ಟೆಹ್ರಾನ್: ಮೂವರು ಭಾರತೀಯರ ಸಾವಿಗೆ ಕಾರಣವಾದ ವ್ಯಾಪಾರಿ ಹಡಗುಗಳ ಮೇಲಿನ ಅಮೆರಿಕ ದಾಳಿಯನ್ನು ಇರಾನ್ (Iran) ತೀವ್ರವಾಗಿ ಖಂಡಿಸಿದೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಅವರು, ಮೃತ ಭಾರತೀಯ ನಾವಿಕರ (Indian Sailors) ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ದಾಳಿಗಳಿಗೆ ಅಮೆರಿಕವನ್ನು ಹೊಣೆಗಾರರನ್ನಾಗಿ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಅಮೆರಿಕ ಸಮರ್ಥನೆ – `ಜಲವೀರ್’ ಮೇಲಿನ ದಾಳಿ ವೀಡಿಯೋ ರಿಲೀಸ್
ಭಾರತೀಯ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ (America) ಕ್ರೂರ ದಾಳಿ ನಡೆಸಿ, ಮೂರು ಭಾರತೀಯ ಪ್ರಜೆಗಳನ್ನು ಕೊಂದಿದೆ. ಇದು ಅಮೆರಿಕದ ನಿರಂತರ ಸಶಸ್ತ್ರ ದರೋಡೆ ಮತ್ತು ರಾಜ್ಯ ಕಡಲ್ಗಳ್ಳತನದ ನೀತಿಯ ಸ್ಪಷ್ಟ ಪುರಾವೆಯಾಗಿದೆ. ಹತ್ಯೆಗೀಡಾದ ಭಾರತೀಯ ನಾವಿಕರ ಕುಟುಂಬಗಳು ಮತ್ತು ಸ್ನೇಹಿತರಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ ಎಂದು ಬಘೈ X ನಲ್ಲಿ ಬರೆದಿದ್ದಾರೆ.
ಅಂತರರಾಷ್ಟ್ರೀಯ ಸಮುದಾಯವು ಯುನೈಟೆಡ್ ಸ್ಟೇಟ್ಸ್ ಅನ್ನು ತನ್ನ ಕಾನೂನುಬಾಹಿರ ವರ್ತನೆಗೆ ಹೊಣೆಗಾರರನ್ನಾಗಿ ಮಾಡಬೇಕು. ಇದು ಜಾಗತಿಕ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯನ್ನುಂಟು ಮಾಡುತ್ತಲೇ ಸಾಗುತ್ತಿದೆ. ನೌಕಾಯಾನ ಸ್ವಾತಂತ್ರ್ಯಕ್ಕೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಯುಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿಯನ್ನು ಒಳಗೊಂಡ ಮೂರು ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನೌಕಾಪಡೆ ದಾಳಿ ನಡೆಸಿದೆ. ಜೂನ್ 8 ಮತ್ತು ಜೂನ್ 10 ರಂದು ಪಲಾವ್ ಧ್ವಜ ಹೊತ್ತ ತೈಲ ಟ್ಯಾಂಕರ್‌ಗಳಾದ ಮಾರಿಸವ್ಕ್ಸ್ ಮತ್ತು ಸೆಟ್ಟೆಬೆಲ್ಲೊ ಮೇಲೆ ದಾಳಿ ನಡೆಸಲಾಯಿತು. ಗುರುವಾರ 20 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಗಿನಿಯಾ-ಬಿಸ್ಸೌ ಧ್ವಜ ಹೊತ್ತ ಬಿಟುಮೆನ್ ಟ್ಯಾಂಕರ್ ಎಂಟಿ ಜಲವೀರ್ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವಿಗೀಡಾಗಿದ್ದಾರೆ. ಇದನ್ನೂ ಓದಿ: ಹಡಗು ಮುಳುಗುತ್ತಿದೆ.. ಸಹಾಯ ಮಾಡಿ: ಅಮೆರಿಕ ಕ್ಷಿಪಣಿ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಸಿಬ್ಬಂದಿ ಕರೆ
