ರಾಮನಗರ: ಸಿಎಂ ಅವರ ಸ್ವಕ್ಷೇತ್ರದಲ್ಲೇ ತೀವ್ರ ಬರ ಪರಿಸ್ಥಿತಿ ಇದ್ದು, ಇದುವರೆಗೂ ಬಂದು ರೈತರ ಸಮಸ್ಯೆ ಆಲಿಸಿಲ್ಲ. ಹಾಗಾಗಿ ಸಿಎಂ ಕ್ಷೇತ್ರದಿಂದಲೇ ರೈತ ಸ್ವಾಭಿಮಾನ ಯಾತ್ರೆಯನ್ನು (Raitha Swabhimana Yatra) ಆರಂಭಿಸಿದ್ದೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.
ಕನಕಪುರ ಪಟ್ಟಣದ ರೈಸ್ ಮಿಲ್ ಶಿವಾನಂದ ಸರ್ಕಲ್ ನಿಂದ ಆರಂಭವಾದ ಜೆಡಿಎಸ್ ರೈತ ಸ್ವಾಭಿಮಾನ ಪಾದಯಾತ್ರೆ ಚೆನ್ನಬಸಪ್ಪ ವೃತ್ತದಲ್ಲಿ ಅಂತ್ಯಗೊಂಡಿತ್ತು. ಬಳಿಕ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಆವರಿಸಿದ್ದು, ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ, ಕುಡಿಯಲು ಕೆರೆ-ಕಟ್ಟೆಗಳಲ್ಲೂ ನೀರಿಲ್ಲದಂತಾಗಿದೆ. ಆದರೂ ರಾಜ್ಯ ಸರ್ಕಾರ ಬರ ಪರಿಹಾರ ಘೋಷಣೆ ಮಾಡಲು ಮೀನಾಮೇಷ ಎಣಿಸುತ್ತಾ, ಕೇಂದ್ರದ ಕಡೆ ಕೈ ತೋರಿಸಿ ಸುಮ್ಮನೆ ಕುಳಿತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಜಮೀನು, ಅನುಮತಿಗೆ ಸಿಎಂ ಡಿಕೆಶಿ ಮನವಿ
ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ನಾಡಿನ ರೈತರ ಹೆಸರೇಳಿ ಸರ್ಕಾರ ರಚನೆ ಮಾಡಿದರೂ, ಮೂರುವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನ ಹಾಕುವ ರೈತನ ಬದುಕು ಬೀದಿಗೆ ಬಂದಿದೆ. ಸರ್ಕಾರದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಮಾತ್ರ ಬದಲಿಸಿದ್ದಾರೆ ಹೊರತು, ರೈತರ ಸಮಸ್ಯೆ ಆಲಿಸಿಲ್ಲ. ಅವರು ರಿಯಲ್ ಎಸ್ಟೇಟ್ ಮಾಡುವುದರಲ್ಲಿ ಬ್ಯುಸಿ ಇದ್ದಾರೆ, ರೈತರ ಬಗ್ಗೆ ಚಿಂತೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮುಂದಿನ ಬಾರಿ ಪ್ರದೀಪ್ ಈಶ್ವರ್ಗೆ ಟಿಕೆಟ್ ಕೊಡ್ಬೇಡಿ – ಸ್ವಪಕ್ಷೀಯರಿಂದಲೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು
