ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ (Gold Smuggling Case) ಒಂದು ವರ್ಷದಿಂದ ಜೈಲಿನಲ್ಲಿದ್ದ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ (Ranya Rao) ಅವರು ಇಂದು (ಏಪ್ರಿಲ್ 22) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ವಕೀಲರ ಕಪ್ಪು ಬಣ್ಣದ ಕಾರಿನಲ್ಲಿ ಜೈಲು ಆವರಣದಿಂದ ರನ್ಯಾರಾವ್ ಹೊರಬಂದಿದ್ದಾರೆ. ಮಾಧ್ಯಮವರ ಕಣ್ತಪ್ಪಿಸಲು ನ್ಯಾಷನಲ್ ಗೇಮ್ಸ್ ಆವರಣದಲ್ಲಿ ರನ್ಯಾರಾವ್ ಕಾರು ಚಾಲಕ 8 ಬಾರಿ ರೌಂಡ್ಸ್ ಹಾಕಿದ ಪ್ರಸಂಗವೂ ಸಂಜೆ ನಡೆಯಿತು.
ರನ್ಯಾ ರಾವ್ ಅವರ ವಿರುದ್ಧ ಹೇರಲಾಗಿದ್ದ ಕಠಿಣ ಕಾಫಿಪೋಸಾ (COFEPOSA – Conservation of Foreign Exchange and Prevention of Smuggling Activities Act) ಕಾಯ್ದೆಯ ಒಂದು ವರ್ಷದ ಅವಧಿಯು ಇಂದು ಪೂರ್ಣಗೊಂಡಿದೆ. ಈ ಹಿಂದೆಯೇ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದ್ದರೂ, ಕಾಫಿಪೋಸಾ ಕಾಯ್ದೆಯಡಿ ಅವರು ಜೈಲಿನಲ್ಲೇ ಇರಬೇಕಾಗಿತ್ತು.
102 ಕೋಟಿ ರೂಪಾಯಿ ಮೌಲ್ಯದ 100 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ಅಕ್ರಮವಾಗಿ ಸಾಗಿಸಿದ ಆರೋಪವನ್ನು ರನ್ಯಾ ರಾವ್ ಎದುರಿಸುತ್ತಿದ್ದಾರೆ. 2025ರ ಮಾರ್ಚ್ ತಿಂಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ (DRI) ಅಧಿಕಾರಿಗಳು ಇವರನ್ನು ಬಂಧಿಸಿದ್ದರು.
ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅವರು ದೇಶ ಬಿಟ್ಟು ಹೋಗುವಂತಿಲ್ಲ ಮತ್ತು ತನಿಖೆಗೆ ಸಹಕರಿಸಬೇಕು ಎಂಬ ನಿಬಂಧನೆಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಪ್ರೇಮಾ ನಂಬರ್ ಬ್ಲಾಕ್, ಮಾಜಿ ಲವರ್ ಸಂಪರ್ಕದಲ್ಲಿದ್ದ ಕಿರಣ್ – ಬ್ಯಾಡರಹಳ್ಳಿ ಕೇಸ್‌ಗೆ ಹೊಸ ಟ್ವಿಸ್ಟ್
ಏನಿದು ಕಾಫಿಪೋಸಾ ಕಾಯ್ದೆ?
ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಇದರ ಮೂಲ ಉದ್ದೇಶವಾಗಿದೆ.
ಆರೋಪಿಯು ಜಾಮೀನು ಪಡೆದು ಹೊರಗೆ ಬಂದರೆ ನಿರಂತರವಾಗಿ ಮತ್ತೆ ಕಳ್ಳ ಸಾಗಾಣಿಕೆ ಮಾಡುತ್ತಾರೆ. ಅಲ್ಲದೇ ಜೈಲಿನಿಂದ ಬಂದ ಬಳಿಕ ತಪ್ಪಿಸಿಕೊಳ್ಳಬಹುದು. ತನಿಖೆಗೆ ಸರಿಯಾಗಿ ಸಹಕಾರ ಕೊಡದೇ, ನಿರಂತರವಾಗಿ ಸ್ಮಗ್ಲಿಂಗ್‌ನಲ್ಲಿ ಮುಂದುವರೆಯುತ್ತಾರೆ ಎಂದು ಕಾಯ್ದೆ ಜಾರಿಗೊಳಿಸಲಾಗುತ್ತದೆ.
ಸಾಮಾನ್ಯವಾಗಿ ಈ ಕಾಯ್ದೆಯಡಿ ಬಂಧನಕ್ಕೊಳಗಾದವರನ್ನು 1 ವರ್ಷದವರೆಗೆ ಜೈಲಿನಲ್ಲಿ ಇರಿಸಬಹುದು. ಗಂಭೀರ ಪ್ರಕರಣಗಳಲ್ಲಿ ಇದನ್ನು 2 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.
ಈ ಕಾಯ್ದೆಯಡಿ ಬಂಧನಕ್ಕೊಳಗಾದವರಿಗೆ ಸಾಮಾನ್ಯ ಕ್ರಿಮಿನಲ್ ಪ್ರಕರಣಗಳಂತೆ ಸುಲಭವಾಗಿ ಜಾಮೀನು ಸಿಗುವುದಿಲ್ಲ. ಸಲಹಾ ಮಂಡಳಿಯ ಶಿಫಾರಸು ಇಲ್ಲಿ ನಿರ್ಣಾಯಕವಾಗಿರುತ್ತದೆ.
ವಿದೇಶಿ ವಿನಿಮಯವನ್ನು ಉಳಿಸುವುದು ಮತ್ತು ದೇಶದ ಆರ್ಥಿಕತೆಗೆ ಧಕ್ಕೆ ತರುವ ಕಳ್ಳಸಾಗಣೆ ಚಟುವಟಿಕೆಗಳನ್ನು ತಡೆಯುವುದು ಈ ಕಾಯ್ದೆಯ ಮುಖ್ಯ ಗುರಿ.



