ನವದೆಹಲಿ: ಪಾಕ್ ಉಗ್ರ ನೆಲೆ ಧ್ವಂಸಗೊಳಿಸಿದ್ದ ಆಪರೇಷನ್ ಸಿಂಧೂರದ (Operation Sindoor) ಮತ್ತೊಂದು ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ವೆಸ್ಟರ್ನ್ ಕಮಾಂಡ್ (Indian Army) ಹರಿಬಿಟ್ಟಿದೆ.
ಉಗ್ರರ ವಿರುದ್ಧದ ಕಾರ್ಯಾಚರಣೆಯ ಪ್ಲ್ಯಾನ್, ತರಬೇತಿ ಮತ್ತು ಕಾರ್ಯಾಚರಣೆ ಕುರಿತಾದ ವಿಡಿಯೋ ಇದಾಗಿದೆ. ವಿಡಿಯೋದಲ್ಲಿ ಪಹಲ್ಗಾಮ್ ದಾಳಿಗೆ (Pahalgam attack) ಇದು ಪ್ರತೀಕಾರವಲ್ಲ, ನ್ಯಾಯ ಎಂದು ಸೇನೆ ಹೇಳಿಕೊಂಡಿದೆ. ಇನ್ನೂ ಆಪರೇಷನ್ ಸಿಂಧೂರವನ್ನು ಹೇಗೆ ಯೋಜಿಸಲಾಯಿತು, ತರಬೇತಿ ನೀಡಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಸೇನೆಯ ವೆಸ್ಟರ್ನ್ ಕಮಾಂಡ್ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
Planned, trained & executed.
Justice served.@adgpi@prodefencechan1 pic.twitter.com/Hx42p0nnon
— Western Command – Indian Army (@westerncomd_IA) May 18, 2025
ವೀಡಿಯೋದಲ್ಲಿ ಪಾಕ್ ಪ್ರದೇಶದ ಮೇಲೆ ಮಿಲಿಟರಿ ದಾಳಿ ನಡೆಸುವ ದೃಶ್ಯ ಇದೆ. ಅಲ್ಲದೇ ಒಬ್ಬ ಸೈನಿಕ, ಆಪರೇಷನ್ ಸಿಂಧೂರ ಪಹಲ್ಗಾಮ್ ದಾಳಿಯೊಂದಿಗೆ ಪ್ರಾರಂಭವಾಯಿತು. ಇದು ನಮ್ಮ ಕೋಪವಲ್ಲ, ಭವಿಷ್ಯದಲ್ಲಿ ನೆನಪಿನಲ್ಲಿ ಉಳಿಯುವ ಪಾಠವನ್ನು ಕಲಿಸುವ ಸಂಕಲ್ಪ. ಇದು ನ್ಯಾಯ, ಸೇಡಡಲ್ಲ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್‌ನ (Pahalgam) ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿತ್ತು. ಭಾರತ ನಡೆಸಿದ ವಾಯುದಾಳಿಯಲ್ಲಿ (Air Strike) 100 ಉಗ್ರರ ಹತ್ಯೆ ಮಾಡಲಾಗಿತ್ತು.
ಇನ್ನೂ ಉಗ್ರ ಪೋಷಕ ಪಾಕ್ ವಿರುದ್ಧ ಜಾಗತೀಕ ಮಟ್ಟದಲ್ಲಿ ಪಾಕ್ ಮುಖವಾಡ ಕಳಚಲು ಭಾರತ ಮುಂದಾಗಿದೆ. ಇದಕ್ಕಾಗಿ ವಿದೇಶಗಳಿಗೆ ಕೇಂದ್ರ ಸರ್ಕಾರ ಸಂಸದ ಶಶಿ ತರೂರ್ ನೇತೃತ್ವದ ಸರ್ವ ಪಕ್ಷಗಳ ನಿಯೋಗವನ್ನು ಕಳುಹಿಸಲು ಮುಂದಾಗಿದೆ.