ಬೆಳಗಾವಿ: ಬಾಮೈದನ ಮೇಲಿನ ಜಾರಿ ನಿರ್ದೇಶನಾಲಯ (ED) ದಾಳಿ ನನಗೆ ಅಚ್ಚರಿ ತಂದಿದೆ ಎಂದು ಲೋಕೋಪಯೋಗಿ(PWD) ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಹೇಳಿದ್ದಾರೆ.
ವೈ. ಮಂಜುನಾಥ್ (Y Manjunath) ಅವರ ಮೇಲಿನ ಇಡಿ ದಾಳಿಗೆ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತದಲ್ಲಿ ಅವರ ಮೇಲಿರುವ ಕೇಸ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಹಿಂದೆ ಹೈಕೋರ್ಟ್ ಒಂದು ಹಳೆಯ ಕೇಸ್ ಅನ್ನು ರದ್ದು ಮಾಡಿತ್ತು. ಹೀಗಿರುವಾಗ ಭ್ರಷ್ಟಾಚಾರದ ಆರೋಪದ ಮೇಲೆ ಇಡಿ ದಾಳಿ ಮಾಡಿರುವುದು ನನಗೂ ಅಚ್ಚರಿ ಮೂಡಿಸಿದೆ ಎಂದರು.
ಭ್ರಷ್ಟಾಚಾರದ ತನಿಖೆ ನಡೆಸಲು ರಾಜ್ಯ ಸರ್ಕಾರ ಹಾಗೂ ಎಸಿಬಿ/ಲೋಕಾಯುಕ್ತಗಳಿವೆ. ಕೇಂದ್ರ ಸರ್ಕಾರದ ಕೈಯಲ್ಲಿದ್ದರೆ ಸಿಬಿಐನವರು ತನಿಖೆ ಮಾಡಬೇಕಿತ್ತು. ಆದರೆ ಇಡಿ ದಾಳಿ ಮಾಡಿರುವುದರ ಹಿಂದೆ ರಾಜಕೀಯ ಪ್ರೇರಿತ ಸಂಚು ಇದೆಯೇ ಎಂಬುದನ್ನು ಕಾದು ನೋಡಬೇಕಿದೆ. ತನಿಖೆ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದರ ಮೇಲೆ ಮುಂದಿನ ದಿನಗಳಲ್ಲಿ ಸ್ವರೂಪ ಮತ್ತು ಪರಿಣಾಮ ಗೊತ್ತಾಗಲಿದೆ ಎಂದು ಹೇಳಿದರು.
ನನ್ನ ಪ್ರಭಾವದಿಂದ ಆಸ್ತಿ ಮಾಡಿಲ್ಲ
ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಎಂಬ ಕಾರಣಕ್ಕೇ ದಾಳಿ ಮಾಡಲಾಗಿದೆಯೇ? ಮತ್ತು ಸಚಿವರ ಪ್ರಭಾವದಿಂದಲೇ ಇಷ್ಟೊಂದು ಆಸ್ತಿ ಸಂಪಾದಿಸಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಆತ ಎಲ್ಲೇ ಇದ್ದರೂ ಒಬ್ಬ ಅಧಿಕಾರಿಯಷ್ಟೇ. ಅವರ ಇಲಾಖೆಯಲ್ಲಿ ನಮ್ಮ ಪ್ರಭಾವ ಏನೂ ಇರುವುದಿಲ್ಲ, ಅದು ಸೀಮಿತ ಪೋಸ್ಟ್. ಇನ್ನು ಮಾವಲಿ ಚೆಕ್ ಪೋಸ್ಟ್ ಹತ್ತಿರ ಇರುವ ರೆಸಾರ್ಟ್ ಮಂಜುನಾಥ್ ಹೆಸರಿನಲ್ಲಿ ಇಲ್ಲ, ಅದು ಅವರ ಬ್ರದರ್ಸ್ ಹೆಸರಿನಲ್ಲಿದೆ. ಕಳೆದ 30 ವರ್ಷಗಳಿಂದ ಅವರ ಕುಟುಂಬದವರು ರೆಸಾರ್ಟ್ ವ್ಯವಹಾರದಲ್ಲಿದ್ದಾರೆ. ದಾಳಿಯಾಗಿ ಮೂರು ದಿನಗಳಾಗಿದ್ದು, ಇಡಿಯವರು ಕೇಳುವ ಪ್ರಶ್ನೆಗಳ ಆಧಾರದ ಮೇಲೆ ಉತ್ತರ ನೀಡಲು ಸಮಯ ಬೇಕಾಗುತ್ತದೆ. ಇಂದು ಮಂಜುನಾಥ್ ಸಿಗಲಿದ್ದು, ಅವರೊಂದಿಗೆ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಇ.ಡಿ ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ
ಭ್ರಷ್ಟಾಚಾರ ಎಲ್ಲ ಕಡೆಯೂ ಇದೆ, ಅದು ಕೇವಲ ಒಂದೇ ಇಲಾಖೆಗೆ ಸೀಮಿತವಾಗಿಲ್ಲ. ಎಲ್ಲಿ ಅಧಿಕಾರಿಗಳು ಸಿಕ್ಕಿಬೀಳುತ್ತಾರೋ ಅಲ್ಲಿ ಭ್ರಷ್ಟಾಚಾರ ಹೊರಗಡೆ ಬರುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ನಾಯಕರಿಗೆ ಇಡಿ ದಾಳಿಯ ಆತಂಕವಿದೆಯೇ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ಆತಂಕ ಇದ್ದೇ ಇದೆ. 2028ರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಇಂತಹ ದಾಳಿಗಳು ಹೊರಗಡೆ ಬರುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಭಿನ್ನಾಭಿಪ್ರಾಯ ಬಂದಿಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನಡುವಿನ ಸಂಬಂಧದ ಕುರಿತು ಕೇಳಲಾದ ಪ್ರಶ್ನೆಗೆ ಚಟಾಕಿ ಹಾರಿಸಿದ ಅವರು, “ನಮ್ಮಿಬ್ಬರ ನಡುವಿನ ಸಂಬಂಧವನ್ನು ಯಾವ ಮಾಪನದಲ್ಲಿ ಅಳೆಯುತ್ತೀರಿ? ಇಬ್ಬರ ನಡುವೆ ಇಲ್ಲಿಯವರೆಗೆ ಯಾವುದೇ ತರಹದ ಮತಭೇದ ಆಗುವ ಸಂದರ್ಭವೇ ಬಂದಿಲ್ಲ” ಎಂದರು.
ಕೆಪಿಸಿಸಿ ಗಾದಿ ತಪ್ಪಿದ್ದೇಕೆ?
ಸಿದ್ದರಾಮಯ್ಯ ಅವರೇ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಗಾದಿ ತಪ್ಪಿಸಿದರು ಎಂಬ ಚರ್ಚೆಗೆ ಇತಿಹಾಸದ ಪುಟಗಳನ್ನು ತೆರೆದಿಟ್ಟ ಸಚಿವರು, ಒಂದು ಹುದ್ದೆಗೆ ಒಬ್ಬ ವ್ಯಕ್ತಿ ಇರಬೇಕು ಎಂದು ನಾನು ಸಾಕಷ್ಟು ಬಾರಿ ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಆಫರ್ ನನಗೆ ಮೊದಲೇ ಇತ್ತು. ಮಂತ್ರಿ ಸ್ಥಾನ ಮತ್ತು ಅಧ್ಯಕ್ಷ ಸ್ಥಾನ ಎರಡರಲ್ಲಿ ಯಾವುದು ಬೇಕು ಎಂದು ನಾಯಕರು ಕೇಳಿದಾಗ, ನಾನು ‘ಎರಡನ್ನೂ ಕೊಡಿ’ ಎಂದು ಕೇಳಿದ್ದೆ. ಕೊನೆಗೆ ಆ ಚರ್ಚೆ ಇಲ್ಲಿಯವರೆಗೆ ಜಗ್ಗಿ, ಅಂತಿಮವಾಗಿ ನನಗೆ ಮಂತ್ರಿ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು.
