ನವದೆಹಲಿ: ಸಂಚಾರ ನಿಯಮ(Traffic Fine) ಉಲ್ಲಂಘನೆಯ ಬಾಕಿ ಇ-ಚಲನ್ (e-challan) ದಂಡವನ್ನು ವಸೂಲಿ ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಾಕಿ ಚಲನ್ಗಳನ್ನು ವಿದ್ಯುತ್ ಬಿಲ್ಗಳೊಂದಿಗೆ(Electricity Bills) ಜೋಡಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್(Supreme Court) ಸೋಮವಾರ ಮಹತ್ವದ ಸಲಹೆ ನೀಡಿದೆ.
ಟ್ರಾಫಿಕ್ ಉಲ್ಲಂಘನೆಗಳ ಎಲೆಕ್ಟ್ರಾನಿಕ್ ಜಾರಿ ಹಾಗೂ ಬಾಕಿ ಉಳಿದಿರುವ ದಂಡದ ವಸೂಲಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ. ಪಾರ್ದೀವಾಲಾ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠವು ಈ ಸಲಹೆಯನ್ನು ಮುಂದಿಟ್ಟಿದೆ.
ಕೇವಲ ಇ-ಚಲನ್ಗಳನ್ನು ವಿತರಿಸುವುದು ಸಾಕಾಗುವುದಿಲ್ಲ. ಜನರು ಸಂಚಾರ ದಂಡವನ್ನು ಪಾವತಿಸದಿದ್ದರೆ ಅದನ್ನು ವಿದ್ಯುತ್ ಬಾಕಿ ಬಿಲ್ಗೆ ಸೇರಿಸಿ. ಅವರು ವಿದ್ಯುತ್ ಬಿಲ್ ಪಾವತಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಸಂಚಾರ ನಿಯಮ ದಂಡದ ವಸೂಲಿಗೊಂದು ದಾರಿಯನ್ನು ಕಂಡುಕೊಳ್ಳಲೇಬೇಕು ಎಂದು ಪೀಠ ಹೇಳಿದೆ.
ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 45,000 ಕೋಟಿ ರೂಪಾಯಿಗಳಷ್ಟು ಇ-ಚಲನ್ ಮೊತ್ತ ಬಾಕಿ ಉಳಿದಿದ್ದು, ಈ ಪೈಕಿ ಕೇವಲ 25,000 ಕೋಟಿ ರೂಪಾಯಿಗಳನ್ನು ಮಾತ್ರ ಸಂಗ್ರಹಿಸಲಾಗಿದೆ ಎಂದು ವಿಚಾರಣೆ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ಇದನ್ನೂ ಓದಿ: ಯುಪಿಐ ಎಂಡಿಆರ್ ಶುಲ್ಕ: ಹೊಸ ನಿಯಮಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ
ಚಲನ್ ಬಾಕಿ ಇರುವ ವಾಹನ ಮಾಲೀಕರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸುವುದು. ದಂಡ ಪಾವತಿಯಾಗುವವರೆಗೂ ವಾಹನ ನೋಂದಣಿ ಪ್ರಮಾಣಪತ್ರ (RC) ನವೀಕರಣ, ಫಿಟ್ನೆಸ್ ಪ್ರಮಾಣಪತ್ರ ಮತ್ತು ಮಾಲಿನ್ಯ ನಿಯಂತ್ರಣ (PUC) ಪ್ರಮಾಣಪತ್ರ ನೀಡುವುದನ್ನು ನಿರ್ಬಂಧಿಸುವುದು. ನಕಲಿ ಆರ್ಸಿ ನೀಡುವುದು ಮತ್ತು ವಾಹನದ ಮಾಲೀಕತ್ವ ವರ್ಗಾವಣೆಯನ್ನು ತಡೆಹಿಡಿಯುವುದು. ಬಾಕಿ ಉಳಿಸಿಕೊಂಡ ವಾಹನಗಳನ್ನು ಕೇಂದ್ರ ಸರ್ಕಾರದ ‘ಪರಿವಾಹನ್’ (Parivahan) ಪೋರ್ಟಲ್ನಲ್ಲಿ ಕಪ್ಪುಪಟ್ಟಿಗೆ (Blacklist) ಸೇರಿಸುವಂತೆ ಸಲಹೆ ನೀಡಿತು.
ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹಾಗೂ ವಸೂಲಾಗದೆ ಉಳಿದಿರುವ ಬೃಹತ್ ಮೊತ್ತದ ಇ-ಚಲನ್ ಹಣವನ್ನು ಸಮರ್ಥವಾಗಿ ಸಂಗ್ರಹಿಸಲು ಈ ಕ್ರಮಗಳನ್ನು ಚರ್ಚಿಸಲಾಗಿದೆ. ಇವು ವಿಚಾರಣೆ ವೇಳೆ ನ್ಯಾಯಾಲಯ ನೀಡಿರುವ ಸಲಹೆಗಳಷ್ಟೇ ಆಗಿದ್ದು, ಅಂತಿಮ ಆದೇಶವಲ್ಲ.

