ಬೆಂಗಳೂರು: ಯಡಿಯೂರಪ್ಪನವರ (B.S Yediyurappa) ಅಭಿಮಾನೋತ್ಸವ (Abhimanotsava) ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಏಪ್ರಿಲ್ 26ರಂದು ಬೆಳಿಗ್ಗೆ 10 ಗಂಟೆಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ (Govind Karjol) ಅವರು ತಿಳಿಸಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂಮಿಪೂಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರನ್ನು ಆಹ್ವಾನಿಸಿದ್ದೇವೆ. ಅವರು, ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಸ್ಥಳಗಳಲ್ಲಿ ಪೆಂಡಾಲ್, ಸ್ಟೇಜ್ ಮುಂತಾದ ವ್ಯವಸ್ಥೆಗಳನ್ನು ಪ್ರಾರಂಭಿಸಲು ಭೂಮಿಪೂಜೆ ನಡೆಯಲಿದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‌ಗೆ ಮುಸ್ಲಿಮರ ತಲಾಖ್ ಎಚ್ಚರಿಕೆ – ತಪ್ಪಾಗಿದ್ದರೆ ಸರಿಪಡಿಸಿಕೊಳ್ಳೋಣ ಎಂದ ಪರಮೇಶ್ವರ್

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜ್ಯವನ್ನು ಸುತ್ತಿದ್ದಾರೆ. ರೈತರ ಪರವಾಗಿ ಹೋರಾಡಿ, ದೀನದಲಿತರಿಗೆ ನ್ಯಾಯ ಒದಗಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರ ಜೀವನ ಮತ್ತು ಸಮಾಜಸೇವೆ ಕುರಿತು ಅವರ ಅಭಿಮಾನೋತ್ಸವ ಆಚರಿಸಲು ತೀರ್ಮಾನಿಸಿದ್ದೇವೆ. ಈ ಅಭಿಮಾನೋತ್ಸವವು ಚಿತ್ರದುರ್ಗದಲ್ಲಿ ನಡೆಯಲಿದೆ. ಮೇ 9 ರಂದು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೇಶದ ಗೃಹಮಂತ್ರಿ ಅಮಿತ್ ಶಾ ಅವರು ನೆರವೇರಿಸಿ ಯಡಿಯೂರಪ್ಪ ಅವರನ್ನು ಸನ್ಮಾನಿಸಲಿದ್ದಾರೆ.
ಅಭಿಮಾನೋತ್ಸವದ ಹಿಂದಿನ ದಿನ ಅಂದರೆ 8ರಂದು ಸಂಜೆ 6 ಗಂಟೆಗೆ ಯಡಿಯೂರಪ್ಪನವರ ಪುರಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ತಂಡಗಳನ್ನು ರಚಿಸಲಾಗಿದೆ. ನಾಡಿನ ಎಲ್ಲಾ ಮಠಾಧೀಶರು, ಮಾಜಿ ಮುಖ್ಯಮಂತ್ರಿಗಳು, ಸಚಿವರು ಮತ್ತು ಗಣ್ಯಮಾನ್ಯರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. ಯಡಿಯೂರಪ್ಪ ಅವರನ್ನು ಬಲ್ಲ ಸಾಹಿತಿಗಳು, ಒಡನಾಡಿಗಳು, ಕಲಾವಿದರು ಸೇರಿ ಸಮಾಜದ ಎಲ್ಲ ರಂಗದವರು ಭಾಗವಹಿಸುತ್ತಾರೆ ಎಂದು ಹೇಳಿದರು. ಅಲ್ಲದೇ ಸಾರ್ವಜನಿಕರು, ರೈತಾಪಿ ವರ್ಗದವರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಚಿತ್ರದುರ್ಗವು ಕರ್ನಾಟಕದ ಕೇಂದ್ರ ಬಿಂದು. ಆದ್ದರಿಂದ ಆ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಶ್ನೆಗೆ ಉತ್ತರ ನೀಡಿದರು. ಯಡಿಯೂರಪ್ಪ ಅವರು ಜನನಾಯಕರು. ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರು ಎಂದು ಹೇಳಿದರು. ಜನತಾದಳದಿಂದ ಕಾಂಗ್ರೆಸ್ಸಿಗೆ ಬಂದ ಸಿದ್ದರಾಮಯ್ಯನವರು ಬೇರೆಯವರ ಹೆಗಲ ಮೇಲೆ ಕುಳಿತು ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ. ನಮ್ಮದು ಹಾಗಲ್ಲ; ಯಡಿಯೂರಪ್ಪನವರೇ ಕಟ್ಟಿ ಬೆಳೆಸಿದ ಪಕ್ಷ ಇದು. ಜನರ ಉತ್ಸವ ನಮ್ಮದು ಎಂದರು. ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗಿದ್ರೂ ಗೈರು ಅಂತ ತೋರಿಸಿ ಅಂಧ ವಿದ್ಯಾರ್ಥಿನಿ ಫೇಲ್ ಮಾಡಿ ಶಿಕ್ಷಣ ಇಲಾಖೆ ಯಡವಟ್ಟು



