ನವದೆಹಲಿ: ಬೆಂಗಳೂರಿನ ವಿವಿಧ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರಿಸುವುದು ಹಾಗೂ ಅಗತ್ಯ ಅನುಮತಿಗಳನ್ನು ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D K Shivakumar) ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.
ನವದೆಹಲಿಯಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಸಿಎಂ, ಬೆಂಗಳೂರಿಗೆ ಸಂಬಂಧಿಸಿದ ಏಳು ಪ್ರಮುಖ ಪ್ರಸ್ತಾವನೆಗಳನ್ನು ಮುಂದಿಟ್ಟಿದ್ದಾರೆ.
730 ಎಕರೆ ಜಮೀನಿನಲ್ಲಿ ಪಬ್ಲಿಕ್ ಪಾರ್ಕ್
ಇಬ್ಬಲೂರು ಫೈರಿಂಗ್ ರೇಂಜ್ ಬಳಿ ರಕ್ಷಣಾ ಇಲಾಖೆಗೆ ಸೇರಿದ ಸುಮಾರು 730 ಎಕರೆ ಖಾಲಿ ಜಮೀನನ್ನು ಬೆಂಗಳೂರಿನ ಶಾಶ್ವತ ಪಬ್ಲಿಕ್ ಪಾರ್ಕ್ ಹಾಗೂ ಹಸಿರು ವಲಯವಾಗಿ ಅಭಿವೃದ್ಧಿಪಡಿಸಲು ಅವಕಾಶ ನೀಡುವಂತೆ ಸಿಎಂ ಮನವಿ ಮಾಡಿದ್ದಾರೆ.
ಈ ಜಮೀನಿನ ಮಾಲೀಕತ್ವವನ್ನು ರಾಜ್ಯ ಸರ್ಕಾರ ಕೇಳುತ್ತಿಲ್ಲ. ಪಬ್ಲಿಕ್ ಪಾರ್ಕ್ ಬಳಕೆಗೆ ಮಾತ್ರ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.
10 ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಅನುಮತಿ
ಬೆಂಗಳೂರಿನ ವಿವಿಧ ರಕ್ಷಣಾ ಪ್ರದೇಶಗಳಲ್ಲಿ ಸುಮಾರು 43.838 ಎಕರೆ ವ್ಯಾಪ್ತಿಯಲ್ಲಿ 10 ಅಧಿಸೂಚಿತ ಕೊಳಚೆ ಪ್ರದೇಶಗಳಿವೆ. ಮಳೆಗಾಲದಲ್ಲಿ ಈ ಪ್ರದೇಶಗಳು ಜಲಾವೃತವಾಗುತ್ತಿರುವ ಹಿನ್ನೆಲೆಯಲ್ಲಿ ದುರಸ್ತಿ ಹಾಗೂ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅನುಮತಿ ನೀಡುವಂತೆ ಕೋರಲಾಗಿದೆ.
ಈ ಜಮೀನಿಗೆ ಬದಲಾಗಿ ಸೂಕ್ತ ಸ್ಥಳದಲ್ಲಿ ಸಮಾನ ವಿಸ್ತೀರ್ಣದ ಸರ್ಕಾರಿ ಜಮೀನು ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಿಎಂ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಸುತ್ತಮುತ್ತ ಕಟ್ಟಡ ನಿರ್ಬಂಧ ಸಡಿಲಿಕೆಗೆ ಮನವಿ
ಹೆಚ್ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುನೆಲೆ ಸುತ್ತಮುತ್ತ ಕಟ್ಟಡ ನಿರ್ಮಾಣಕ್ಕೆ ಇರುವ ನಿರ್ಬಂಧಗಳನ್ನು ಪರಿಶೀಲಿಸುವಂತೆಯೂ ಮನವಿ ಮಾಡಲಾಗಿದೆ.
ರಕ್ಷಣಾ ವಿಮಾನ ನಿಲ್ದಾಣಗಳ 20 ಕಿ.ಮೀ. ವ್ಯಾಪ್ತಿಯಲ್ಲಿರುವ ನಿರ್ಬಂಧಗಳನ್ನು ಪರಿಷ್ಕರಿಸಿ, ಕಡ್ಡಾಯ ಎನ್ಒಸಿ ವ್ಯಾಪ್ತಿಯನ್ನು 15 ಕಿ.ಮೀ.ಗೆ ಸೀಮಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಕೋರಿದೆ. ವಿಮಾನ ಸುರಕ್ಷತೆಯ ಜೊತೆಗೆ ಬೆಂಗಳೂರಿನ ನಗರಾಭಿವೃದ್ಧಿಯ ಅಗತ್ಯವನ್ನೂ ಪರಿಗಣಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಗರ–ಸರ್ಜಾಪುರ ರಸ್ತೆ ವಿಸ್ತರಣೆ
ಲೋವರ್ ಅಗರಂ ರಸ್ತೆಯಿಂದ ಈಜಿಪುರ ಜಂಕ್ಷನ್ ಮೂಲಕ ಸರ್ಜಾಪುರ ರಸ್ತೆಯನ್ನು ಸಂಪರ್ಕಿಸುವ 24 ಮೀಟರ್ ಅಗಲದ ರಸ್ತೆ ನಿರ್ಮಾಣಕ್ಕೆ ರಕ್ಷಣಾ ಜಮೀನು ಅಗತ್ಯವಿದೆ.
