Connect with us

Bengaluru City

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ – ಕಾಂಗ್ರೆಸ್ ಅತಿ ದೊಡ್ಡ ಪಕ್ಷ, ಯಾರಿಗೆ ಎಷ್ಟು ಸ್ಥಾನ?

Published

on

ಬೆಂಗಳೂರು: ನಗರ ಸ್ಥಳಿಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.

ರಾಮನಗರ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಗೆದ್ದುಕೊಂಡರೆ ಮಂಗಳೂರು, ಜೋಗ್ ಕಾರ್ಗಲ್, ಕಂಪ್ಲಿಯನ್ನು ಬಿಜೆಪಿ ಗೆದ್ದುಕೊಂಡಿದೆ. ಮಾಗಡಿ ಪುರಸಭೆಯನ್ನು ಜೆಡಿಎಸ್ ಗೆದ್ದುಕೊಂಡಿದೆ.

ಒಟ್ಟು 418 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಇದರಲ್ಲಿ ರಾಮನಗರ, ಚಿಕ್ಕಬಳ್ಳಾಪುರ ನಗರಗಳ ಗೆಲುವಿನೊಂದಿಗೆ ಕಾಂಗ್ರೆಸ್ ಒಟ್ಟು 152 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಬಿಟ್ಟರೆ ಬಿಜೆಪಿ 125 ಸ್ಥಾನಗಳನ್ನು ಗೆದ್ದುಕೊಂಡಿದೆ. 63 ಸ್ಥಾನವನ್ನು ಗೆದ್ದಿರುವ ಜೆಡಿಎಸ್ ಪಕ್ಷ ಮೂರನೇ ಸ್ಥಾನದಲ್ಲಿದ್ದು ಇತರರು 78 ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್, ರಾಜ್ಯ ‘ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ’ಯಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ನಗರಗಳ ಗೆಲುವಿನೊಂದಿಗೆ, ಒಟ್ಟು 418 ರಲ್ಲಿ, 151 ಸ್ಥಾನಗಳಲ್ಲಿ ಗೆದ್ದು ಕಾಂಗ್ರೆಸ್ ಅಗ್ರ ಸ್ಥಾನ ಪಡೆದಿದೆ. ಗೆಲುವು ಸಾಧಿಸಿದ ಪಕ್ಷದ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು. ಗೆಲುವಿಗೆ ಕಾರಣಕರ್ತರಾದ ಕಾರ್ಯಕರ್ತರಿಗೂ, ಮತದಾರರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದೆ.

ಮಂಗಳೂರು ಪಾಲಿಕೆ ಬಿಜೆಪಿ ತೆಕ್ಕೆಗೆ ಬಿದ್ದಿದ್ದು ಒಟ್ಟು 60 ಸ್ಥಾನಗಳಲ್ಲಿ ಕಾಂಗ್ರೆಸ್ 14 ರಲ್ಲಿ ಗೆದ್ದಿದ್ದರೆ, ಇತರರು 2 ಸ್ಥಾನದಲ್ಲಿ ಗೆದ್ದಿದ್ದಾರೆ. ಬಿಜೆಪಿ 44 ರಲ್ಲಿ ಗೆಲ್ಲುವ ಮೂಲಕ ಆಡಳಿತರೂಢ ಕಾಂಗ್ರೆಸ್ ಸೋಲಿಸಿ ನಗರಪಾಲಿಕೆಯನ್ನು ಗೆದ್ದುಕೊಂಡಿದೆ.

ದಾವಣಗೆರೆ ಪಾಲಿಕೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಒಟ್ಟು 45 ಸ್ಥಾನಗಳಲ್ಲಿ ಬಿಜೆಪಿ 17, ಜೆಡಿಎಸ್ 1 ಮತ್ತು ಇತರರು 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ ಒಟ್ಟು 22 ಸ್ಥಾನಗಳನ್ನು ಗೆದ್ದುಕೊಂಡಿರುವ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಕನಕಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿದ್ದು, ಬಿಜೆಪಿ 1 ಮತ್ತು ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. 7 ವಾರ್ಡ್‍ಗಳಲ್ಲಿ ಅವಿರೋಧ ಆಯ್ಕೆಯೊಂದಿಗೆ ಒಟ್ಟು 26 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಕನಕಪುರ ನಗರಸಭೆಯಲ್ಲಿ ಗೆಲುವಿನ ನೆಗೆ ಬೀರಿದೆ.

