ಜೀವಕ್ಕಿಂತ ಹಣ ಮುಖ್ಯವೇ? ಟ್ರಾಫಿಕ್ ದಂಡ ಹೆಚ್ಚಳ ಪ್ರಶ್ನೆಗೆ ನಿತಿನ್ ಗಡ್ಕರಿ ಕಿಡಿ

Public TV
1 Min Read
Nitin Gadkari

-1.5 ಲಕ್ಷ ಜನರ ಸಾವಿನ ಬಗ್ಗೆ ಯಾಕೆ ಯೋಚಿಸುತ್ತಿಲ್ಲ

ನವದೆಹಲಿ: ಹೊಸ ಟ್ರಾಫಿಕ್ ದಂಡ ಹೆಚ್ಚಳ ಪ್ರಶ್ನೆಗೆ ಕಿಡಿಕಾರಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಜೀವಕ್ಕಿಂತ ಹಣ ಮುಖ್ಯವೇ ಎಂದು ಮರು ಪ್ರಶ್ನೆ ಮಾಡಿದ್ದಾರೆ.

ಬಿಎಸ್6 ಹೊಂಡಾ ಆಕ್ಟಿವಾ ಸ್ಕೂಟರ್ ಅನಾವರಣ ಕಾರ್ಯಕ್ರಮದ ಬಳಿಕ ಮಾತನಾಡಿದ ಕೇಂದ್ರ ಸಚಿವರು, ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ.65 ರಷ್ಟು 18-35 ವಯಸ್ಸಿನವರೇ ಇದ್ದಾರೆ. ಅಷ್ಟೇ ಅಲ್ಲದೆ ಪ್ರತಿ ವರ್ಷ 2 ಲಕ್ಷ ಜನರು ರಸ್ತೆ ಅಪಘಾತಗಳಿಂದ ಅಂಗವಿಕಲರಾಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:ಸ್ಲಿಪ್ಪರ್ ಹಾಕಿ ಬೈಕ್ ಓಡಿಸಿದ್ರೆ ಬೀಳುತ್ತೆ ಭಾರೀ ದಂಡ!

ಯುವಕರನ್ನು ಪ್ರಾಣಾಪಾಯದಿಂದ ರಕ್ಷಣೆ ಮಾಡಲು ಹಾಗೂ ಅಪಘಾತದಿಂದ ಅಂಗವಿಕಲತೆಗೆ ತುತ್ತಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹೊಸ ಟ್ರಾಫಿಕ್ ದಂಡವನ್ನು ಜಾರಿಗೆ ತರಲಾಗಿದೆ. ದಂಡವನ್ನು ಯಾವ ರೀತಿ ಅಳವಡಿಸಿಕೊಳ್ಳಬೇಕು ಎನ್ನುವುದು ಆಯಾಯಾ ರಾಜ್ಯ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ. ಸಂಗ್ರಹವಾದ ದಂಡದ ಮೊತ್ತವು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಟ್ರಾಫಿಕ್ ದಂಡ ಏರಿಕೆ ಉದ್ದೇಶ ಜನರ ಜೀವ ರಕ್ಷಣೆಗಾಗಿಯೇ ಹೊರತು ಸರ್ಕಾರಕ್ಕೆ ಆದಾಯ ತರುವುದಲ್ಲ ಎಂದು ಹೇಳಿದರು.  ಇದನ್ನೂ ಓದಿ:ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

ಸಂಚಾರ ನಿಯಮ ಉಲ್ಲಂಘಿಸುವ ಚಾಲಕರು, ಸವಾರರಿಗೆ 30 ವರ್ಷಗಳ ಹಿಂದೆ 100 ರೂ. ದಂಡ ವಿಧಿಸಲಾಗುತ್ತಿತ್ತು. ಆಗ 100 ರೂ.ಗೆ ಇದ್ದ ಮೌಲ್ಯವು ಈಗ ಎಷ್ಟಾಗಬಹುದು ನೀವೇ ಯೋಚನೆ ಮಾಡಿ. ಸಂಚಾರ ನಿಮಯವನ್ನು ಸರಿಯಾಗಿ ಜನರು ಪಾಲಿಸಿದರೆ ಯಾವುದೇ ದಂಡ ಪಾವತಿಸುವ ಅಗತ್ಯವಿರಲ್ಲ ಎಂದರು.

ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡದ ಮೊತ್ತವು ಹೆಚ್ಚಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಅನೇಕರು ಲೈಸನ್ಸ್, ಹೆಲ್ಮೆಟ್ ಪಡೆಯುತ್ತಿದ್ದಾರೆ. ತಮ್ಮ ವಾಹನಗಳ ದಾಖಲೆಗಳನ್ನು ಸರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

traffic 1

Share This Article
Leave a Comment

Leave a Reply

Your email address will not be published. Required fields are marked *