ಟೀಸರ್ ಮೂಲಕವೇ ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿರುವ ಬಹುನಿರೀಕ್ಷಿತ ‘ದೇವಿ ಮಹಾತ್ಮೆ’ (Devi Mahatme) ಚಿತ್ರದ ಹೊಚ್ಚ ಹೊಸ ಗೀತೆ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರದ ಪ್ರಸಿದ್ಧ ‘ಬ್ರಹ್ಮಕಲಶ’ ಗೀತೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ಗಾಯಕ ಹಾಗೂ ಸಂಯೋಜಕ ಅಬ್ಬಿ ವಿ. (Abby) ಅವರು ಈ ಚಿತ್ರದ ‘ಜಗವ ಕಾಯೋ ದೇವನು…’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ. ತಮ್ಮ ವಿಶಿಷ್ಟ ಕಂಠಸಿರಿಯಿಂದ ಕನ್ನಡಿಗರ ಮನಗೆದ್ದಿರುವ ಅವರು, ಮತ್ತೊಮ್ಮೆ ಕನ್ನಡಿಗರ ಮನಗೆಲ್ಲಲು ಸಜ್ಜಾಗಿದ್ದಾರೆ.
ಕೆನಡಾದಲ್ಲಿ ಬೆಳೆದು, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಎರಡರಲ್ಲೂ ಪರಿಣತಿ ಹೊಂದಿರುವ ಅಬ್ಬಿ ವಿ., ಭಕ್ತಿ ಮತ್ತು ದೈವಿಕ ಭಾವದ ಗೀತೆಗಳನ್ನು ಪ್ರಸ್ತುತಪಡಿಸುವುದರಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದವರು. ಈ ವಿಶೇಷ ಗೀತೆಗೆ ‘ಕಾಂತಾರ’ ಖ್ಯಾತಿಯ ಖ್ಯಾತ ಗೀತ ರಚನೆಕಾರ ಪ್ರಮೋದ್ ಮರವಂತೆ ಅರ್ಥಗರ್ಭಿತ ಸಾಹಿತ್ಯ ಬರೆದಿದ್ದು, ಲಿಕಿತ್ ಪ್ರಸಾದ್ ಶೆಟ್ಟಿ ಸುಮಧುರ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಹಿತ್ಯ, ಸಂಗೀತ ಹಾಗೂ ಅಬ್ಬಿ ವಿ. ಅವರ ಕಂಠಸಿರಿಯ ಅಪರೂಪದ ಸಂಗಮವಾಗಿರುವ ಈ ಹಾಡು ಕೇಳುಗರಿಂದ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಜೊತೆಗೆ ಹಾಡಿನ ವಿಶುವಲ್ಸ್ ಕೂಡ ಅತ್ಯಂತ ಸೊಗಸಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಇದನ್ನೂ ಓದಿ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
ಇದಕ್ಕೂ ಮುನ್ನ ಬಿಡುಗಡೆಯಾಗಿದ್ದ ಚಿತ್ರದ 1 ನಿಮಿಷ 5 ಸೆಕೆಂಡುಗಳ ಟೀಸರ್ ಸಿನಿರಸಿಕರಲ್ಲಿ ಚಿತ್ರದ ಬಗೆಗಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಹಿರಿಯ ನಟ ರಂಗಾಯಣ ರಘು ಅವರ ಅದ್ಭುತ ಅಭಿನಯ ಹಾಗೂ ಲಿಕಿತ್ ಪ್ರಸಾದ್ ಶೆಟ್ಟಿ ಅವರ ರೋಚಕ ಹಿನ್ನೆಲೆ ಸಂಗೀತ ಟೀಸರ್‌ನ ಪ್ರಮುಖ ಆಕರ್ಷಣೆಯಾಗಿದ್ದವು. ಎಸ್.ಕೆ.ರಾವ್ ಅವರ ಅತ್ಯುತ್ತಮ ಛಾಯಾಗ್ರಹಣ ಸಿನಿಪ್ರಿಯರ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಈ ಎಲ್ಲಾ ಅಂಶಗಳು ಕುಟುಂಬ ಸಮೇತ ಎಲ್ಲಾ ವರ್ಗದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಬಹುದು ಎಂಬ ಭರವಸೆಯನ್ನು ಮೂಡಿಸಿವೆ.
‘ಯುವಿಜಿ ಸ್ಟುಡಿಯೋ’ ಬ್ಯಾನರ್ ಅಡಿಯಲ್ಲಿ ವಿದ್ಯಾ ಗಾಂಧಿ ರಾಜನ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ನಾಗರಾಜ ಸೋಮಯಾಜಿ ಚಿತ್ರಕಥೆ ರಚಿಸಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಚಿತ್ರಕ್ಕೆ ನಾಗರಾಜ ಸೋಮಯಾಜಿ ಮತ್ತು ಭಾಸ್ಕರ ಬಂಗೇರ ಜಂಟಿಯಾಗಿ ಸಂಭಾಷಣೆ ರಚಿಸಿದ್ದು, ಉಜ್ವಲ್ ಚಂದ್ರ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಸದ್ಯ ಬಿಡುಗಡೆಯಾಗಿರುವ ‘ಜಗವ ಕಾಯೋ ದೇವನು’ ಹಾಡಿನ ಯಶಸ್ಸು ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿದ್ದು, ಸಿನಿಮಾವು ಅತೀ ಶೀಘ್ರದಲ್ಲೇ ರಾಜ್ಯಾದ್ಯಂತ ಬೆಳ್ಳಿಪರದೆಗೆ ಅಪ್ಪಳಿಸಲು ಸಜ್ಜಾಗುತ್ತಿದೆ. ಇದನ್ನೂ ಓದಿ: ದರ್ಶನ್ ನಟನೆಯ ಶಾಸ್ತ್ರಿ ಕಟೌಟ್ ಮುಂದೆ ದೇವಿಯ ಸಾಹಸ

