ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಗಳ ವೇಳೆ ಕ್ರಿಕೆಟ್ ಭ್ರಷ್ಟಾಚಾರ ಮತ್ತು ಮಾಹಿತಿ ಸೋರಿಕೆಗೆ ಬ್ರೇಕ್ ಹಾಕಲು ಬಿಸಿಸಿಐ (BCCI) ಅತ್ಯಂತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಮೈದಾನದಲ್ಲಿ ಹಾಗೂ ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಅತ್ಯಾಧುನಿಕ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು (Smart Sunglasses) ಧರಿಸುವುದನ್ನು ಬಿಸಿಸಿಐನ ಆಂಟಿ-ಕರಪ್ಷನ್ ಯುನಿಟ್ (ACU) ಸಂಪೂರ್ಣವಾಗಿ ನಿಷೇಧಿಸಿದೆ.
ಕೇವಲ ಮೈದಾನ ಮಾತ್ರವಲ್ಲದೆ, ಕ್ರೀಡಾಂಗಣದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಿಎಂಒಎ (PMOA – Players and Match Officials Area) ವಲಯಕ್ಕೂ ಇಂತಹ ಸ್ಮಾರ್ಟ್ ಗ್ಲಾಸ್‌ಗಳನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.
ಇತ್ತೀಚಿನ ಸ್ಮಾರ್ಟ್ ಸನ್‌ಗ್ಲಾಸ್‌ಗಳಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ-ವಿಡಿಯೋ ಕಾಲಿಂಗ್, ರಹಸ್ಯ ಕ್ಯಾಮೆರಾ ಮತ್ತು ಟೆಕ್ಸ್ಟ್ ಮೆಸೇಜಿಂಗ್‌ನಂತಹ ಅತ್ಯಾಧುನಿಕ ತಂತ್ರಜ್ಞಾನ ಇರುತ್ತದೆ. ಹೀಗಾಗಿ ಬಿಸಿಸಿಐ ಇದನ್ನು ಕೇವಲ ಕಣ್ಣಿನ ರಕ್ಷಣೆಯ ಕನ್ನಡಕವಾಗಿ ನೋಡದೆ ಪ್ರಮುಖ ‘ಸಂವಹನ ಸಾಧನ’ ಎಂದು ಪರಿಗಣಿಸಿದೆ. ಪಂದ್ಯ ನಡೆಯುವಾಗ ಡ್ರೆಸ್ಸಿಂಗ್ ರೂಮ್ ಅಥವಾ ಡಗೌಟ್‌ನಿಂದ ಪಿಚ್ ಪರಿಸ್ಥಿತಿ, ತಂಡದ ತಂತ್ರಗಳು ಹಾಗೂ ಲೈವ್ ಅಪ್‌ಡೇಟ್‌ಗಳು ನೈಜ-ಸಮಯದಲ್ಲೇ (Real-time) ಹೊರಗಿನ ಬುಕ್ಕಿಗಳಿಗೆ ಸೋರಿಕೆಯಾಗುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: GT-RR ನಡುವೆ ಇಂದು `ಮಾಡು ಇಲ್ಲವೇ ಮಡಿ’ ಕದನ – ಗೆದ್ದ ತಂಡ ಆರ್‌ಸಿಬಿ ಜೊತೆ ಫೈನಲ್ ಕಣಕ್ಕೆ

ಎಲ್ಲೆಲ್ಲಿ ನಿಷೇಧ ಅನ್ವಯ?
ಆಟಗಾರರ ಡ್ರೆಸ್ಸಿಂಗ್ ರೂಮ್‌ಗಳು ಮತ್ತು ಟೀಮ್ ಡಗೌಟ್‌ಗಳು, ಅಂಪೈರ್ ಮತ್ತು ಮ್ಯಾಚ್ ರೆಫರಿಗಳ ಕೊಠಡಿಗಳು, ಪಂದ್ಯದ ವೇಳೆ ಆಟಗಾರರು ಮತ್ತು ಅಧಿಕಾರಿಗಳು ಕುಳಿತುಕೊಳ್ಳುವ ವಿಶೇಷ ಗ್ಯಾಲರಿಗಳು.
ನಿಯಮಗಳ ಪ್ರಕಾರ, ಪಂದ್ಯದ ದಿನದಂದು ಆಟಗಾರರು ಮತ್ತು ಸಪೋರ್ಟ್ ಸ್ಟಾಫ್ ಸಿಬ್ಬಂದಿ ಪಿಎಂಒಎ (PMOA) ವಲಯವನ್ನು ಪ್ರವೇಶಿಸುವ ಮುನ್ನವೇ ತಮ್ಮ ಮೊಬೈಲ್ ಫೋನ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳ ಜೊತೆಗೆ ಈ ಸ್ಮಾರ್ಟ್ ಸನ್‌ಗ್ಲಾಸ್‌ಗಳನ್ನು ಸಹ ಸೆಕ್ಯೂರಿಟಿ ಲೈಸನ್ ಆಫೀಸರ್ (SLO) ಬಳಿ ಜಮಾ ಮಾಡಬೇಕಾಗುತ್ತದೆ.
