ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿಂದು ಐಪಿಎಲ್ 2022ರ ಎಲಿಮಿನೇಟರ್ 2ನೇ ಪಂದ್ಯ ನಡೆಯಲಿದ್ದು, ಡುಪ್ಲೆಸಿ ಬಳಗಕ್ಕೆ ಕನ್ನಡಿಗ ರಾಹುಲ್ ನೇತೃತ್ವದ ಲಕ್ನೋ ತಂಡವು ಎದುರಾಗಲಿದೆ.
ಐಪಿಎಲ್‍ನಲ್ಲಿ ಇದೇ ಮೊದಲ ಬಾರಿ ಕಣಕ್ಕಿಳಿದಿರುವ ಹೊಸ ತಂಡ ಲಕ್ನೋ ಲೀಗ್ ಹಂತದಲ್ಲಿ ತನ್ನ ಚರಣದ 14 ಪಂದ್ಯಗಳನ್ನಾಡಿ 9ರಲ್ಲಿ ಜಯಗಳಿಸಿದ್ದು, 5 ಪಂದ್ಯಗಳಲ್ಲಿ ಸೋತಿದೆ. ಟೂರ್ನಿಯ ಉದ್ದಕ್ಕೂ ಉತ್ತಮ ಪ್ರರ್ದಶನ ತೋರಿದ ರಾಹುಲ್ 2 ಮತ್ತು ಕ್ವಿಂಟನ್ ಡಿಕಾಕ್ ಒಂದು ಶತಕ ಗಳಿಸಿದ್ದಾರೆ. ಕೋಲ್ಕತ್ತಾ ನೈಟ್‍ರೈಡರ್ಸ್ ಎದುರಿನ ಪಂದ್ಯದಲ್ಲಿ ಇವರಿಬ್ಬರೂ ಮೊದಲ ವಿಕೆಟ್ ಜೊತೆಯಾಟದಲ್ಲಿ ಅಜೇಯ 210 ರನ್ ಗಳಿಸಿ ದಾಖಲೆ ಬರೆದಿದ್ದರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಮಿಲ್ಲರ್ ಹ್ಯಾಟ್ರಿಕ್ ಸಿಕ್ಸ್ – ಫೈನಲ್‌ಗೆ ಗುಜರಾತ್ ಎಂಟ್ರಿ
ಎವಿನ್ ಲೂಯಿಸ್, ದೀಪಕ್ ಹೂಡಾ, ಆಲ್‍ರೌಂಡರ್‌ಗಳಾದ ಮಾರ್ಕಸ್ ಸ್ಟೊಯಿನಿಸ್ ಮತ್ತು ಜೇಸನ್ ಹೋಲ್ಡರ್ ಉತ್ತಮ ಫಾರ್ಮ್‍ನಲ್ಲಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆರಂಭಿಕ ಓವರ್‌ಗಳಲ್ಲಿಯೇ ವಿಕೆಟ್ ಗಳಿಸುವ ಆವೇಶ್ ಖಾನ್, ಮೊಹಸೀನ್ ಖಾನ್ ಮತ್ತು ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಮಾರಕ ಬೌಲಿಂಗ್ ಬೆಂಗಳೂರು ತಂಡಕ್ಕೆ ಸವಾಲಾಗಿ ನಿಂತಿದೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಮಿಂಚಿದ ತ್ರಿಪಾಠಿಗೆ ಯಾಕಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ? – ರೊಚ್ಚಿಗೆದ್ದ ಅಭಿಮಾನಿಗಳು
ಸತತ ವೈಫಲ್ಯಗಳ ನಂತರ ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಫಾರ್ಮ್‍ಗೆ ಮರಳಿರುವುದು ತಂಡದಲ್ಲಿ ಉತ್ಸಾಹ ಹೆಚ್ಚಿಸಿದೆ. ನಾಯಕ ಡುಪ್ಲೆಸಿ, ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ. ಆದರೆ ಬೌಲರ್‌ಗಳು ಸ್ಥಿರತೆ ಕಾಪಾಡಿಕೊಳ್ಳುವ ಸವಾಲು ತಂಡಕ್ಕೆ ಇದೆ. ಹರ್ಷಲ್ ಪಟೇಲ್, ಸ್ಪಿನ್ನರ್ ವಣಿಂದು ಹಸರಂಗಾ ಮತ್ತು ಜೋಶ್ ಹ್ಯಾಜಲ್‍ವುಡ್ ಅವರು ರಾಹುಲ್ ಪಡೆಯ ಅಬ್ಬರಕ್ಕೆ ತಡೆಯೊಡ್ಡುವಲ್ಲಿ ಸಫಲರಾದರೆ ಆರ್‌ಸಿಬಿಗೆ ಎರಡನೇ ಕ್ವಾಲಿಫೈಯರ್ ಪ್ರವೇಶಿಸುವ ಅವಕಾಶ ಲಭಿಸಬಹುದು.
ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಸೋತ ಕಾರಣಕ್ಕೆ ಆರ್‌ಸಿಬಿಯು ಹಾದಿ ಸುಗಮವಾಗಿತ್ತು. ಅದರಿಂದಾಗಿ ಸತತ ಮೂರನೇ ಆವೃತ್ತಿಯಲ್ಲಿಯೂ ಪ್ಲೇ ಆಫ್ ಪ್ರವೇಶಿಸಿದೆ.