ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ತೊಡಗಿಕೊಂಡಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮತ್ತೆ ಇಡಿ ವಿಚಾರಣೆಗೆ ಕರೆದಿದೆಯಂತೆ. ಹಾಗಾಗಿ ಇತ್ತೀಚೆಗೆ ಅವರು ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿಲ್ಲ ಎನ್ನುವ ಸುದ್ದಿ ಹರಡಿದೆ. ಬೆಂಗಳೂರು ಮತ್ತು ಮುಂಬೈನಲ್ಲಿ ನಡೆದ ಸಿನಿಮಾದ ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಜಾಕ್ವೆಲಿನ್, ನಂತರ ಇಡಿ ವಿಚಾರಣೆಗೆ ಅವರು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ.
200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಆಪ್ತರಾಗಿದ್ದರು ಅನ್ನುವ ಕಾರಣಕ್ಕಾಗಿ ಅವರಿಗೂ ನೋಟಿಸ್ ನೀಡಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ಜಾಕ್ವೆಲಿನ್ ಗೆ ಸಾಕಷ್ಟು ಗಿಫ್ಟ್ ಗಳನ್ನು ಸುಕೇಶ್ ನೀಡಿದ್ದನ್ನು ಒಪ್ಪಿಕೊಂಡಿದ್ದರು. ಅಲ್ಲದೇ, ಆ ಎಲ್ಲ ಉಡುಗೊರೆಯನ್ನೂ ವಶಕ ಪಡೆಯಲಾಗಿದೆ. ಈಗಾಗಲೇ ಅನೇಕ ಬಾರಿ ಇಡಿ ವಿಚಾರಣೆ ಎದುರಿಸಿರುವ ಜಾಕ್ವೆಲಿನ್, ಎಲ್ಲವನ್ನೂ ಮರೆತು ವಿಕ್ರಾಂತ್ ರೋಣ ಪ್ರಚಾರದಲ್ಲಿ ತೊಡಗಿದ್ದರು. ಈ ಮಧ್ಯೆ ಮೊನ್ನೆಯೂ ಅವರು ವಿಚಾರಣೆಗೆ ಹೋಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಅಸ್ಸಾಂ ಪ್ರವಾಹ ಪೀಡಿತರ ಸಂಕಷ್ಟಕ್ಕೆ ಮಿಡಿದ ಆಮೀರ್ ಖಾನ್
ಇಡಿ ವಿಚಾರಣೆಗಾಗಿಯೇ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನುವ ಸುದ್ದಿ ಒಂದು ಕಡೆ ಕೇಳಿ ಬರುತ್ತಿದ್ದರೆ, ಮತ್ತೊಂದು ಕಡೆ ಅವರು ಬೇರೆ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರಿಂದ ಚೆನ್ನೈ, ಹೈದರಾಬಾದ್ ಪತ್ರಿಕಾಗೋಷ್ಠಿಗಳಲ್ಲಿ ಭಾಗಿ ಆಗಲು ಆಗಿಲ್ಲ ಎಂದು ವಿಕ್ರಾಂತ್ ರೋಣ ಚಿತ್ರತಂಡ ಹೇಳಿಕೊಂಡಿದೆ. ಇಡಿ ಕಾರಣದಿಂದಾಗಿ ಅವರು ಪ್ರಚಾರದಿಂದ ದೂರ ಉಳಿಯುತ್ತಿಲ್ಲ ಎಂದು ಸ್ಪಷ್ಟನೆ ಕೂಡ ಕೊಟ್ಟಿದೆ.