– ನಾಲ್ಕು ನಿರ್ಣಯಗಳ ಅಂಗೀಕಾರ
ಬೆಂಗಳೂರು: ಸರ್ಕಾರ ಉಳಿಸಿಕೊಳ್ಳುವ ಶಪಥ ಸೇರಿದಂತೆ ಪ್ರಮುಖ ನಾಲ್ಕು ನಿರ್ಣಯಗಳನ್ನು ಜೆಡಿಎಸ್ ಶಾಸಕಾಂಗ ಪಕ್ಷದ (ಜೆಡಿಎಲ್‍ಪಿ) ಸಭೆಯಲ್ಲಿ ಕೈಗೊಳ್ಳಲಾಗಿದೆ.
ಬೆಂಗಳೂರಿನ ಜೆಪಿ ನಗರದ ಸಿಎಂ ಕುಮಾರಸ್ವಾಮಿ ಅವರ ನಿವಾಸದಲ್ಲಿ ಮಂಗಳವಾರ ಜೆಡಿಎಲ್‍ಪಿ ಸಭೆ ನಡೆಯಿತು. ಕುಮಾರಸ್ವಾಮಿಯವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್.ವಿಶ್ವನಾಥ್ ಸೇರಿದಂತೆ ಪಕ್ಷದ ಸಚಿವರು, ಶಾಸಕರು, ನಾಯಕರು ಭಾಗವಹಿಸಿದ್ದರು.
Advertisement
Advertisement
ಸರ್ಕಾರವನ್ನು ಉಳಿಸಿಕೊಂಡು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ಜೆಡಿಎಸ್ ಶಾಸಕರಿಂದ ಎಲ್ಲಾ ರೀತಿಯ ಬೆಂಬಲ ನೀಡಬೇಕು. ಎಚ್.ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ವಿಚಾರ ಪ್ರಸ್ತಾಪ ಸರಿಯಲ್ಲ. ಯಾವುದೇ ಕಾರಣಕ್ಕೂ ವಿಶ್ವನಾಥ್ ರಾಜೀನಾಮೆ ಅಂಗೀಕಾರ ಬೇಡ ಎಂದು ಶಾಸಕರು ಒತ್ತಾಯಿಸಿದ್ದಾರೆ. ಈ ವಿಚಾರ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರ ವಿವೇಚನೆಗೆ ಬಿಟ್ಟಿದ್ದು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
ಲೋಕಸಭಾ ಚುನಾವಣೆ ಫಲಿತಾಂಶ ಸರ್ಕಾರಕ್ಕೆ ಸಂಬಂಧಿಸಿದ್ದಲ್ಲ. ಅದು ಸರ್ಕಾರದ ಮೇಲೆ ಪರಿಣಾಮ ಬೀರಲ್ಲ. ಹಾಗಾಗಿ ಎಲ್ಲಾ ಶಾಸಕರು ಸರ್ಕಾರಕ್ಕೆ ಬೆಂಬಲ ಕೊಡಬೇಕು. ನಾನು ಗ್ರಾಮವಾಸ್ತವ್ಯ ಮೂಲಕ ಮತ್ತೆ ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಅವರು ಸಭೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಸಂಪುಟ ಪುನಾರಚನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶಾಸಕರು ಹೇಳಿದ್ದಾರೆ. ಸಿಎಂ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಅಗತ್ಯವಿದ್ದರೆ ನಾವು ಮಂತ್ರಿಗಿರಿಗೆ ರಾಜೀನಾಮೆ ಕೊಡಲು ಸಿದ್ಧ ಎಂದು ಸಚಿವರು ಬೆಂಬಲ ಸೂಚಿಸಿದ್ದಾರೆ.
ನಿಮ್ಮ ಏನೇ ಸಮಸ್ಯೆ ಇದ್ದರೂ ಪರಿಹಾರ ಮಾಡೋಣ. ರಾಜೀನಾಮೆ ವಾಪಸ್ ಪಡೆಯಿರಿ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಸಮ್ಮಿಶ್ರ ಸರ್ಕಾರವಿರುವಾಗ ಇಂತಹ ನಿರ್ಧಾರಗಳನ್ನು ಕೈಗೊಳ್ಳುವುದು ಸರಿಯಲ್ಲ. ಇದು ನಮ್ಮ ಪಕ್ಷಕ್ಕಲ್ಲದೇ ಮಿತ್ರ ಪಕ್ಷಕ್ಕೂ ಮುಜುಗರ ತರುತ್ತದೆ. ನಿಮ್ಮ ಅಸಮಾಧಾನ ಏನೇ ಇದ್ದರೂ ಸರಿ ಮಾಡೋಣ ಎಂದು ಎಚ್.ಡಿ.ದೇವೇಗೌಡ ಅವರು ಮನವೊಲಿಕೆಗೆ ಯತ್ನಿಸಿದರು ಎನ್ನಲಾಗಿದೆ.
ಎಚ್.ಡಿ.ದೇವೇಗೌಡರ ಮಾತಿಗೂ ವಿಶ್ವನಾಥ್ ಒಪ್ಪಲಿಲ್ಲ. ಅಷ್ಟೇ ಅಲ್ಲದೆ ಯಾವುದೇ ಪ್ರತಿಕ್ರಿಯೆ ನೀಡದೆ ಕುಳಿತಿದ್ದರಂತೆ. ಇತ್ತ ಶಾಸಕರಿಂದಲೂ ಮನವೊಲಿಕೆಗೆ ಯತ್ನ ನಡೆಯಿತು. ಆದರೆ ವಿಶ್ವನಾಥ್ ಅವರು ಶಾಸಕರ ಮಾತಿಗೂ ಕ್ಯಾರೆ ಎನ್ನದೆ, ತಮ್ಮ ನಿರ್ಧಾರ ವಾಪಸ್ ಪಡೆಯಲು ನಿರಾಕರಿಸಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.