಿಲ್ಲವೇ? ಮುಂದಿನ ಒಂದು ತಿಂಗಳು ಇದನ್ನೇ ಮಾಡಿ. ತಾಲೂಕಿಗೆ 5 ಸಾವಿರದಂತೆ 200 ಕ್ಷೇತ್ರಗಳಲ್ಲಿ 10 ಲಕ್ಷ ಜನ ಸಿಗುತ್ತಾರೆ. ಡಿವಿಷನ್ ನಲ್ಲಿ 1 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡಿದರೆ ಒಂದು ಸರ್ಕಾರವನ್ನು ತೆಗೆಯಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ನಾನು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಬಿಡಬೇಕು. ಸ್ಪರ್ಧೆ ಇರಬೇಕು. ನೀವು ತ್ಯಾಗದ ಮನಸ್ಥಿತಿ ಇಟ್ಟುಕೊಳ್ಳಲಿಲ್ಲ ಎಂದರೆ ಏನೂ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಆಸೆ ಇರುತ್ತದೆ, ಅವಕಾಶ ಸಿಗುತ್ತದೆ.ಸದ್ಯ ಬಿಜೆಪಿಯವರು ಬೀಗುತ್ತಿದ್ದಾರೆ, ಬೀಗಲಿ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಎರಡು ಪಾಲಿಕೆ ಸೀಟುಗಳನ್ನು ಸೋತಿದ್ದಾರೆ. ಪಕ್ಕದ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಯಾರು ಏನೇ ಹೇಳಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಜನ ಅಧಿಕಾರಕ್ಕೆ ತರುತ್ತಾರೆ ಎನ್ನುವ ನಂಬಿಕೆ ಇದೆ. ನನ್ನ ಮೇಲೆ ಕೇಸ್ ಹಾಕಿ ತೊಂದರೆ ಮಾಡಬಹುದು, ಎಲ್ಲ ಪಕ್ಷದವರು ಸೇರಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡುತ್ತಾರೆ. ನೀವು ನಿಮ್ಮ ವೈಯಕ್ತಿಕ ಹಾಗೂ ಜಾತಿ ಅಜೆಂಡಾವನ್ನು ಬಿಟ್ಟು ಪಕ್ಷದ ಬಗ್ಗೆ ನಿಷ್ಠೆ ಹಾಗೂ ಬದ್ಧತೆ ಹೊಂದಿ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಇವೆ. ನಾವಿದನ್ನು ಜನರಿಗೆ ತಿಳಿಸಬೇಕು ಎಂದರು. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‍ಗೆ ಹೀನಾಯ ಸೋಲು – ಬಿಜೆಪಿಗಿಂತಲೂ, ಕಾಂಗ್ರೆಸ್‍ಗೆ ಡೇಂಜರ್ ಆ ಪಕ್ಷ!
ನಾವು ಪಾದಯಾತ್ರೆ ಮಾಡಿದೆವು, ನೀವು ಇದರಿಂದ ಅನೇಕ ವಿಚಾರ ಕಲಿತಿದ್ದೀರಿ. ಹೋರಾಟ ಹೇಗೆ ಮಾಡಬೇಕು, ವಿಚಾರ ಯಾವ ರೀತಿ ಇರಬೇಕು. ಹೇಗೆ ಸಂಘಟಿಸಬೇಕು, ಹೇಗೆ ಸೌಲಭ್ಯ ಕಲ್ಪಿಸಬೇಕು ಎಂಬುದನ್ನೆಲ್ಲ ಕಲಿತಿರಿ. ನಮ್ಮ ಹೋರಾಟಕ್ಕೆ ಹಳ್ಳಿಯಲ್ಲಿ ಜನ, ಮಕ್ಕಳು, ಮಹಿಳೆಯರು ಯಾವ ರೀತಿ ಪ್ರೀತಿ ತೋರಿಸಿದರು ಎಂಬುದನ್ನು ಕಣ್ಣಾರೆ ನೋಡಿದ್ದೀರಿ. ನಮ್ಮ ಹೋರಾಟದಲ್ಲಿ ಏನಾದರೂ ತಪ್ಪಿದ್ದರೆ ಹೇಳಿ ತಿದ್ದುಕೊಳ್ಳುತ್ತೇವೆ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಬಯಲುಸೀಮೆ ಕರ್ನಾಟಕದಲ್ಲಿ ಹೋರಾಟ ಆರಂಭಿಸಲು ಒಂದೊಂದು ವಿಚಾರಗಳನ್ನು ಚರ್ಚಿಸಿ, ಕಾರ್ಯಕ್ರಮ ರೂಪಿಸಿ. ಬಿಜೆಪಿಯವರು ಸಾವಿರ ಮಾತನಾಡಲಿ. ನಮ್ಮ ಪಕ್ಷದವರು ರೇಪ್ ಕೇಸಲ್ಲಿ ಸಿಲುಕಿಲ್ಲ, 40 ಪರ್ಸೆಂಟ್ ಲಂಚ ಪಡೆಯುವ ಆರೋಪ ಹೊತ್ತಿಲ್ಲ. ಪೋಲೀಸ್ ಇಲಾಖೆಯಲ್ಲಿ ಇಂತಹ ಹುದ್ದೆಗೆ ಇಷ್ಟು ಹಣ ಎಂದು ಹೋಟೆಲ್ ತಿಂಡಿಗಳಂತೆ ಪಟ್ಟಿ ಹಾಕಿರಲಿಲ್ಲ. ಗುತ್ತಿಗೆದಾರರ ಸಂಘದವರು 40 ಪರ್ಸೆಂಟ್ ಲಂಚದ ಬಗ್ಗೆ ದೂರು ಬರೆದಿದ್ದಾರೆ. ಈ ಎಲ್ಲ ವಿಚಾರವನ್ನು ನಾವು ಜನರಿಗೆ ಮುಟ್ಟಿಸಬೇಕು. ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂತ್ ಇರಬೇಕು. ನಾವು ನಮ್ಮ ವಿಚಾರ ಜನರಿಗೆ ತಿಳಿಸಲೇಬೇಕು. ಪಾದಯಾತ್ರೆ ವಿಚಾರವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಲುಪಿದೆವು ಎಂದರು.
ಪಾದಯಾತ್ರೆ ಬಗ್ಗೆ ಒಬ್ಬೊಬ್ಬರೂ ಒಂದೊಂದು ಮಾತನಾಡಿದ್ದಾರೆ. ನಾವು ಪಾದಯಾತ್ರೆ ಮಾಡಿದ ಪರಿಣಾಮ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಮನಸ್ಸು ಮಾಡಿದರೆ 15 ದಿನಗಳಲ್ಲಿ ಅನುಮತಿ ತೆಗೆದುಕೊಳ್ಳಬಹುದು. ನಾನು ನಮ್ಮ ನಾಯಕರ ಜತೆ ಮಾತನಾಡುತ್ತಿದ್ದೇನೆ. ರಾಹುಲ್ ಗಾಂಧಿ ಅವರು ಯುವಕರಿಗೆ ಅವಕಾಶ ನೀಡಬೇಕು ಎಂದರೆ ನಿಮ್ಮಲ್ಲಿ ಸಾಮಥ್ರ್ಯ ನೋಡಿ ಆ ಅವಕಾಶವನ್ನು ನಾನು ನೀಡಬೇಕಲ್ಲವೇ? ನಿಮ್ಮಲ್ಲಿ ಸಾಮಥ್ರ್ಯ ಇದ್ದರಷ್ಟೇ ನಿಮಗೆ ಅವಕಾಶ ನೀಡಲು ಸಾಧ್ಯ ಅಲ್ಲವೇ? ನೀವು ನಿಮ್ಮ ಮೌಲ್ಯ, ಶಕ್ತಿಯನ್ನು ಅರಿಯಬೇಕು. ನೀವು ಯಾವುದೇ ಕಾರಣಕ್ಕೂ ಕುಗ್ಗಬೇಡಿ. ಸಕಾರಾತ್ಮಕವಾಗಿ ಇರಿ. ನೀವು ಪ್ರಯತ್ನ ಮಾಡದೇ ಸಾಧನೆ ಮಾಡಲು ಸಾಧ್ಯವಿಲ್ಲ. ಮನಸ್ಸಿದ್ದರೆ ಮಾರ್ಗ, ಭಕ್ತಿ ಇದ್ದಲ್ಲಿ ಭಗವಂತ, ಪರಿಶ್ರಮ ಇದ್ದರೆ ಫಲ. ನಿಮ್ಮಲ್ಲಿ ಏನಾದರೂ ಭಿನ್ನಾಭಿಪ್ರಾಯ ಇದ್ದರೆ ಅವುಗಳನ್ನು ಇಲ್ಲೇ ಸಮಾಧಿ ಮಾಡಿ. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಸಾಗಬೇಕಾದರೆ ಜತೆಯಾಗಿ ಸಾಗಿ. ನಾನು ಅಧಿಕಾರ ಸ್ವೀಕರಿಸುವಾಗ ಒಂದು ಮಾತು ಹೇಳಿದ್ದೆ, ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು ಎಂದು ಹೇಳಿದರು.
