Thursday, 14th November 2019

ಸಂಚಾರ ನಿಯಮ ಉಲ್ಲಂಘಿಸಿ 86,500 ರೂ. ದಂಡ ತೆತ್ತ ಲಾರಿ ಚಾಲಕ

ಭುವನೇಶ್ವರ: ಲಾರಿ ಚಾಲಕನೊಬ್ಬ ಸಂಚಾರ ನಿಯಮ ಉಲ್ಲಂಘಿಸಿ ಬರೋಬ್ಬರಿ 86,500 ರೂ. ದಂಡ ಪಾವತಿಸಿದ ಪ್ರಸಂಗ ಒಡಿಶಾದ ಸಂಬಲ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

ಲಾರಿ ಜಾಲಕ ಅಶೋಕ್ ಜಾದವ್ ಅವರಿಗೆ ಸಂಚಾರ ಪೊಲೀಸರು ಸೆಪ್ಟೆಂಬರ್ 3ರಂದು ದಂಡ ವಿಧಿಸಿದ್ದರು. ಆದರೆ ಶನಿವಾರ ಸಂಜೆಯಿಂದ ಅಶೋಕ್ ಜಾದವ್ ಅವರಿಗೆ ಪೊಲೀಸರು ನೀಡಿದ್ದ ಚಲನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ನೂತನ ಮೋಟಾರು ಕಾಯ್ದೆ ಜಾರಿಯಾದ ಬಳಿಕ ಅಶೋಕ್ ಜಾದವ್ ಅತ್ಯಧಿಕ ದಂಡ ಪಾವತಿಸಿದ ದೇಶದ ಚಾಲಕ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಬಲ್‍ಪುರ್ ಪ್ರಾದೇಶಿಕ ಸಾರಿಗೆ ಅಧಿಕಾರಿ ಲಲಿತ್ ಮೋಹನ್ ಬೆಹೆರಾ ಅವರು, ಸೆಪ್ಟೆಂಬರ್ 3ರಂದು ಅಧಿಕ ಸರಕು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ತಡೆದು ತಪಾಸಣೆ ಮಾಡಲಾಯಿತು. ಈ ವೇಳೆ ಅನೇಕ ಸಂಚಾರ ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದವು ಎಂದು ತಿಳಿಸಿದ್ದಾರೆ.

ಅಶೋಕ್ ಜಾದವ್ ತನ್ನ ಲಾರಿಯನ್ನು ತಾನು ಚಾಲನೆ ಮಾಡದೆ ಅನಧಿಕೃತ ವ್ಯಕ್ತಿಗೆ ನೀಡಿರುವುದಕ್ಕೆ 5,000 ರೂ., ಲೈಸೆನ್ಸ್ ಇಲ್ಲದೆ ವಾಹನ ಚಾಲನೆ 5,000 ರೂ., 18 ಟನ್ ಅಧಿಕ ಸರಕು ಸಾಗಣೆಗೆ 56,000 ರೂ., ನಿಯಮ ಬಾಹಿರವಾಗಿ ಸರಕು ಹೊತ್ತೊಯ್ಯುವುದಕ್ಕೆ 20,000 ರೂ. ಹಾಗೂ ಸಾಮಾನ್ಯ ಅಪರಾಧಕ್ಕೆ 500 ರೂ. ದಂಡ ವಿಧಿಸಲಾಗಿದೆ. ದಂಡದ ಒಟ್ಟು ಮೊತ್ತವು 86,500 ರೂ. ಆಗಿದೆ ಎಂದು ಲಲಿತ್ ಮೋಹನ್ ಬೆಹೆರಾ ಹೇಳಿದ್ದಾರೆ.

ಈ ಹಿಂದೆ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಸವಾರನೊಬ್ಬನಿಗೆ 23 ಸಾವಿರ ರೂ. ದಂಡ ವಿಧಿಸಿದ್ದರು. ಇದರ ಬೆನ್ನಲ್ಲೇ ಸಂಚಾರ ನಿಯಮ ಉಲ್ಲಂಘಿಸಿದ್ದ ದೆಹಲಿಯ ಆಟೋ ಚಾಲಕನಿಗೆ ಟ್ರಾಫಿಕ್ ಪೊಲೀಸರು ಬರೋಬ್ಬರಿ 32,500 ರೂ. ದಂಡ ವಿಧಿಸಿದ್ದರು.

Leave a Reply

Your email address will not be published. Required fields are marked *