ಆರಂಭದಲ್ಲಿ 10.07 ಎಕರೆ ಜಮೀನು ಕೋರಲಾಗಿತ್ತು. ಜಂಟಿ ಸಮೀಕ್ಷೆಯ ಬಳಿಕ ಅಗತ್ಯ ಜಮೀನಿನ ವಿಸ್ತೀರ್ಣವನ್ನು 13.709 ಎಕರೆಗೆ ಪರಿಷ್ಕರಿಸಿ ಅರ್ಜಿ ಸಲ್ಲಿಸಲಾಗಿದೆ.
ಈ ರಸ್ತೆ ನಿರ್ಮಾಣದಿಂದ ನಗರದ ಒಳ ಮತ್ತು ಹೊರ ವರ್ತುಲ ರಸ್ತೆಗಳ ಮೇಲಿನ ಸಂಚಾರದ ಒತ್ತಡ ಕಡಿಮೆಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಅವಳಿ ಸುರಂಗ ಯೋಜನೆಗೆ 2.039 ಎಕರೆ
ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ವರೆಗೆ ಉದ್ದೇಶಿಸಿರುವ ಬೆಂಗಳೂರು ಅರ್ಬನ್ ವೆಹಿಕ್ಯುಲರ್ ಟ್ವಿನ್ ಟನಲ್ ಪ್ರಾಜೆಕ್ಟ್ಗೆ ಹೆಬ್ಬಾಳ ಡಿಫೆನ್ಸ್ ಡೈರಿ ಫಾರ್ಮ್ ವ್ಯಾಪ್ತಿಯಲ್ಲಿ 2.039 ಎಕರೆ ರಕ್ಷಣಾ ಜಮೀನು ಅಗತ್ಯವಿದೆ.
ರಕ್ಷಣಾ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರ ಕೋರಿದೆ. ಜಮೀನಿನ ಬೆಲೆಯ ಶೇ.33ರಷ್ಟು, ಅಂದರೆ ಸುಮಾರು ₹60.72 ಕೋಟಿ ಲೈಸೆನ್ಸ್ ಶುಲ್ಕ ಪಾವತಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ, ಶುಲ್ಕವನ್ನು ಶೇ.2ಕ್ಕೆ ಇಳಿಸುವಂತೆ ಸಿಎಂ ಮನವಿ ಮಾಡಿದ್ದಾರೆ.
ಸರೋವರ ಲೇಔಟ್ಗೆ ಲಿಂಕ್ ರಸ್ತೆ
ಬಳ್ಳಾರಿ ರಸ್ತೆಯಿಂದ ಸರೋವರ ಲೇಔಟ್ಗೆ ನೇರ ಸಂಪರ್ಕ ಕಲ್ಪಿಸುವ 18 ಮೀಟರ್ ಅಗಲದ ಲಿಂಕ್ ರಸ್ತೆ ನಿರ್ಮಾಣಕ್ಕೂ ರಕ್ಷಣಾ ಜಮೀನು ಅಗತ್ಯವಿದೆ.
ಈ ಯೋಜನೆಗಾಗಿ 6.837 ಎಕರೆ ಜಮೀನು ಹಸ್ತಾಂತರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.
ಮೇಕ್ರಿ ಸರ್ಕಲ್ ರಸ್ತೆ ಅಗಲೀಕರಣ
ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ಬಳಿ ರಸ್ತೆ ಅಗಲೀಕರಣಕ್ಕೆ DGQA ಮತ್ತು PRTC ವ್ಯಾಪ್ತಿಯ 0.775 ಎಕರೆ ರಕ್ಷಣಾ ಜಮೀನು ಅಗತ್ಯವಿದೆ.
ಪ್ರಸ್ತುತ ಇರುವ ದ್ವಿಪಥ ರಸ್ತೆಯನ್ನು ಮೂರು ಪಥದ ರಸ್ತೆಯಾಗಿ ವಿಸ್ತರಿಸುವುದರಿಂದ ಮೇಕ್ರಿ ಸರ್ಕಲ್ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದನ್ನೂಓದಿ: ಬಾಕಿ ಟ್ರಾಫಿಕ್ ಚಲನ್ ವಸೂಲಿಗೆ ವಿದ್ಯುತ್ ಬಿಲ್ ಲಿಂಕ್ ಮಾಡಿ: ಸುಪ್ರೀಂ ಕೋರ್ಟ್
ಬೆಂಗಳೂರಿನ ರಸ್ತೆ, ಸುರಂಗ, ಪಾರ್ಕ್ ಹಾಗೂ ಇತರ ನಗರ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಈ ಏಳು ಪ್ರಸ್ತಾವನೆಗಳಿಗೆ ಶೀಘ್ರ ಅನುಮತಿ ನೀಡಬೇಕು ಮತ್ತು ಅಗತ್ಯವಿರುವ ರಕ್ಷಣಾ ಜಮೀನಿನ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.ಇದನ್ನೂಓದಿ: ಮುಂದಿನ ಬಾರಿ ಪ್ರದೀಪ್ ಈಶ್ವರ್ಗೆ ಟಿಕೆಟ್ ಕೊಡ್ಬೇಡಿ – ಸ್ವಪಕ್ಷೀಯರಿಂದಲೇ ಕೆಪಿಸಿಸಿ ಅಧ್ಯಕ್ಷರಿಗೆ ದೂರು