ನಿಮ್ಮ ಆಲೋಚನೆ ಪರಿಶುದ್ಧವಾಗಿ ಸಕಾರಾತ್ಮಕವಾಗಿರಲಿ. ಯಶಸ್ಸು ರೈಲು ಇದ್ದಂತೆ, ಅದರಲ್ಲಿ ಶಿಸ್ತು, ಪರಿಶ್ರಮ, ಬದ್ಧತೆ, ಕಲೆ, ಅದೃಷ್ಟ ಎಂಬ ಅನೇಕ ಬೋಗಿಗಳು ಇರುತ್ತವೆ. ಆದರೆ ಇವೆಲ್ಲವನ್ನು ಮುಂದಕ್ಕೆ ಎಳೆಯುವ ಇಂಜಿನ್ ಎಂದರೆ ಅದು ನಿಮ್ಮ ಆತ್ಮವಿಶ್ವಾಸ. ಪಾದಯಾತ್ರೆಯಿಂದ ಸಂಘಟನೆ ಕಲೆ ಗೊತ್ತಾಯಿತು, ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿತು, ಉತ್ತಮ ಉದ್ದೇಶ, ವಿರೋಧ ಪಕ್ಷಗಳಿಗೆ ಸಂದೇಶ, ಮಾಧ್ಯಮಗಳಿಂದ ಸಂದೇಶ ರವಾನೆ, ಕಾಂಗ್ರೆಸ್ ಜನರಿಗಾಗಿ ಬದುಕಿದೆ ಎಂಬ ಸಂದೇಶ ರವಾನೆಯಾಯಿತು. ಪಾದಯಾತ್ರೆ ಯಶಸ್ಸು ನನ್ನದಲ್ಲ, ಈ ಸದುದ್ದೇಶಕ್ಕಾಗಿ ನಡೆದ ಎಲ್ಲರದ್ದಾಗಿದೆ. ಗಾಂಧಿಜಿ ಅವರು ಒಂದು ಮಾತು ಹೇಳುತ್ತಾರೆ, ನೀವು ನಿಮ್ಮನ್ನು ಗೆಲ್ಲಬೇಕಾದರೆ ನಿಮ್ಮ ಮಿದುಳು ಪ್ರಯೋಗಿಸಿ, ನೀವು ಬೇರೆಯವರನ್ನು ಗೆಲ್ಲಬೇಕಾದರೆ ಹೃದಯ ಪ್ರಯೋಗಿಸಿ. ಜನ ನಿಮಗೆ ಪ್ರೀತಿ ಕೊಟ್ಟರಲ್ಲವೇ? ಅದಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಪ್ರತಿ ಪಂಚಾಯ್ತಿಯಲ್ಲೂ ಆತಿಥ್ಯ ಸಿಕ್ಕಿತು. ಉತ್ತಮ ಉದ್ದೇಶಕ್ಕೆ ನಡೆಯುತ್ತಿದ್ದೀರಿ ಎಂದು ಆ ಪ್ರೀತಿ ಕೊಟ್ಟರು ಎಂದು ತಿಳಿಸಿದರು.