ತಪ್ಪು ಮಾಡಿದರೆ ಶಿಸ್ತು ಕ್ರಮ
ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿ ಸ್ಮಾರ್ಟ್ ಸಾಧನಗಳನ್ನು ಬಳಸುವುದು ಕಂಡುಬಂದರೆ ಆಟಗಾರರು ಅಥವಾ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಮತ್ತು ಭಾರೀ ಮೊತ್ತದ ದಂಡ ವಿಧಿಸಲಾಗುತ್ತದೆ. ಇತ್ತೀಚೆಗಷ್ಟೇ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಒಬ್ಬರು ಡಗೌಟ್‌ನಲ್ಲಿ ಮೊಬೈಲ್ ಬಳಸಿದ್ದಕ್ಕಾಗಿ ಬಿಸಿಸಿಐ 1 ಲಕ್ಷ ರೂ. ದಂಡ ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ನಿಷೇಧವು ಕೇವಲ ಬ್ಲೂಟೂತ್, ಕ್ಯಾಮೆರಾ ಅಥವಾ ಇಂಟರ್ನೆಟ್ ಸಂಪರ್ಕ ಹೊಂದಿರುವ ‘ಸ್ಮಾರ್ಟ್’ ಸನ್‌ಗ್ಲಾಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆಟಗಾರರು ಬಿಸಿಲಿನಿಂದ ರಕ್ಷಣೆ ಪಡೆಯಲು ಮೈದಾನದಲ್ಲಿ ಫೀಲ್ಡಿಂಗ್ ಮಾಡುವಾಗ ಧರಿಸುವ ಸಾಮಾನ್ಯ ಕ್ರೀಡಾ ಸನ್‌ಗ್ಲಾಸ್‌ಗಳಿಗೆ ಯಾವುದೇ ನಿಷೇಧ ಇರುವುದಿಲ್ಲ. ಇದನ್ನೂ ಓದಿ: ಆರ್‌ಸಿಬಿ ಪಂದ್ಯದಲ್ಲಿ ಅನುಷ್ಕಾ ಧರಿಸಿದ್ದ ಉಂಗುರ ವೈರಲ್ ಆಗ್ತಿರೋದೇಕೆ? – ಡಿವೈಸ್ ವಿಶೇಷತೆ ಏನು?

ನಿಷೇಧಿತ ಸಾಧನಗಳು ಯಾವುದು?
ಮೊಬೈಲ್ ಫೋನ್‌ಗಳು/ ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳು, ಬ್ಲೂಟೂತ್ ಇಯರ್‌ಫೋನ್‌ಗಳು/ ಇಯರ್‌ಪಾಡ್ಸ್/ ಹೆಡ್‌ಫೋನ್‌ಗಳು, ಇಂಟರ್ನೆಟ್ ಅಥವಾ ಬ್ಲೂಟೂತ್ ಸಂಪರ್ಕ ಹೊಂದಿರುವ ಫಿಟ್‌ನೆಸ್ ಬ್ಯಾಂಡ್‌ಗಳು, ಡಿಜಿಟಲ್ ಕ್ಯಾಮೆರಾಗಳು, ವಿಡಿಯೋ ರೆಕಾರ್ಡರ್‌ಗಳು ಮತ್ತು ಪೋರ್ಟಬಲ್ ಸ್ಪೀಕರ್‌ಗಳು, ಟ್ರಾನ್ಸಿಸ್ಟರ್‌ಗಳು ಮತ್ತು ರೇಡಿಯೋ ಸಾಧನಗಳು. ತಂಡದ ಅಧಿಕೃತ ಡೇಟಾ ಅನಾಲಿಷ್ಟ್‌ಗೆ ಮಾತ್ರ ಪಂದ್ಯದ ವಿಶ್ಲೇಷಣೆಗಾಗಿ ಒಂದು ಲ್ಯಾಪ್‌ಟಾಪ್ ಬಳಸಲು ಅನುಮತಿ ನೀಡಲಾಗಿದೆ.
ಯಾರಿಗೆ ವಿನಾಯಿತಿ?
ಲಾಗಿಸ್ಟಿಕ್ಸ್ ಮತ್ತು ತುರ್ತು ಆಡಳಿತಾತ್ಮಕ ಕೆಲಸಗಳಿಗಾಗಿ ತಂಡದ ಮ್ಯಾನೇಜರ್‌ಗೆ ಫೋನ್ ಬಳಸಲು ಅನುಮತಿ ಇರುತ್ತದೆ. ಆದರೆ ಅವರು ಅದನ್ನು ಕೇವಲ ಡ್ರೆಸ್ಸಿಂಗ್ ರೂಮ್ ಒಳಗಡೆ ಮಾತ್ರ ಬಳಸಬೇಕು, ಡಗೌಟ್‌ಗೆ ತರುವಂತಿಲ್ಲ. ಇದನ್ನೂ ಓದಿ: ಮೈಲಿಗಲ್ಲುಗಳ ಬೆನ್ನತ್ತಿದರೆ ವೃತ್ತಿಜೀವನ ಹಾಳಾಗುತ್ತೆ, ಶತಕ ಮಿಸ್ ಆಗಿದ್ದಕ್ಕೆ ಬೇಸರವಿಲ್ಲ: ಸೂರ್ಯವಂಶಿ
