ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಸ್ತೂರಿ ರಂಗನ್ ವರದಿ ಆತಂಕ ಶುರುವಾಗಿದೆ. ಕೇಂದ್ರ ಪರಿಸರ, ಅರಣ್ಯ ಸಚಿವಾಲಯ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಗುರುತಿಸಿ, ಹೊಸ ಕರಡು ಅಧಿಸೂಚನೆ ಪ್ರಕಟಿಸಿದೆ.
ಇದರನ್ವಯ ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ, ಉಡುಪಿ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ 39 ತಾಲೂಕುಗಳ 1,449 ಗ್ರಾಮಗಳ 20,668 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮುಂದಿನ ತಿಂಗಳು 1 ದಿನ ವಿಶೇಷ ಅಧಿವೇಶನ ನಡೆಸಿ ತೀರ್ಮಾನ ಕೈಗೊಳ್ಳೋದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೇಂದ್ರದ ಕರಡು ಅಧಿಸೂಚನೆಯಲ್ಲಿ ಕಠಿಣ ನಿರ್ಬಂಧಗಳಿವೆ. ಕರ್ನಾಟಕಕ್ಕೆ ಒಂದು ನಿಯಮ. ಬೇರೆ ಕಡೆಗೆ ಒಂದು ನಿಯಮ ಇದೆ. ರೈತರನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳೋದಾಗಿ ಸಿಎಂ ಹೇಳಿದ್ದಾರೆ.
ಎಸ್‌ಐಆರ್ ಮುಗಿದ ತಕ್ಷಣ ಜಿಬಿಎ ಎಲೆಕ್ಷನ್‌ಗೆ ಮುಂದಾಗಲಾಗುವುದು ಅಂತ ಹೇಳಿದ್ದಾರೆ. ಇನ್ನೊಂದೆಡೆ, ಪ್ರಜಾಸೇವೆ ಹೊಸ ಇಲಾಖೆ ಆರಂಭಿಸಲಿದ್ದು, ಪ್ರತಿ ತಿಂಗಳು ಮೊದಲ ಶನಿವಾರ ಇಬ್ಬರು ಸಚಿವರು ಪ್ರತಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸಮಸ್ಯೆ ಆಲಿಸಲಿದ್ದಾರೆ ಅಂತ ಸಿಎಂ ಹೇಳಿದ್ದಾರೆ.