ಕೋಲಾರ ನಗರ ಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಾಗಿದೆ. ಚುನಾವಣೆ ನಡೆದ ಒಟ್ಟು 35 ವಾರ್ಡ್ ಗಳಲ್ಲಿ, ಕಾಂಗ್ರೆಸ್ 12, ಬಿಜೆಪಿ 3 ಮತ್ತು ಜೆಡಿಎಸ್ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಇತರರು 12 ವಾರ್ಡ್ ನಲ್ಲಿ ಗೆದ್ದಿದ್ದಾರೆ. ಬಹುಮತ ಪಡೆಯಲು ಯಾರು 13 ಸ್ಥಾನ ಗೆಲ್ಲದ ಪರಿಣಾಮ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಳಬಾಗಿಲು ನಗರಸಭೆಯಲ್ಲೂ ಕೋಲಾರದ ರೀತಿಯಲ್ಲೇ ಅತಂತ್ರ ಪರಿಸ್ಥಿತಿ ಎದುರಾಗಿದ್ದು, ಒಟ್ಟು 31 ವಾರ್ಡ್ ನಲ್ಲಿ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ 7, ಬಿಜೆಪಿ 2, ಜೆಡಿಎಸ್ 10 ಮತ್ತು ಇತರರು 12 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಬಹುಮತಕ್ಕೆ ಬೇಕಾದ 16 ಸ್ಥಾನ ಯಾರೂ ಗೆದ್ದಿಲ್ಲದ ಕಾರಣ ಅತಂತ್ರವಾಗಿದೆ.

ಕೆಜಿಎಫ್ ನಗರಸಭೆಯಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ನಡೆದ ಒಟ್ಟು 35 ವಾರ್ಡ್ ಗಳಲ್ಲಿ, ಕಾಂಗ್ರೆಸ್ 13, ಬಿಜೆಪಿ 3, ಜೆಡಿಎಸ್ 2 ಮತ್ತು ಇತರರು 17 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದಾರೆ. ಬಹುಮತಕ್ಕೆ 18 ಸ್ಥಾನಗಳ ಅವಶ್ಯಕತೆ ಇದ್ದು, ಈ ನಗರಸಭೆ ಫಲಿತಾಂಶ ಕೂಡ ಅತಂತ್ರವಾಗಿದೆ.

ಗೌರಿಬಿದನೂರು ನಗರಸಭೆಯಲ್ಲೂ ಅತಂತ್ರ ಫಲಿತಾಂಶ ಹೊರಬಂದಿದೆ. ಒಟ್ಟು 31 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 15, ಬಿಜೆಪಿ 3, ಜೆಡಿಎಸ್ 7 ಮತ್ತು ಇತರರು 6 ಸ್ಥಾನಗಳಲ್ಲಿ ಗೆದ್ದಿದ್ದು, ಬಹುಮತಕ್ಕಾಗಿ 16 ಸ್ಥಾನಗಳ ಅವಶ್ಯಕತೆ ಇದ್ದು, ಕಾಂಗ್ರೆಸ್ ಸನಿಹದಲ್ಲಿ ಇದೆ.

ಚಿಂತಾಮಣಿ ನಗರಸಭೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದು, ಚುನಾವಣೆ ನಡೆದ 31 ವಾರ್ಡ್ ಗಳಲ್ಲಿ ಕಾಂಗ್ರೆಸ್ 1, ಬಿಜೆಪಿ 0, ಜೆಡಿಎಸ್ 14, ಮಾಜಿ ಶಾಸಕ ಸುಧಾಕರ್ ನೇತೃತ್ವದ ಭಾರತೀಯ ಪ್ರಜಾಪಕ್ಷ 14 ಮತ್ತು ಇತರೆ 2 ಗೆದ್ದಿವೆ. ಬಹುಮತಕ್ಕೆ 16 ಸ್ಥಾನದ ಅವಶ್ಯಕತೆ ಇದ್ದು, ಇಲ್ಲೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಗಡಿ ಪುರಸಭೆ ಜೆಡಿಎಸ್ ತೆಕ್ಕೆಗೆ ಬಿದ್ದಿದ್ದು, ಒಟ್ಟು 23 ವಾರ್ಡ್ ಗಳಲ್ಲಿ ಚುನಾವಣೆ ನಡೆದಿದದೆ. ಇದರಲ್ಲಿ ಕಾಂಗ್ರೆಸ್ 10, ಬಿಜೆಪಿ 1, ಜೆಡಿಎಸ್ 12 ಗೆದ್ದಿದ್ದು, 12 ಸ್ಥಾನದಲ್ಲಿ ಗೆದ್ದ ಜೆಡಿಎಸ್ ಬಹುಮತ ಪಡೆದಿದೆ.

