ಡಿಯರ್ ಅಮೃತ,
ಈಗಿಗ ನಿನ್ನ ಕನಸು ನನ್ನೊಳಗೆ ಮಿತಿ ಮೀರುತ್ತಿದೆ. ಮನಸ್ಸು ಪ್ರತಿ ಕ್ಷಣವೂ ನಿನ್ನನ್ನ ಹಂಬಲಿಸ್ತಿದೆ. ಅದ್ಯಾಕೋ ನೀನು ನನ್ನೊಳಗೆ ವಿಶೇಷವಾಗಿ ತುಂಬಿಕೊಳ್ತಿದಿಯ. ಇದು ಕೇವಲ ಸ್ನೇಹ ಮಾತ್ರ ಅಲ್ಲ. ಅದರಾಚೆಯ ಪ್ರೇಮದ ತೀರವೇ ಇರಬೇಕು.
ಅದೆಷ್ಟೋ ಸಲ ಒಬ್ಬನೇ ನಡೆವಾಗ ನಿನ್ನ ಪಕ್ಕದಲ್ಲೇ ನಡೆದಂತೆ ಅನ್ಸುತ್ತೆ. ಆಗೆಲ್ಲ ನಿನ್ನ ಕೈ ಸ್ಪರ್ಶಕ್ಕೆ ಹಂಬಲಿಸಿದ್ದೇನೆ. ಕೈ ಹಿಡಿದು ನಡೆದಂತೆ ಕನಸು ಕಂಡಿದ್ದೇನೆ. ಪ್ರತಿ ಮಳೆಯಲ್ಲೂ ಒಂದೇ ಕೊಡೆಯಲ್ಲಿ ನಡೆದಾಡಿದ ಹಾಗೇ ಅದೆಷ್ಟೋ ದಿನ ನಿನ್ನ ಭುಜಕ್ಕೆ ಭುಜ ತಾಕಿಸಿ ನಡೆದಿದ್ದೇನೆ! ಆ ಬೆಚ್ಚಗಿನ ಕಿಡಿಯಲ್ಲಿ ಮಳೆಯ ಚಳಿ ಗಾಳಿಯನ್ನೇ ಮರೆತಿದ್ದೇನೆ. ಇದನ್ನೂ ಓದಿ: ಮನಸ್ಸಿಗೆ ತುಂಬಾ ಇಷ್ಟವಾದವನು ನೀನು..!

ಈ ಪ್ರೀತಿ ಅಂದ್ರೆ ಅದೆಷ್ಟು ಬಣ್ಣ, ಅದೆಷ್ಟು ಕಲರ್‌ಫುಲ್ ಕನಸಿನ ಕಲರವ? ನಿನ್ನ ನಗುವಿಗೆ ಒಂದು ಬಣ್ಣ, ಬೇಸರಕ್ಕೆ ಒಂದು ಬಣ್ಣ, ಸಿಟ್ಟಿಗೆ ಇನ್ನೊಂದು ಬಣ್ಣ, ನೀ ಕನಸಲ್ಲಿ ಕೊಡೋ ಮುತ್ತಿಗೆ ಮತ್ತೇರಿಸೋ ಬಣ್ಣ! ಅದೆಷ್ಟು ಕಲಾತ್ಮಕ ಚಿತ್ತಾರ ಈ ಒಲವು. ನಿನ್ನನ್ನ ಈ ರೀತಿ ಅದೆಷ್ಟು ಗಮನಿಸಿದಿನಿ ಗೊತ್ತಾ? ಹಾಗೆಲ್ಲ ನಿನ್ನನ್ನ ನೋಡುವಾಗ, ಕಲಾವಿದನೊಬ್ಬ ನಿನ್ನನ್ನ ʻನನ್ನ ಕಲ್ಪನೆಗೆʼ ಮನದ ಗೋಡೆಯಲ್ಲಿ ಬಿಡಿಸಿಟ್ಟಂತಹ ಭಾವವೇ ಕಾಡುತ್ತೆ.
ಹೀಗೆ ನಿನ್ನನ್ನು ಕನಸಲ್ಲಾಗಲಿ, ನನಸಲ್ಲಾಗಲಿ ಮುಟ್ಟಿದಾಗೆಲ್ಲ ಎದೆಗೆ ಪ್ರೇಮದ ಬಣ್ಣ, ಗಂಧವೇ ತಾಕುತ್ತದೆ. ಇನ್ನೂ ಆಗಲ್ಲ, ಈ ಕನಸಿನ ಕೋಟೆ ಒಡೆದು ಎಲ್ಲಾ ನಿನ್ನ ಮುಂದೆ ಹೇಳಿ ಬಿಡ್ಬೇಕು. ಹೀಗೆಲ್ಲ ಕನಸಲ್ಲಿ ಕಾಡುವ ನಿನ್ನ ವಿರುದ್ಧ ನಿನಗೆ ದೂರು ಕೊಟ್ಟು ಬಿಡ್ಬೇಕು. ಆ ದೂರಿಗೆ ನೀನೇ ಹೃದಯದ ಮೂಲೆಗಳಲ್ಲಿ ತನಿಖೆ ನಡೆಸಿ, ನಾವಿಬ್ಬರು ಏನಾಗಬೇಕು ಎಂಬ ವರದಿ ಕೊಡ್ಬೇಕು!
ಯಾಕಂದ್ರೆ ನನ್ನ ಪಾಲಿಗೆ ನೀನು ಸ್ನೇಹಿತೆ ಮಾತ್ರ ಅಲ್ಲ, ನಿನ್ನ ಕಳ್ಳ ಕಣ್ಣುಗಳಂತೂ ನನ್ನನ್ನು ಸ್ನೇಹಿತನಂತೆ ನೋಡುತ್ತಲೇ ಇಲ್ಲ. ಹಾಗಿದ್ರೂ ಯಾಕೆ ಬರಿ ಫ್ರೆಂಡ್ಸ್ ಅಂತ ಹೃದಯ ಸಮುದ್ರದಲ್ಲಿ ಪ್ರೇಮ ನೌಕೆಯನ್ನ ಮುಳುಗಿಸೋದು? ನಮ್ಮ ಮನಸ್ಸಿನ ಎಲ್ಲಾ ಎಲ್ಲೆಗಳನ್ನೂ ಮೀರಿ ಒಂದು ಹೆಜ್ಜೆ ಮುಂದೆಯೇ ಹೋಗಿ ಪ್ರೇಮಿಸೋಣ ಏನಂತಿಯಾ? ಇದನ್ನೂ ಓದಿ: ನಿನಗಾಗಿ ಕಾಯ್ದಿರಿಸಿದ ಹೃದಯವಿದು ಅಂತ ನೀನ್ಯಾಕೆ ಹೇಳ್ತಿಲ್ಲ?
ಇಂತಿ ನಿನ್ನ ಪ್ರೀತಿಯ ಹುಡುಗ