ಬಡವರ ಬಗ್ಗೆ ಅರ್ಥ ಮಾಡಿಕೊಳ್ಳಲು ಮಾತೃ ಹೃದಯ ಬೇಕು. ಆ ಹೃದಯ ಇರುವುದು ಕುಮಾರಣ್ಣನಿಗೆ ಮಾತ್ರ. ಅತ್ಯಲ್ಪ ಅವಧಿಯ ಆಡಳಿತ ಮಾಡಿದರೂ ಕುಮಾರಣ್ಣ ನಾಡಿನ ಜನರ, ರೈತರ, ಹೆಣ್ಣು ಮಕ್ಕಳ, ಶೋಷಿತರ ನೋವಿಗೆ ಸ್ಪಂದಿಸಿದ್ದಾರೆ. ನಿಮ್ಮ ಜಿಲ್ಲೆಯವರು ಸಿಎಂ ಆಗಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ನಾವೆಲ್ಲರೂ ನೀವು ಸಿಎಂ ಆಗಿರುವುದಕ್ಕೆ ಹೊಟ್ಟೆಕಿಚ್ಚು ಪಡುವುದಿಲ್ಲ. ಇಲ್ಲಿ ನಿಮಗೆ ಮತ ಹಾಕಿರುವ ಜನತೆ ಇದ್ದಾರೆ, ಅವರ ಪರವಾಗಿ ಕೆಲಸ ಮಾಡಿ. ನಿಮಗೆ ನಾವೇ ಶಾಲು, ಹಾರ ಹಾಕಿ ಸನ್ಮಾನ ಮಾಡುತ್ತೇವೆ. ಆದರೆ ಕಳೆದ ಹಲವು ದಿನಗಳಿಂದ ಬೈರಮಂಗಲ ಮಹಿಳೆಯರಿಗೆ ಕಣ್ಣೀರು ಹಾಕಿಸಿದ್ದೀರಿ, ಬಹಳ ದಿನ ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು. ಇದನ್ನೂ ಓದಿ: ಮೈಸೂರು ದಸರಾ – ಯತೀಂದ್ರ ಅಬ್ಬರಕ್ಕೆ ಡಿಕೆಶಿ ಬ್ರೇಕ್!
ರಾಜ್ಯದ 234 ತಾಲೂಕುಗಳಲ್ಲಿ 217 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದೀರಿ. ವರದಿ ಬಂದು ಮೂರು ತಿಂಗಳಾದರೂ ಬರ ಎಂದು ಘೋಷಿಸಲು ಮೀನಾಮೇಷ ಎಣಿಸುತ್ತಿದ್ದೀರಿ. ಉಳುಮೆ, ಬೀಜ, ಗೊಬ್ಬರ, ಕೂಲಿ ಎಂದು ಎಕರೆಗೆ 50 ಸಾವಿರ ಖರ್ಚಾಗುತ್ತಿದೆ. ನೀವು ಕೊಡುತ್ತಿರುವುದು ಕೇವಲ 2500 ರೂಪಾಯಿ ಬರ ಪರಿಹಾರ. ಇದು ಬರೀ ಘೋಷಣೆ ಮಾತ್ರ. ಸಿದ್ದರಾಮಣ್ಣ ಬಜೆಟ್ ಮಾಡಿ ಹೋದ ಬಳಿಕ ಖಜಾನೆಯಲ್ಲಿ ಹಣವೇ ಇಲ್ಲ. ಹೊಸ ಘೋಷಣೆ ಮಾಡಬೇಡಿ ಎಂದು ಆರ್ಥಿಕ ಇಲಾಖೆಯೇ ಹೇಳಿದೆ. ಇದು ದಿವಾಳಿಯಾದ ಸರ್ಕಾರ. ಗ್ಯಾರಂಟಿ ಹೆಸರಲ್ಲಿ ಹಣವನ್ನು ಗುಳುಂ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರದ ಮಧ್ಯಸ್ಥಿಕೆ ವಹಿಸಿ: ಡಿಕೆಶಿ ಮನವಿ
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ರೈತರ ಸಮಸ್ಯೆ ಆಲಿಸುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಕುಮಾರಣ್ಣನಿಗೆ ಒಂದು ಅವಕಾಶ ಕೊಡಿ ಎಂದು ಕನಕಪುರದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದರು. ಇದನ್ನೂ ಓದಿ: ಬಾಕಿ ಟ್ರಾಫಿಕ್ ಚಲನ್ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್