ಬೀರೂರು ನಗರಸಭೆಯೂ ಕೂಡ ಅತಂತ್ರ ಪರಿಸ್ಥಿತಿ ಎದುರಾಗಿದ್ದು, ಒಟ್ಟು 23 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 9, ಬಿಜೆಪಿ 10, ಜೆಡಿಎಸ್ 2 ಮತ್ತು ಇತರರು 2 ಸ್ಥಾನದಲ್ಲಿ ಗೆದ್ದಿದ್ದಾರೆ. ಬಹುಮತಕ್ಕೆ ಬೇಕಾದ 12 ಸ್ಥಾನಗಳನ್ನು ಯಾವ ಪಕ್ಷವೂ ಗೆಲ್ಲದ ಕಾರಣ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

ಕಂಪ್ಲಿ ನಗರಸಭೆ ಬಿಜೆಪಿ ತೆಕ್ಕೆಗೆ ಬಿದ್ದಿದ್ದು, ಒಟ್ಟು ಚುನಾವಣೆ ನಡೆದ 23 ವಾರ್ಡ್ ಗಳಲ್ಲಿ ಕಾಂಗ್ರೆಸ್ 10, ಬಿಜೆಪಿ 13 ಸ್ಥಾನದಲ್ಲಿ ಗೆದ್ದಿವೆ. 13 ಸ್ಥಾನಗಳಲ್ಲಿ ಗೆದ್ದು ಬಹುಮತ ಪಡೆದ ಬಿಜೆಪಿ ಪಕ್ಷ ಬಹುಮತ ಪಡೆದಿದೆ.

ಕುಂದಗೋಳ ಪಟ್ಟಣ ಪಂಚಾಯಿತಿ ಬಿಜೆಪಿ ತೆಕ್ಕೆಗೆ ಹೋಗಿದ್ದು, ಒಟ್ಟು 19 ವಾರ್ಡ್ ಗಳಲ್ಲಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ 5, ಬಿಜೆಪಿ 12 ಮತ್ತು ಇತರರು 2 ಸ್ಥಾನ ಪಡೆದುಕೊಂಡಿದ್ದಾರೆ. 12 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಬಹುಮತ ಪಡೆದಿದೆ.

ಜೋಗ್ ಕಾರ್ಗಲ್ ನಗರಸಭೆ ಬಿಜೆಪಿ ಬಹುಮತ ಪಡೆದಿದ್ದು, ಚುನಾವಣೆ ನಡೆದ ಒಟ್ಟು 11 ವಾರ್ಡ್ ಗಳಲ್ಲಿ ಕಾಂಗ್ರೆಸ್ 1, ಬಿಜೆಪಿ 9 ಮತ್ತು ಇತರರು 1 ಸ್ಥಾನದಲ್ಲಿ ಗೆದ್ದಿದ್ದಾರೆ. 9 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಬಹುಮತ ಸಾಧಿಸಿದೆ.

ಕೂಡ್ಲಿಗಿ ನಗರಸಭೆ ಅತಂತ್ರ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 20 ವಾರ್ಡ್ ಗಳಲ್ಲಿ ಚುನಾವಣೆ ನಡೆದಿದ್ದು, ಕಾಂಗ್ರೆಸ್ 6, ಬಿಜೆಪಿ 7, ಜೆಡಿಎಸ್ 04 ಮತ್ತು ಇತರರು 3 ಸ್ಥಾನದಲ್ಲಿ ಗೆದ್ದಿದ್ದಾರೆ. ಬಹುಮತ ಸಾಬೀತು ಪಡಿಸಲು ಒಟ್ಟು 11 ಸ್ಥಾನದ ಅವಶ್ಯಕತೆ ಇದೆ.

Click to comment

Leave a Reply

Your email address will not be published. Required fields are marked *