ಶತ್ರುಗಳು ಮಿತ್ರರಾಗುತ್ತಾರೆ. ಬಿಜೆಪಿಯವರನ್ನು ದೂರ ಇಡಲು ದೆಹಲಿಯವರು ಹೇಳಿದಕ್ಕೆ ನಾವು ಜೆಡಿಎಸ್ ಜತೆ ಸರ್ಕಾರ ಮಾಡಿದೆವು. ಈಗ ಅಧಿಕಾರ ಹೋದ ನಂತರ ಅವರು ಏನೇನೋ ಮಾತನಾಡುತ್ತಿದ್ದಾರೆ. ನಮ್ಮನ್ನು ತೆಗಳುತ್ತಲೇ ಇರುತ್ತಾರೆ. ನಾವು ಅವರಿಗೆ ಒಳ್ಳೆಯದು ಮಾಡಿದ್ದೇವೆ. ಅವರಿಗೆ ಒಳ್ಳೆಯದಾಗುತ್ತದೆ ಎಂದರೆ ಬಯ್ಯಲಿ. ನಾವು ಅವರ ಜತೆ ಕೈ ಎತ್ತಿ ಸರ್ಕಾರ ಮಾಡಿ, ಈಗ ಬೈಯ್ದಾಡಿಕೊಂಡರೆ ಜನ ನಮ್ಮನ್ನು ಏನಂತಾರೆ?. ನಮಗೆ ಹೊಡೆಯುವವರ ಕೈ ಹಿಡಿದು ತಡೆಯಬಹುದು. ಆದರೆ ಮಾತನಾಡುವವರ ನಾಲಿಗೆ ಹಿಡಿಯಲು ಸಾಧ್ಯವೇ? ನಾವು ಅವರ ಜತೆ ಸರ್ಕಾರ ಮಾಡಿ, ಅವರ ತಂದೆಯವರನ್ನು ಪ್ರಧಾನಿ ಮಾಡಿ, ಅವರನ್ನು ಮುಖ್ಯಮಂತ್ರಿ ಮಾಡಿದೆವು. ಆದರೆ ನಮ್ಮ ಕೆಲಸವನ್ನು ನಾಟಕ ಎಂದರು. ಅವರು ಏನಾದರೂ ಹೇಳಲಿ, ಜನ ಎಲ್ಲವನ್ನು ನೋಡುತ್ತಿದ್ದಾರೆ. ಬಿಜೆಪಿಯವರು ನಮ್ಮ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಅವರ ಪಕ್ಷದಲ್ಲಿ ಹುಳುಕುಗಳಿಲ್ಲವೇ? ಈಶ್ವರಪ್ಪ ಈ ಸರ್ಕಾರ ಸರಿಯಿಲ್ಲ ಎಂದು ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ, ಮುಂದಿನ ಮುಖ್ಯಮಂತ್ರಿ ನಿರಾಣಿ ಎಂದು ಹೇಳುತ್ತಾರೆ. ಯತ್ನಾಳ್, ಯೋಗೇಶ್ವರ್ ಎಲ್ಲರೂ ಒಂದೊಂದು ಮಾತನಾಡುತ್ತಾರೆ. ಪಕ್ಷದಲ್ಲೇ ಇಟ್ಟುಕೊಂಡು ಪಕ್ಷದವರನ್ನೇ ಸೋಲಿಸುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಒಗ್ಗಟ್ಟಿನ ಪಕ್ಷ, ಬಿಜೆಪಿ ಒಡೆದ ಪಕ್ಷವಾಗಿದೆ ಎಂದರು.
ನಿರುದ್ಯೋಗಿಗಳ ಪಟ್ಟಿ ಮಾಡಿ, ಸದಸ್ಯತ್ವ ನೋಂದಣಿ, ಡಿಜಿಟಲ್ ಯೂತ್ ನೇಮಿಸಿ, ನಿಮ್ಮ ವೈಯಕ್ತಿಕ ಅಜೆಂಡಾ ಬಿಟ್ಟು ಪಕ್ಷದ ಅಜೆಂಡಾ ನಂಬಿ, ಪ್ರದೇಶವಾರು ಸಮಸ್ಯೆ ಪಟ್ಟಿ, ಪ್ರದೇಶಾವಾರು ಯುವಕರ ಸಮಸ್ಯೆ ಹಾಗೂ ಅದಕ್ಕೆ ಪರಿಹಾರವಾಗಿ ಪ್ರಣಾಳಿಕೆ ಸಿದ್ದಪಡಿಸಿ ಕೊಡಿ. ನು ಯುವ ಕಾಂಗ್ರೆಸ್ ಗೆ ಪ್ರತ್ಯೇಕ ಕಾರ್ಯಕ್ರಮ ನೀಡುತ್ತೇನೆ. ಕೋವಿಡ್ ನಲ್ಲಿ ಸತ್ತವರ ಕುಟುಂಬಕ್ಕೆ ಪರಿಹಾರ ಕೊಡಿಸಲು ಅರ್ಜಿ ಹಾಕಿಸಿ. ಇನ್ನು 18 ವರ್ಷ ಆದವರನ್ನು ಮತದಾರರ ಪಟ್ಟಿಗೆ ಸೇರಿಸುವುದು ನಿಮ್ಮ ಅಜೆಂಡಾ ಆಗಬೇಕು. ನಮ್ಮ ಪಕ್ಷ ಸೇರಿ ಪಕ್ಷದ ಅಜೆಂಡಾ ಒಪ್ಪಿದರೆ ಯಾರೂ ಪಕ್ಷ ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ
ನಿಮ್ಮಲ್ಲಿ ಯಾರು ಕಾರ್ಯಪ್ರವೃತ್ತವಾಗಿರುವುದಿಲ್ವೋ ನೀವು ಚುನಾಯಿತ ಪ್ರತಿನಿಧಿಯಾಗಿದ್ದರೂ ನಿಮ್ಮನ್ನು ಕಿತ್ತುಹಾಕುತ್ತೇವೆ. ನೀವು ಕೆಲಸ ಮಾಡದಿದ್ದರೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಬೇರೆಯವರಿಗೆ ಅವಕಾಶ ಕೊಟ್ಟು ಹೋಗಬಹುದು. ನೀವು ಗುರಿ ಇಟ್ಟುಕೊಳ್ಳದೇ ಪಕ್ಷ ಕಟ್ಟಲು ಹೇಗೆ ಸಾಧ್ಯ? ಈ ವಿಚಾರವಾಗಿ ನಾನು ಯೂಥ್ ಕಾಂಗ್ರೆಸ್ ಅಧ್ಯಕ್ಷರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು, ದೆಹಲಿ ನಾಯಕರ ಜತೆ ಮಾತನಾಡುತ್ತೇನೆ. ಈ ಪರಿಸ್ಥಿತಿಯಲ್ಲಿ ನೀವು ಮಾಡದಿದ್ದರೆ, ಯಾವಾಗ ಮಾಡುತ್ತೀರಿ. ದೇಶದಲ್ಲಿ ನಮಗೆ ಈಗ ತಾತ್ಕಾಲಿಕ ಹಿನ್ನಡೆ. ನಮ್ಮ ಇತಿಹಾಸ, ನಮ್ಮ ನಾಯಕತ್ವ, ನಮ್ಮ ಶಕ್ತಿಯಿಂದ ದೇಶಕ್ಕೆ ಕಾಂಗ್ರೆಸ್ ಅನಿವಾರ್ಯ ಎಂದರು.
ಕಾಂಗ್ರೆಸ್ ಇಲ್ಲದಿದ್ದರೆ ದೇಶ ಛಿದ್ರವಾಗುತ್ತದೆ. ಇಂದು ವಿದೇಶದಲ್ಲಿರುವವರು ಅಭದ್ರತೆ ಎದುರಿಸುತ್ತಿದ್ದಾರೆ. ಈ ದೇಶಕ್ಕೆ ಭವಿಷ್ಯ ಸಿಗಬೇಕಾದರೆ, ನಮ್ಮ ಆರ್ಥಿಕ ನೀತಿ, ಉದಾರಿಕರಣ ನೀತಿ ಎಲ್ಲವೂ ಶಕ್ತಿ ತುಂಬಲಿದೆ. ನೀವೆಲ್ಲ ಕನಸು ಕಾಣಬೇಕು, ಕನಸು ನನಸಾಗಿಸಲು ಹಂಬಲಿಸಬೇಕು, ಕನಸಿಗಾಗಿ ಶಿಸ್ತು ಇಟ್ಟುಕೊಳ್ಳಬೇಕು, ಕನಸಿಗೆ ಬದ್ಧತೆ ತೋರಿಸಬೇಕು. ಕನಸು ಜೀವನಕ್ಕೆ ಸ್ಫೂರ್ತಿ, ನಂಬಿಕೆ ಕನಸಿಗೇ ಸ್ಫೂರ್ತಿ, ಪ್ರೀತಿ ಹೃದಯಕ್ಕೆ ಸ್ಫೂರ್ತಿ, ನಗು ಎಲ್ಲದಕ್ಕೂ ಸ್ಫೂರ್ತಿ. ಹಾಗೇ ನೀವು ಸದಾ ನಗುತ್ತಾ ಜನರ ವಿಶ್ವಾಸ ಗಳಿಸಿ ಎಂದು ಶುಭ ಹಾರೈಸುತ್ತೇನೆ ಎಂದು ಡಿಕೆಶಿ ಹೇಳಿದರು.